ADVERTISEMENT

ಕಣಿವೆ ಜೋಗಿಹಳ್ಳಿ: ಕುಸಿದ ಶಾಲಾ ಕೊಠಡಿ

ಮರದ ಕೆಳಗೆ ಮಕ್ಕಳಿಗೆ ಪಾಠ ಮಾಡುವ ಪರಿಸ್ಥಿತಿ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2021, 2:59 IST
Last Updated 26 ನವೆಂಬರ್ 2021, 2:59 IST
ಹೊಳಲ್ಕೆರೆ ತಾಲ್ಲೂಕಿನ ಕಣಿವೆಜೋಗಿಹಳ್ಳಿಯ ಸರ್ಕಾರಿ ಶಾಲಾ ಕೊಠಡಿ ಕುಸಿದಿರುವುದು
ಹೊಳಲ್ಕೆರೆ ತಾಲ್ಲೂಕಿನ ಕಣಿವೆಜೋಗಿಹಳ್ಳಿಯ ಸರ್ಕಾರಿ ಶಾಲಾ ಕೊಠಡಿ ಕುಸಿದಿರುವುದು   

ಹೊಳಲ್ಕೆರೆ: ತಾಲ್ಲೂಕಿನ ಕಣಿವೆಜೋಗಿಹಳ್ಳಿಯಲ್ಲಿರುವ ಸರ್ಕಾರಿ ಶಾಲೆಯ ಕೊಠಡಿ ಈಚೆಗೆ ಸುರಿದ ಮಳೆಯಿಂದ ಕುಸಿದಿದೆ.

ಭಾನುವಾರ ಶಾಲೆಯ ಕೊಠಡಿ ಕುಸಿದಿದ್ದು, ಶಾಲೆಯಲ್ಲಿನ 2 ಕೊಠಡಿಗಳು ಶಿಥಿಲಗೊಂಡಿದ್ದು, ವಿದ್ಯಾರ್ಥಿಗಳನ್ನು ಮರದ ಕೆಳಗೆ ಕೂರಿಸಿ ಪಾಠ ಮಾಡುವ ಪರಿಸ್ಥಿತಿ ಇದೆ.

‘ನಮ್ಮ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 125 ವಿದ್ಯಾರ್ಥಿಗಳು 1ರಿಂದ 7ನೇ ತರಗತಿಯವರೆಗೆ ಓದುತ್ತಿದ್ದಾರೆ. ಮಳೆಯಿಂದ ಎರಡುಕೊಠಡಿಗಳು ಕುಸಿದಿದ್ದು, ಸುಸ್ಥಿತಿಯಲ್ಲಿರುವ ಎರಡು ಕೊಠಡಿಗಳಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಪರಿಸ್ಥಿತಿ ಇದೆ. ವಿದ್ಯಾರ್ಥಿಗಳನ್ನು ಕೊಠಡಿಯ ಒಳಗೆ ಕೂರಿಸಲು ಸಾಧ್ಯವಾಗದೆ ಶಾಲೆಯ ಆವರಣದಲ್ಲಿರುವ ಮರದ ಕೆಳಗೆ ಕೂರಿಸಿ ಪಾಠ ಮಾಡಲಾಗುತ್ತಿದೆ. ಶಾಲೆಯಲ್ಲಿ 5 ಜನ ಶಿಕ್ಷಕರಿದ್ದು, ಎರಡು ಕೊಠಡಿಗಳಲ್ಲಿ ಪಾಠ ಮಾಡಬೇಕಾಗಿದೆ. ನಮ್ಮ ಶಾಲೆಗೆ ತುರ್ತಾಗಿ ಇನ್ನೂ 3 ಕೋಠಡಿಗಳು ಬೇಕಾಗಿವೆ’ ಎನ್ನುತ್ತಾರೆ ಎಸ್‌ಡಿಎಂಸಿ ಅಧ್ಯಕ್ಷ ಜಿ.ಎಸ್.ರವಿ.

ADVERTISEMENT

‘ಕೆಲವು ಕಡೆ ಮಕ್ಕಳಿಲ್ಲದಿದ್ದರೂ ಹೆಚ್ಚು ಕೊಠಡಿ ನಿರ್ಮಿಸಲಾಗಿದ್ದು, ಬಳಕೆ ಆಗದೆ ವ್ಯರ್ಥವಾಗುತ್ತಿವೆ. ಆದರೆ ನಮ್ಮ ಗ್ರಾಮದಲ್ಲಿ ಹೆಚ್ಚು ವಿದ್ಯಾರ್ಥಿಗಳಿದ್ದರೂ ಕೇವಲ 2 ಕೊಠಡಿಗಳಿವೆ. ಗ್ರಾಮದಲ್ಲಿ ಪರಿಶಿಷ್ಟ ವಿದ್ಯಾರ್ಥಿಗಳಿದ್ದು, ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಮನಹರಿಸಿ ಕೊಠಡಿ ನಿರ್ಮಿಸಿಕೊಡಬೇಕು’ ಎಂದು ಗ್ರಾಮದ ಮುಖಂಡರಾದ ಎಚ್‌.ವೆಂಕಟೇಶ್, ಪಿ.ಟಿ. ತಿಮ್ಮಯ್ಯ,ರಾಧಮ್ಮ, ಶ್ರೀನಿವಾಸ್, ರುದ್ರಮುನಿ, ರತ್ನಮ್ಮ, ಮಂಜುನಾಥ್, ಸುವರ್ಣಮ್ಮ, ಲಲಿತಮ್ಮ ಆಗ್ರಹಿಸಿದ್ದಾರೆ.

‘ಕೊಠಡಿಗಳು ಕಡಿಮೆ ಇರುವುದರಿಂದ ಪಾಠ ಮಾಡಲು ಸಮಸ್ಯೆ ಆಗಿದೆ. ಎರಡೇ ಕೊಠಡಿಗಳಲ್ಲಿ ಐವರು ಶಿಕ್ಷಕರು ಪಾಠ ಮಾಡಬೇಕಾಗಿದೆ. ಸದ್ಯಕ್ಕೆ ಕನಿಷ್ಠ 2 ಕೊಠಡಿಗಳನ್ನಾದರೂ ನಿರ್ಮಿಸಿಕೊಡಬೇಕು’ ಎನ್ನುತ್ತಾರೆ ಮುಖ್ಯಶಿಕ್ಷಕ ಟಿ.ಜಿ.ರಂಗಸ್ವಾಮಿ.

20, 30 ವಿದ್ಯಾರ್ಥಿಗಳು ವಿದ್ಯಾರ್ಥಿಗಳು ಇರುವ ಕಡೆ ಐದು, ಆರು ಕೊಠಡಿ ನಿರ್ಮಿಸಲಾಗಿದೆ. ನಮ್ಮೂರಿನಲ್ಲಿ 125 ಮಕ್ಕಳಿದ್ದರೂ 2 ಕೊಠಡಿಗಳಿವೆ ಎಂದುಎಸ್‌ಡಿಎಂಸಿ ಅಧ್ಯಕ್ಷಜಿ.ಎಸ್.ರವಿ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.