ADVERTISEMENT

ಸಮಾಜಕ್ಕೆ ಸಾಲುಮರದ ತಿಮ್ಮಕ್ಕನ ಕೊಡುಗೆ ಅಪಾರ: ಎಚ್. ಆಂಜನೇಯ

ಸೀಬಾರದಲ್ಲಿ ನುಡಿನಮನ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 7:20 IST
Last Updated 17 ನವೆಂಬರ್ 2025, 7:20 IST
ಚಿತ್ರದುರ್ಗ ಸೀಬಾರದಲ್ಲಿ ಸಾಲುಮರದ ತಿಮ್ಮಕ್ಕ ನುಡಿನಮನ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಮಾಜಿ ಸಚಿವ ಎಚ್‌. ಆಂಜನೇಯ ಪುಷ್ಪನಮನ ಸಲ್ಲಿಸಿದರು
ಚಿತ್ರದುರ್ಗ ಸೀಬಾರದಲ್ಲಿ ಸಾಲುಮರದ ತಿಮ್ಮಕ್ಕ ನುಡಿನಮನ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಮಾಜಿ ಸಚಿವ ಎಚ್‌. ಆಂಜನೇಯ ಪುಷ್ಪನಮನ ಸಲ್ಲಿಸಿದರು   

ಚಿತ್ರದುರ್ಗ: ‘ಬದ್ಧತೆ, ಪರಿಸರ ಕಾಳಜಿ, ಗಿಡ–ಮರಗಳ ಪ್ರಾಮುಖ್ಯತೆಯ ಅರಿವು ಮೂಡಿಸಿದ ಸಾಲುಮರದ ತಿಮ್ಮಕ್ಕ ಸಮಾಜಕ್ಕೆ ನೀಡಿದ ಕೊಡುಗೆ ಬಹುದೊಡ್ಡದು. ಆದ್ದರಿಂದ ರಾಜ್ಯದ ಯಾವುದಾದರು ಒಂದು ವಿಶ್ವವಿದ್ಯಾಲಯಕ್ಕೆ ತಿಮ್ಮಕ್ಕ ಹೆಸರನ್ನು ನಾಮಕರಣ ಮಾಡಬೇಕು’ ಎಂದು ಮಾಜಿ ಸಚಿವ ಎಚ್. ಆಂಜನೇಯ ಒತ್ತಾಯಿಸಿದರು.

ತಾಲ್ಲೂಕಿನ ಸೀಬಾರದಲ್ಲಿ ಕರ್ನಾಟಕ ಮಾದಾರ ಮಹಾಸಭಾದಿಂದ ಭಾನುವಾರ ಆಯೋಜಿಸಿದ್ದ ಸಾಲುಮರದ ತಿಮ್ಮಕ್ಕ ನುಡಿನಮನ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

‘ವೃಕ್ಷಮಾತೆ ಎಂದೇ ಗುರುತಿಸಿಕೊಂಡಿರುವ ಸಾಲುಮರದ ತಿಮ್ಮಕ್ಕಳ ಹೆಸರನ್ನು ವಿವಿಧ ಕಾರ್ಯಗಳ ಮೂಲಕ ಸ್ಮರಣೀಯಗೊಳಿಸಬೇಕಿದೆ’ ಎಂದು ಹೇಳಿದರು.

ADVERTISEMENT

‘ಸಾವಿರ ಎಕರೆಗೂ ಹೆಚ್ಚು ಭೂಮಿಯಲ್ಲಿ ಅವರ ಹೆಸರಿನಲ್ಲಿ ರಾಷ್ಟ್ರೀಯ ಉದ್ಯಾನವನ ಸ್ಥಾಪಿಸಬೇಕು. ಅವರ ಪುತ್ರನ ನೇತೃತ್ವದಲ್ಲಿ ಟ್ರಸ್ಟ್‌ ಸ್ಥಾಪಿಸಲು ಒಂದೆರಡು ಎಕರೆ ಭೂಮಿ ನೀಡಬೇಕು. ಈ ಮೂಲಕ ಪರಿಸರ ಜಾಗೃತಿ ಮೂಡಿಸಲು ಸರ್ಕಾರ ಕ್ರಮಕೈಗೊಳ್ಳಬೇಕು’ ಎಂದರು.

‘ಬುಡಕಟ್ಟು, ಹಳ್ಳಿ ಜನರು ಪ್ರಕೃತಿಯೊಂದಿಗೆ ಬದುಕು ಕಟ್ಟಿಕೊಂಡವರು. ಮರಗಳನ್ನೇ ದೇವರ ಸ್ಥಾನದಲ್ಲಿಟ್ಟು ಪೂಜಿಸಿದವರು. ನಮ್ಮ ಪೂರ್ವಿಕರು ಪರಿಸರ ರಕ್ಷಣೆಗೆ ಟೊಂಕ ಕಟ್ಟಿ ನಿಂತ ಮಹನೀಯರು. ಒಂದು ಹೆಜ್ಜೆ ಮುಂದಿಟ್ಟ ತಿಮ್ಮಕ್ಕ ತನಗೆ ಮಕ್ಕಳಿಲ್ಲದ ಕೊರಗು ನೀಗಿಸಿಕೊಳ್ಳಲು ಸಸಿ ನೆಟ್ಟು ಅವುಗಳನ್ನು ಸಲುಹಿದ ರೀತಿಯೇ ಸಮಾಜಕ್ಕೆ ಉತ್ತಮ ಸಂದೇಶ’ ಎಂದು ತಿಳಿಸಿದರು.

‘ಪತಿ ಸಾವಿನ ಬಳಿಕ ಸಂಕಷ್ಟಕ್ಕೆ ಸಿಲುಕಿದರೂ ಸಸಿ ನೆಟ್ಟು ಪೋಷಿಸುವ ಕಾರ್ಯ ಕೈಬಿಡದೆ ಮುಂದುವರಿಸಿದ್ದು ಸ್ಮರಣೀಯ. ಈ ಕಾರಣಕ್ಕೆ ತಿಮ್ಮಕ್ಕ ಸಾವಿನ ಬಳಿಕವೂ ಮರ–ಗಿಡಗಳಲ್ಲಿ ಅವರು ಸದಾ ಜೀವಂತವಾಗಿರುತ್ತಾರೆ’ ಎಂದರು.

‘ಈಚೆಗೆ ಅಭಿವೃದ್ಧಿ ಹೆಸರಲ್ಲಿ ಮರ–ಗಿಡಗಳನ್ನು ಕಡಿದರೂ ಇದಕ್ಕೆ ಪ್ರತಿಯಾಗಿ ಸಸಿಗಳನ್ನು ನೆಟ್ಟು ಪೋಷಿಸಬೇಕೆಂಬ ಕಾನೂನು ಸರ್ಕಾರ ಜಾರಿಗೊಳಿಸಿದೆ. ಆದರೆ, ಸಸಿ ನೆಟ್ಟ ಬಳಿಕ ಅವುಗಳ ಪೋಷಣೆ ಮರೆತು ಬಿಡುವ ಗುಣದಿಂದ ಪರಿಸರದಲ್ಲಿ ಏರುಪೇರಾಗುತ್ತಿದೆ. ಪರಿಣಾಮ ಮಳೆ ಕಡಿಮೆಯಾಗಿದೆ. ಶುದ್ಧಗಾಳಿಗಾಗಿ ಹಣ ಕೊಡುವಂತಹ ಪರಿಸ್ಥಿತಿ ಎದುರಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ಜಿಲ್ಲಾ ಸಹಕಾರ ಯೂನಿಯನ್‌ ಉಪಾಧ್ಯಕ್ಷ ಜೆ.ಆರ್‌. ರವಿಕುಮಾರ್‌, ಪತ್ರಕರ್ತ ಮೇಘ ಗಂಗಾಧರ ನಾಯ್ಕ, ವಕೀಲರಾದ ರವೀಂದ್ರ, ಉಮಾಪತಿ, ಪರಿಸರವಾದಿ ಇನಾಯತ್‌ ಷರೀಫ್, ಕಾಂಗ್ರೆಸ್ ಎಸ್ಸಿ ವಿಭಾಗದ ತಾಲ್ಲೂಕು ಘಟಕದ ಅಧ್ಯಕ್ಷ ಅನಿಲ್‌ ಕೋಟಿ, ಹೊಳಲ್ಕೆರೆ ಕಾಂಗ್ರೆಸ್ ಮಾಧ್ಯಮ ವಿಭಾಗದ ಕಿರಣ್‌ ಶಿವಪುರ, ಗ್ರಾಮ ಪಂಚಾಯತಿ ಮಾಜಿ ಸದಸ್ಯ ದಾದಾಪೀರ್‌, ಮಹಿಳಾ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಮುನೀರಾ, ಒಬಿಸಿ ಘಟಕದ ರಾಜ್ಯ ಕಾರ್ಯದರ್ಶಿ ಚಂದ್ರಶೇಖರ್ ಇದ್ದರು.

ಅಭಿವೃದ್ಧಿ ಪರಿಭಾಷೆ ಬದಲಾಗಬೇಕಿದೆ. ಪ್ರಾಣಿಪಕ್ಷಿಗಳು ಗಿಡ-ಮರ ಪ್ರಕೃತಿ ರಕ್ಷಣೆಗೆ ನಾವೆಲ್ಲರೂ ಕೈಜೋಡಿಸಬೇಕಿದೆ. ತಿಮ್ಮಕ್ಕಳನ್ನು ನಾವುಗಳು ಮಾದರಿಯನ್ನಾಗಿಸಿಕೊಂಡರೇ ನೆಮ್ಮದಿ ಬದುಕು ಸಾಧ್ಯವಾಗಲಿದೆ.
-ಎಚ್‌.ಆಂಜನೇಯ, ಮಾಜಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.