ಸೊಂಟದ ದಾರ (ಉಡದಾರ) ಮಾರಾಟ
ಚಿತ್ರದುರ್ಗ: ‘ಯುಗಾದಿ ಹಬ್ಬ ಬಂದಾಗ ಹೊಸ ಬಟ್ಟೆ ಹಾಕುವುದು ತಪ್ಪಿದರೂ ಸರಿ, ಉಡದಾರ ಬದಲಾಯಿಸುವುದನ್ನು ತಪ್ಪಿಸುವುದಿಲ್ಲ. ಪ್ರತಿ ಉಗಾದಿ ದಿನ ಎಣ್ಣೆ ಮಜ್ಜನ ಮಾಡಿಕೊಂಡು ಉಡದಾರ ಬದಲಾಯಿಸುವುದು ನಮ್ಮ ಸಂಪ್ರದಾಯ’ ಎನ್ನುತ್ತಾರೆ ಬುರುಜನಹಟ್ಟಿಯ ತಿಪ್ಪಣ್ಣ.
ಬಯಲು ಸೀಮೆಯ ಹಲವು ಜಿಲ್ಲೆಗಳಲ್ಲಿ ಯುಗಾದಿ ಹಬ್ಬದ ಸಂಭ್ರಮದಲ್ಲಿ ಸೊಂಟದ ದಾರ (ಉಡದಾರ) ಬದಲಾವಣೆ ಮಾಡುವ ಸಂಪ್ರದಾಯವನ್ನು ತಲತಲಾಂತರದಿಂದಲೂ ನಡೆಸಿಕೊಂಡು ಬಂದಿದ್ದಾರೆ. ಯುಗಾದಿ ಹಬ್ಬಕ್ಕೆ ಒಂದು ವಾರ ಬಾಕಿ ಇದ್ದಂತೆಯೇ ದುರ್ಗದ ಮಾರುಕಟ್ಟೆಗಳಲ್ಲಿ, ರಸ್ತೆ, ಬೀದಿಗಳಲ್ಲಿ ಬಣ್ಣ ಬಣ್ಣದ ದಾರ ಮಾರುವ ವ್ಯಾಪಾರಿಗಳು ಕಾಣಿಸಿಕೊಳ್ಳುತ್ತಾರೆ. ಮಾರುಕಟ್ಟೆಗಳಲ್ಲಿ ಬಣ್ಣದ ದಾರ ಮಾರುವ ದೃಶ್ಯಗಳು ಕಾಮನ ಬಿಲ್ಲಿನಂತೆ ಕಣ್ಣಿಗೆ ಕಟ್ಟುತ್ತವೆ.
ನಗರದ ಸಂತೆ ಹೊಂಡ, ಸಾರಿಗೆ ಸಂಸ್ಥೆ ಬಸ್ ನಿಲ್ದಾಣ, ಖಾಸಗಿ ಬಸ್ ನಿಲ್ದಾಣ, ಜೋಗಿಮಟ್ಟಿ ರಸ್ತೆ, ಆನೆಬಾಗಿಲು, ರಂಗಯ್ಯನಬಾಗಿಲು ಮುಂತಾದೆಡೆ ವ್ಯಾಪಾರಿಗಳು ದಾರ ಮಾರಾಟ ಮಾಡುತ್ತಾರೆ. ಕಪ್ಪು, ಹಳದಿ, ಕೆಂಪು ಮುಂತಾದ ದಾರಗಳನ್ನು ಮಾರಾಟ ಮಾಡುತ್ತಿದ್ದು ಜನರು ತಮಗೆ ಇಷ್ಟವಾದ ಬಣ್ಣದ ದಾರಗಳನ್ನು ಖರೀದಿ ಮಾಡುತ್ತಾರೆ. ಹಬ್ಬದ ದಿನ ಎಣ್ಣೆ ಸ್ನಾನ ಮಾಡಿ, ದಾರಕ್ಕೆ ಅರಿಶಿಣ– ಕುಂಕುಮ ಇಟ್ಟು ಪೂಜೆ ಮಾಡಿ ಸೊಂಟಕ್ಕೆ ಕಟ್ಟಿಕೊಳ್ಳುವುದು ಸಂಪ್ರದಾಯವಾಗಿ ಬೆಳೆದು ಬಂದಿದೆ.
ತುಮಕೂರು ಜಿಲ್ಲೆಯ ಶಿರಾ, ಮಧುಗಿರಿ, ಚಿತ್ರದುರ್ಗ ಜಿಲ್ಲೆ, ದಾವಣಗೆರೆ, ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕು ಭಾಗದ ಮಧ್ಯ ಕರ್ನಾಟಕದಲ್ಲಿ ಯುಗಾದಿ ಹಬ್ಬದ ಸಂಭ್ರಮದಲ್ಲಿ ಉಡದಾರ ಬದಲಾವಣೆ ಮಾಡುವ ಸಂಪ್ರದಾಯವನ್ನು ಕಾಪಿಟ್ಟುಕೊಂಡು ಬಂದಿದ್ದಾರೆ. ಹಳೇ ದಾರ ಬಿಚ್ಚಿ ಹೊಸ ದಾರವನ್ನು ಕಟ್ಟಿಕೊಳ್ಳುವ ಪದ್ಧತಿ ನಡೆದುಕೊಂಡು ಬಂದಿದೆ.
‘ಹಿಂದೂ ಸಂಪ್ರದಾಯದಲ್ಲಿ ಗಂಡು ಮಕ್ಕಳಿಗೆ ಸೊಂಟಕ್ಕೆ ಉಡದಾರ ಕಟ್ಟುವುದಕ್ಕೆ ಒಂದು ರೀತಿ ಇದೆ. ಅದನ್ನು ಕೆಲವರು ಮೂಢನಂಬಿಕೆ ಎಂದು ಹೇಳುತ್ತಾರೆ. ಆದರೆ ಇದು ಮೂಢನಂಬಿಕೆಯಲ್ಲ. ಇದಕ್ಕೆ ವೈಜ್ಞಾನಿಕ ಕಾರಣವೂ ಇದೆ. ಉಡದಾರ ಕಟ್ಟುವುದರಿಂದ ಮಕ್ಕಳ ಮೂಳೆಗಳು ಹಾಗೂ ಖಂಡಗಳು ಯಾವ ರೀತಿ ಬೆಳವಣಿಗೆ ಹೊಂದುತ್ತಿವೆ ಎಂಬುದು ತಿಳಿಯುತ್ತದೆ. ದೇಹದ ಸಮತೋಲಿತ ತೂಕ ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ. ಉಡದಾರ ಮೀರಿ ದೇಹ ದಪ್ಪವಾದಾಗ ತೂಕ ಇಳಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ. ಕೆಲವರು ಮಕ್ಕಳಿಗೆ ತಾಮ್ರದ ಉಡುದಾರ ಕಟ್ಟುತ್ತಾರೆ. ಇದರಿಂದ ಮಕ್ಕಳಲ್ಲಿ ಸಕಾರಾತ್ಮಕ ತರಂಗಗಳು ಹೊಮ್ಮುತ್ತವೆ’ ಎಂದು ತಜ್ಞರೊಬ್ಬರು ಹೇಳುತ್ತಾರೆ.
ಹುಟ್ಟು– ಸಾವಿನ ನಡುವೆ: ಕೆಲವರು ಉಡುದಾರವನ್ನು ಹುಟ್ಟು– ಸಾವಿನ ನಡುವಿನ ಶಾಶ್ವತವಾದ ಆಸ್ತಿ ಎಂದು ನಂಬುತ್ತಾರೆ. ಮನುಷ್ಯ ಹುಟ್ಟುವಾಗ ಬೆತ್ತಲಾಗಿ ಬರುತ್ತಾನೆ. ಸಾಯುವಾಗ ಬೆತ್ತಲಾಗಿ ಸಾಯುತ್ತಾನೆ. ಆತ ಬೆತ್ತಲಾಗಿ ಹೋಗುವಾಗ ಉಡುದಾರ ಮಾತ್ರ ಅವನ ಆಸ್ತಿಯಾಗಿರುತ್ತದೆ. ವ್ಯಕ್ತಿ ತನ್ನ ಜೊತೆಗೆ ಏನನ್ನೂ ಕೊಂಡೊಯ್ಯುವುದಿಲ್ಲ. ಕೊನೆಗೆ ಅವನ ಜೊತೆ ಉಳಿಯುವುದು ಉಡುದಾರ ಮಾತ್ರ ಎಂದು ನಂಬುತ್ತಾರೆ.
ದಾರದಿಂದ ಬದುಕು: ದಾವಣಗೆರೆ ತಾಲ್ಲೂಕು ಮಲೆಬೆನ್ನೂರಿನ ಹಲವು ವ್ಯಾಪಾರಿಗಳು ಚಿತ್ರದುರ್ಗದಲ್ಲಿ ದಾರಗಳನ್ನು ಮಾರಾಟ ಮಾಡುತ್ತಿದ್ದಾರೆ. ಅಲ್ಲಿಂದ ನೂರಕ್ಕೂ ಹೆಚ್ಚು ಜನರು ಯುವಕರು ದಾರ ತಂದು ಮಾರಾಟ ಮಾಡುತ್ತಿದ್ದಾರೆ. ಅಲ್ಲಿ ಕೆ.ಜಿ ಲೆಕ್ಕದಲ್ಲಿ ದಾರ ತಂದು ಮಾರಾಟ ಮಾಡುತ್ತಾರೆ. ಸಾಧಾರಣ ಗುಣಮಟ್ಟದ ದಾರಕ್ಕೆ ₹ 5 ಇದ್ದರೆ ಉತ್ತಮ ಗುಣಮಟ್ಟದ ದಾರಕ್ಕೆ ₹ 10 ಬೆಲೆ ಇದೆ. ಜೊತೆಗೆ ಕೈಗೆ ಕಟ್ಟಿಕೊಳ್ಳುವ ದಾರವನ್ನೂ ಮಾರಾಟ ಮಾಡುತ್ತಿದ್ದಾರೆ.
‘ಯುಗಾದಿ ಹಬ್ಬದ ಒಂದು ವಾರ ಮಾತ್ರ ಇದ್ದಾಗ ನಾವು ದಾರ ಮಾರಾಟ ಮಾಡುತ್ತೇವೆ. 20 ಕೆ.ಜಿ.ಯಷ್ಟು ದಾರ ತಂದರೆ ವಾರದಲ್ಲಿ ಮಾರಾಟ ಮಾಡುತ್ತೇವೆ. ₹ 8,000ದಿಂದ ₹ 10,000 ಲಾಭವಾಗುತ್ತದೆ. ಯುಗಾದಿ ಅಮಾವಾಸ್ಯೆ ದಿನ ಅತೀ ಹೆಚ್ಚು ದಾರಗಳು ಮಾರಾಟವಾಗುತ್ತವೆ. ಹಿಂದೂ ಸಂಪ್ರದಾಯದ ಆಚರಣೆ ನಮ್ಮ ಹೊಟ್ಟೆ ಪಾಡಿನ ಉದ್ಯೋಗವಾಗಿದೆ’ ಎಂದು ಮಲೇಬೆನ್ನೂರಿನ ವ್ಯಾಪಾರಿ ಮೊಹಮ್ಮದ್ ಮಕಬೂಲ್ ಹೇಳಿದರು.
ಶಿವದಾರ ಬದಲಾವಣೆ: ಬಯಲುಸೀಮೆ ಭಾಗದಲ್ಲಿ ಲಿಂಗಾಯತ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದ್ದು ಯುಗಾದಿ ದಿನ ಕರಡಿಗೆಯನ್ನು ಕಟ್ಟಿರುವ ಶಿವದಾರವನ್ನು ಬದಲಾಯಿಸುವ ಸಂಪ್ರದಾಯವನ್ನು ಕಡ್ಡಾಯವಾಗಿ ನೆರವೇರಿಸುತ್ತಾರೆ. ಅಭ್ಯಂಜನ ಸ್ನಾನ ಮಾಡಿ, ಸೂರ್ಯ ನಮಸ್ಕಾರ ಮಾಡಿ ಶಿವದಾರ ಬದಲಾವಣೆ ಮಾಡುವುದು ಸಂಪ್ರದಾಯವಾಗಿದೆ.
‘ಯುಗಾದಿ ಹಬ್ಬದ ದಿನ ಬೇವು– ಬೆಲ್ಲ ತಿನ್ನುವುದು ಎಷ್ಟು ಮುಖ್ಯವೋ ಶಿವದಾರ ಬದಲಾವಣೆ ಮಾಡುವುದು ಅಷ್ಟೇ ಮುಖ್ಯ. ಮನೆಯಲ್ಲಿರುವ ಗಂಡುಮಕ್ಕಳಿಗೆ ಹೊಸ ಬಟ್ಟೆ ಹಾಕಿ ದಾರ ಬದಲಾವಣೆ ಮಾಡುವುದನ್ನು ನಾವು ಮರೆಯುವುದಿಲ್ಲ. ಯುಗಾದಿ ಹಿಂದೂ ಸಂಪ್ರದಾಯದಲ್ಲಿ ಹೊಸ ವರ್ಷವಾಗಿದ್ದು ಹೊಸ ಬಟ್ಟೆ ಧರಿಸಿ, ಅಗಲಿದ ಹಿರಿಯರಿಗೆ ಎಡೆ ಇಡುತ್ತೇವೆ’ ಎಂದು ವಿದ್ಯಾನಗರದ ನಿವಾಸಿ ಬಸವರಾಜ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.