ADVERTISEMENT

ಧರ್ಮಪುರ | ಕುರಿಗಳಿಗೆ ಆಹಾರವಾದ ಟೊಮೆಟೊ!

ಧರ್ಮಪುರ ಹೋಬಳಿಯಲ್ಲಿ 2,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ; ದರ ಕುಸಿತ

ವಿ.ವೀರಣ್ಣ
Published 31 ಮಾರ್ಚ್ 2023, 7:08 IST
Last Updated 31 ಮಾರ್ಚ್ 2023, 7:08 IST
ಧರ್ಮಪುರ ಸಮೀಪದ ಶ್ರವಣಗೆರೆಯಲ್ಲಿ ಸಮೃದ್ಧವಾಗಿ ಬೆಳೆದಿರುವ ಟೊಮೆಟೊ ತೋಟದಲ್ಲಿ ರೈತ ನರಸಿಂಹಪ್ಪ (ಎಡಚಿತ್ರ). ಟೊಮೆಟೊ ಹಣ್ಣುಗಳನ್ನು ಕಿತ್ತು ಕುರಿಗೆ ಮೇವಾಗಿ ಹಾಕಿರುವುದು.
ಧರ್ಮಪುರ ಸಮೀಪದ ಶ್ರವಣಗೆರೆಯಲ್ಲಿ ಸಮೃದ್ಧವಾಗಿ ಬೆಳೆದಿರುವ ಟೊಮೆಟೊ ತೋಟದಲ್ಲಿ ರೈತ ನರಸಿಂಹಪ್ಪ (ಎಡಚಿತ್ರ). ಟೊಮೆಟೊ ಹಣ್ಣುಗಳನ್ನು ಕಿತ್ತು ಕುರಿಗೆ ಮೇವಾಗಿ ಹಾಕಿರುವುದು.   

ಧರ್ಮಪುರ: ಮಾರುಕಟ್ಟೆಯಲ್ಲಿ ದಿನೇ ದಿನೇ ಟೊಮೆಟೊ ದರ ಕುಸಿಯುತ್ತಿರುವುದರಿಂದ ಕಂಗೆಟ್ಟ ರೈತರು ಟೊಮೆಟೊ ಹಣ್ಣುಗಳನ್ನು ಕುರಿಗೆ ಮೇವನ್ನಾಗಿ ಹಾಕುತ್ತಿರುವುದು ಹೋಬಳಿಯಾದ್ಯಂತ ಕಂಡುಬಂದಿದೆ.

ಶ್ರವಣಗೆರೆ, ಹರಿಯಬ್ಬೆ, ಮುಂಗುಸುವಳ್ಳಿ, ಬೆಟ್ಟಗೊಂಡನಹಳ್ಳಿ, ಅರಳೀಕೆರೆ, ಹಲಗಲದ್ದಿ, ಸಕ್ಕರ, ಬೆನಕನಹಳ್ಳಿ, ಪಿ.ಡಿ. ಕೋಟೆ, ಸೂಗೂರು, ವೇಣುಕಲ್ಲುಗುಡ್ಡ, ಬೆಟ್ಟಗೊಂಡನಹಳ್ಳಿ, ಮದ್ದಿಹಳ್ಳಿ, ಖಂಡೇನಹಳ್ಳಿ, ಕೋಡಿಹಳ್ಳಿ, ಚಿಲ್ಲಹಳ್ಳಿ, ಇಕ್ನೂರು, ಈಶ್ವರಗೆರೆ, ಹೊಸಕೆರೆ ಸೇರಿದಂತೆ ಹೋಬಳಿಯಾದ್ಯಂತ 2,000 ಹೆಕ್ಟೇರ್ ಪ್ರದೇಶದಲ್ಲಿ ಟೊಮೆಟೊ ಬೆಳೆಯಲಾಗಿದೆ. ಬೆಳೆ ಸಮೃದ್ಧವಾಗಿ ಬಂದಿದೆ. ಧಾರಣೆ ಕುಸಿತದಿಂದ ರೈತರು ದಿಕ್ಕು ತೋಚದೇ ಕಂಗಾಲಾಗಿದ್ದಾರೆ.

‘15 ಕೆ.ಜಿ. ತೂಕದ ಒಂದು ಕ್ರೇಟ್ ಟೊಮೆಟೊ ಕಳೆದೆರೆಡು ದಿನಗಳಿಂದ ಕೋಲಾರ ಮಾರುಕಟ್ಟೆಯಲ್ಲಿ ಬರೀ ₹ 50ಕ್ಕೆ ಟೆಂಡರ್ ಆಗಿದೆ. ಇಲ್ಲಿಂದ ಟೊಮೆಟೊವನ್ನು ಮಾರುಕಟ್ಟೆಗೆ ಸಾಗಿಸಲು ಒಂದು ಕ್ರೇಟ್‌ಗೆ ಲಾರಿ ಬಾಡಿಗೆ ₹ 42 ಬರುತ್ತದೆ. ಮಾರುಕಟ್ಟೆಯಲ್ಲಿ ಕಮಿಷನ್ ಮತ್ತು ಕ್ರೇಟ್‌ ಬಾಡಿಗೆ ಸೇರಿ ಒಂದು ಕ್ರೇಟ್‌ ಹಣ್ಣು ಸಾಗಿಸಲು ₹ 48 ಖರ್ಚು ಬರುತ್ತದೆ. ಹಣ್ಣು ಕೀಳಲು ₹ 300 ಕೂಲಿ ಕೊಡಬೇಕು. ಹೀಗಾಗಿ ಟೊಮೆಟೊ ಕೀಳದೇ ಗಿಡದಲ್ಲಿಯೇ ಬಿಡುವುದು ಸೂಕ್ತ’ ಎಂದು ಶ್ರವಣಗೆರೆ ರೈತ ನರಸಿಂಹಪ್ಪ ಅಳಲು ತೋಡಿಕೊಂಡರು.

ADVERTISEMENT

30 ವರ್ಷಗಳಿಂದ ಮಳೆಯಾಗದೇ ರೈತರು ಕೃಷಿ ಚಟುವಟಿಕೆಯನ್ನು ಬಿಟ್ಟು ಬೆಂಗಳೂರು ಮತ್ತಿತರ ಕಡೆ ಗುಳೇ ಹೋಗಿದ್ದರು. ಈ ವರ್ಷ ಉತ್ತಮ ಮಳೆಯಾಯಿತು. ಆದರೆ, ಈ ಭಾಗದ ಪ್ರಮುಖ ವಾಣಿಜ್ಯ ಬೆಳೆ ಶೇಂಗಾ ಕೈಕೊಟ್ಟಿತು. ಈಗ ಈರುಳ್ಳಿ ಮತ್ತು ಟೊಮೆಟೊ ಹಾಕಿದ್ದೇವೆ. ಈ ಬೆಳೆಗಳಿಗೆ ಮಳೆಗಾಲದಲ್ಲಿ ಮಚ್ಚೆ ರೋಗ, ಬೇಸಿಗೆಯಲ್ಲಿ ನುಸಿರೋಗ ಮತ್ತು ಹುಳುಬಾಧೆ ಕಾಣಿಸಿಕೊಳ್ಳುತ್ತದೆ. ಈಗ ದರ ಕುಸಿತ ನಮ್ಮ ನೆಮ್ಮದಿಯನ್ನು ಕಸಿದುಕೊಂಡಿದೆ’ ಎಂದು ರೈತ ಮೂಡ್ಲಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

..............

ಪರಿಹಾರಕ್ಕೆ ಒತ್ತಾಯ

ನರ್ಸರಿಯಲ್ಲಿ ಒಂದು ಟೊಮೆಟೊ ಗಿಡಕ್ಕೆ ₹ 1, ಜಮೀನಿನಲ್ಲಿ ಸಸಿ ಹಾಕಲು ಕೂಲಿ ₹ 300, ನಂತರ ಗಿಡಕ್ಕೆ ರಾಸಾಯನಿಕ, ಗೊಬ್ಬರ, ಔಷಧ ಸಿಂಪಡಣೆ ಮಾಡಬೇಕು. ಗಿಡ ಬೆಳೆದ ಮೇಲೆ ಗೂಟ ನೆಟ್ಟು ದಾರ ಹಾಕಬೇಕು. ಇದರಿಂದ ಲಕ್ಷಾಂತರ ರೂಪಾಯಿ ಖರ್ಚಾಗಿದ್ದು, ದರ ಕುಸಿತ ನಮ್ಮ ಬದುಕನ್ನೇ ಕಸಿದುಕೊಂಡಿದೆ. ಅದಕ್ಕಾಗಿ ಹಣ್ಣು ಕೀಳದೇ ಗಿಡದಲ್ಲಿಯೇ ಬಿಟ್ಟಿದ್ದೇವೆ. ಕೆಲವರು ಕಿತ್ತು ಕುರಿಗಳಿಗೆ ಆಹಾರವಾಗಿ ಹಾಕುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಸರ್ಕಾರ ರೈತರ ಜಮೀನುಗಳಿಗೆ ಭೇಟಿ ನೀಡಿ ಸೂಕ್ತ ಪರಿಹಾರ ನೀಡಬೇಕು ಎಂದು ಶ್ರವಣಗೆರೆಯ ರೈತ ಡಿ. ತಿಪ್ಪೇಸ್ವಾಮಿ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.