ADVERTISEMENT

ಚಿತ್ರದುರ್ಗ: ಸಚಿವ ಸ್ಥಾನದಿಂದ ಶ್ರೀರಾಮುಲು ವಜಾಕ್ಕೆ ತಿಪ್ಪೇಸ್ವಾಮಿ ಒತ್ತಾಯ

ಕೋವಿಡ್‌ ಪರಿಕರ ಖರೀದಿಯಲ್ಲಿ ಅವ್ಯವಹಾರ ಆರೋಪ

​ಪ್ರಜಾವಾಣಿ ವಾರ್ತೆ
Published 16 ಜುಲೈ 2020, 16:58 IST
Last Updated 16 ಜುಲೈ 2020, 16:58 IST
ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ
ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ   

ನಾಯಕನಹಟ್ಟಿ: ಕೋವಿಡ್ ನಿಯಂತ್ರಣಕ್ಕೆ ಸಲಕರಣೆಗಳ ಖರೀದಿಯಲ್ಲಿ ಭಾರಿ ಅವ್ಯವಹಾರ ನಡೆದಿದ್ದು, ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಮಾಜಿ ಶಾಸಕ ಎಸ್. ತಿಪ್ಪೇಸ್ವಾಮಿ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದಾರೆ.

ಸಮೀಪದ ನೇರಲಗುಂಟೆ ಗ್ರಾಮದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಲಕರಣೆಗಳ ಖರೀದಿಯಲ್ಲಿ ಸುಮಾರು ₹ 2 ಸಾವಿರ ಕೋಟಿ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇದರಲ್ಲಿ ಆರೋಗ್ಯ ಸಚಿವರ ಕೈವಾಡವಿದೆ. ಸಾರ್ವಜನಿಕ ಲೆಕ್ಕ ಪರಿಶೋಧನಾ ಸಮಿತಿಯಲ್ಲಿ ಶಾಸಕ ಎಚ್.ಕೆ. ಪಾಟೀಲ್ ಅಧ್ಯಕ್ಷರಾಗಿದ್ದು, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳೇ ಇಲಾಖೆಯ ಅವ್ಯವಹಾರದ ಬಗ್ಗೆ ಪತ್ರ ನೀಡಿದ್ದಾರೆ. ಇದಕ್ಕೆಲ್ಲ ಆರೋಗ್ಯ ಸಚಿವರೇ ಹೊಣೆಗಾರರಾಗಿದ್ದಾರೆ’ ಎಂದು ದೂರಿದರು.

‘ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ಅವರಿಂದ ಇಡೀ ಬಿಜೆಪಿ ವ್ಯವಸ್ಥೆ ಕೆಟ್ಟು ಹೋಗಿ ಪಕ್ಷದ ವರ್ಚಸ್ಸು ಹಾಳಾಗಿತ್ತು. ಈಗಲೂ ಅದೇ ಆಗುತ್ತಿದೆ. ಕೂಡಲೇ ಶ್ರೀರಾಮುಲು ಅವರಿಂದ ರಾಜೀನಾಮೆ ಪಡೆದು ಪಕ್ಷದಿಂದ ಉಚ್ಚಾಟಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಶ್ರೀರಾಮುಲು ಅಭಿವೃದ್ಧಿ ಹೆಸರಿನಲ್ಲಿ ಬರಿ ಸುಳ್ಳು ಆಶ್ವಾಸನೆಗಳನ್ನು ಕ್ಷೇತ್ರದ ಜನರಿಗೆ ನೀಡುತ್ತಿದ್ದಾರೆ. ಯಾವುದೇ ಹೊಸ ಕಾಮಗಾರಿಗಳಿಗೆ ಚಾಲನೆ ನೀಡಿಲ್ಲ. ಭದ್ರಾ ಮೇಲ್ದಂಡೆ, ತುಂಗಭದ್ರಾ ಹಿನ್ನೀರು ಯೋಜನೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕಾರಾವಧಿಯಲ್ಲಿ ನಾನು ಮಂಜೂರು ಮಾಡಿಸಿದ್ದೆ. ಈಗ ಶ್ರೀರಾಮುಲು ತಾನೇ ಮಾಡಿದ್ದೇನೆ ಎಂದು ಸುಳ್ಳು ಹೇಳಿಕೆ ನೀಡುತ್ತಿದ್ದಾರೆ’ ಎಂದು ಆರೋಪಿಸಿದರು.

ನಿಗೂಢ ಸಾವಿನ ತನಿಖೆಯಾಗಲಿ: ‘ಸೆವೆನ್ ಹಿಲ್ಸ್‌ ಕ್ವಾರ್ಟಸ್‌ನಲ್ಲಿ ಶ್ರೀರಾಮುಲು ಆಪ್ತ ಸಹಾಯಕ ಮಹೇಶ್‌ ರೆಡ್ಡಿ ನಿಗೂಢವಾಗಿ ಸಾವಿಗೀಡಾಗಿದ್ದಾರೆ. ಇದು ಸಹಜ ಸಾವಲ್ಲ. ಶವದ ಮರಣೋತ್ತರ ಪರೀಕ್ಷೆ ನಡೆಸದೆ, ಕೋವಿಡ್‌ ನಿಯಮಾವಳಿಗಳನ್ನು ಗಾಳಿಗೆ ತೂರಿ ಶವವನ್ನು ಬಳ್ಳಾರಿಗೆ ತೆಗೆದುಕೊಂಡು ಹೋಗಿ ಕಾನೂನು ಬಾಹಿರವಾಗಿ ಅಂತ್ಯ ಸಂಸ್ಕಾರ ಮಾಡಲಾಗಿದೆ. ಮಹೇಶ್‌ ರೆಡ್ಡಿ ಪತ್ನಿಗೆ ಸರ್ಕಾರಿ ನೌಕರಿ, ಬಂಗಲೆ, ₹ 50 ಲಕ್ಷ ನೀಡುವುದಾಗಿ ಪ್ರಕರಣ ಮುಚ್ಚಿ ಹಾಕಲಾಗುತ್ತಿದೆ. ಹೀಗಾಗಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.