ADVERTISEMENT

ಚಿಂತೆ ಇದ್ದವರಿಂದ ಸಾಧನೆ ಶೂನ್ಯ: ಪಂಡಿತಾರಾಧ್ಯ ಶ್ರೀ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2019, 10:03 IST
Last Updated 7 ನವೆಂಬರ್ 2019, 10:03 IST
ಹೊಸದುರ್ಗ ತಾಲ್ಲೂಕಿನ ಸಾಣೆಹಳ್ಳಿಯ ತರಳಬಾಳು ಶಾಖಾ ಮಠದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ನಾಟಕೋತ್ಸವದಲ್ಲಿ ಬುಧವಾರ ನಡೆದ 5ನೇ ದಿನದ ಚಿಂತನ ಕಾರ್ಯಕ್ರಮದಲ್ಲಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.
ಹೊಸದುರ್ಗ ತಾಲ್ಲೂಕಿನ ಸಾಣೆಹಳ್ಳಿಯ ತರಳಬಾಳು ಶಾಖಾ ಮಠದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ನಾಟಕೋತ್ಸವದಲ್ಲಿ ಬುಧವಾರ ನಡೆದ 5ನೇ ದಿನದ ಚಿಂತನ ಕಾರ್ಯಕ್ರಮದಲ್ಲಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.   

ಹೊಸದುರ್ಗ: ಯಾರ ಮನಸ್ಸಿನಲ್ಲಿ ಚಿಂತೆ ತುಂಬಿರುತ್ತದೋ ಅವರಿಂದ ಯಾವುದೇ ಸಾಧನೆ ನಿರೀಕ್ಷಿಸಲು ಆಗುವುದಿಲ್ಲ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಸಾಣೆಹಳ್ಳಿಯ ತರಳಬಾಳು ಶಾಖಾಮಠದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ನಾಟಕೋತ್ಸವದಲ್ಲಿ ಬುಧವಾರ ನಡೆದ 5ನೇ ದಿನದ ಚಿಂತನ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.

ಚಿತೆ ಮತ್ತು ಚಿಂತೆಗೆ ಕೇವಲ ಒಂದು ಸೊನ್ನೆಯ ವ್ಯತ್ಯಾಸ ಇದೆ. ಮನುಷ್ಯ ಚಿಂತೆಯ ಸಂತೆಯಲ್ಲಿಯೇ ಬೆಂದು ಹೋಗುತ್ತಿದ್ದಾನೆ. ಆದರೆ ಚಿಂತನೆ ನಮ್ಮ ಮನಸ್ಸಿಗೆ ಬೆಳಕು ನೀಡಿ ಸರಿಯಾದ ದಿಕ್ಕನ್ನು ತೋರಿಸುತ್ತದೆ. ಮನುಷ್ಯ ನೆಮ್ಮದಿಯಿಂದ ಬದುಕಲು ಕೇವಲ ಹಣ ಮುಖ್ಯವಲ್ಲ. ಆದರ್ಶ, ಮೌಲ್ಯಗಳು, ಸತ್ಯ, ನೀತಿ, ಪ್ರಾಮಾಣಿಕತೆ, ದುಡಿಮೆಯಂತಹ ಮೌಲ್ಯಗಳು ಬೇಕು. ಸರಳ ಜೀವನ ಸಂಕಟಗಳಿಂದ ಪಾರು ಮಾಡುತ್ತದೆ. ಸಂಪತ್ತು ಸಂಗ್ರಹ ಒಂದು ಪಾಪದ ಕೆಲಸ. ಹಣವನ್ನು ಸತ್ಯದ ತಳಹದಿಯ ಮೇಲೆ ಸಂಪಾದನೆ ಮಾಡಿದ್ದರೆ ಯಾವ ತೊಳಲಾಟಗಳೂ ಇರುವುದಿಲ್ಲ. ವಾಮಮಾರ್ಗದಿಂದ ಸಂಪತ್ತು ಸಂಗ್ರಹಿಸಿದರೆ ಸೆರೆವಾಸ ಅನುಭವಿಸಬೇಕಾಗುತ್ತದೆ ಎಂದರು.

ADVERTISEMENT

ನಿವೃತ್ತ ಬ್ಯಾಂಕ್ ವ್ಯವಸ್ಥಾಪಕಿ ನಾಗಲಾಂಬಿಕಾ ಕಲ್ಮಠ್ ಮಾತನಾಡಿ, ಹಣ ಸಾರ್ವತ್ರಿಕವಾಗಿ ಒಪ್ಪಿಕೊಂಡಿರುವ ಒಂದು ಸಾಧನ. ಜಗತ್ತಿನ ಎಲ್ಲ ದೇಶದ ಹಣವನ್ನು ಡಾಲರ್ ಮೌಲ್ಯಕ್ಕೆ ತುಲನೆ ಮಾಡಿ ನಿರ್ಧರಿಸಲಾಗುವುದು. ದುಡ್ಡೇ ದುಡ್ಡಿನ ಬೀಜ. ದುಡ್ಡಿನ ಮೂಲಕವೇ ದುಡ್ಡನ್ನು ದುಡಿಯಲು ಸಾಧ್ಯ. ನೈತಿಕವಾಗಿ ದುಡಿದ ದುಡ್ಡಿಗೆ ಹೆಚ್ಚು ಮೌಲ್ಯ ಇರುತ್ತದೆ. ದುಡ್ಡಿನ ಬಗ್ಗೆ ನಾವು ಕಾಳಜಿ ವಹಿಸಿದರೆ, ದುಡ್ಡು ನಮ್ಮನ್ನು ಕಾಪಾಡುತ್ತದೆ ಎಂದರು.

ಸಂಗೀತ ಶಿಕ್ಷಕ ಎಚ್.ಎಸ್.ನಾಗರಾಜ್ ಪ್ರಾರ್ಥಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.