ಹೊಸದುರ್ಗ: ವಾಲ್ಮೀಕಿ ನಿಗಮದಲ್ಲಿನ ಹಗರಣದ ತನಿಖೆ ಎಲ್ಲ ಆಯಾಮಗಳಲ್ಲೂ ನಡೆಯಬೇಕಾದರೆ, ಕೂಡಲೇ ಕೇಂದ್ರೀಯ ತನಿಖಾ ದಳಕ್ಕೆ ವರ್ಗಾಯಿಸಬೇಕು ಎಂದು ಒತ್ತಾಯಿಸಿ ತಾಲ್ಲೂಕು ವಾಲ್ಮೀಕಿ ನಾಯಕ ಸಮುದಾಯದ ಮುಖಂಡರು ಹಾಗೂ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಹೊಸದುರ್ಗ ತಾಲ್ಲೂಕು ಯುವ ಘಟಕದ ಪದಾಧಿಕಾರಿಗಳು ಮಂಗಳವಾರ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.
‘ವಾಲ್ಮೀಕಿ ನಾಯಕ ಜನಾಂಗದ ಬಡವರಿಗೆ ಸೇರಬೇಕಾಗಿರುವ ಹಣ, ಪ್ರಭಾವಿಗಳ ಪಾಲಾಗಿರುವುದು ನೋವಿನ ಸಂಗತಿ. ಈ ಅಕ್ರಮದಲ್ಲಿ ಭಾಗಿಯಾಗಿರುವ ವ್ಯಕ್ತಿ ಎಷ್ಟೇ ಪ್ರಭಾವಿಯಾಗಿದ್ದರೂ ಅವರ ವಿರುದ್ಧ ಕಾನೂನು ಕ್ರಮವಾಗಬೇಕು. ಎಸ್ಐಟಿ ರಾಜ್ಯ ಸರ್ಕಾರ ರಚಿಸಿರುವ ತನಿಖಾ ತಂಡವಾಗಿದ್ದು, ಇದರ ಬಗ್ಗೆ ನಮಗೆ ಅಷ್ಟು ವಿಶ್ವಾಸವಿಲ್ಲ. ‘ನಾನು ಅಹಿಂದ ನಾಯಕ. ದಲಿತರ ಪರವಾಗಿರುವ ವ್ಯಕ್ತಿ’ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಇದರಲ್ಲಿ ತಮ್ಮ ಪಾತ್ರ ಇಲ್ಲ ಎಂದಾದರೆ, ಕೂಡಲೇ ಪ್ರಕರಣವನ್ನು ಕೇಂದ್ರೀಯ ತನಿಖಾ ತಂಡಕ್ಕೆ ವರ್ಗಾವಣೆ ಮಾಡಬೇಕು’ ಎಂದು ತಾಲ್ಲೂಕು ನಾಯಕ ಸಮಾಜದ ಮುಖಂಡ ಮಳಲಿ ವಿಜಯ್ ಕುಮಾರ್ ಒತ್ತಾಯಿಸಿದರು.
ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಯುವ ಘಟಕದ ಪದಾಧಿಕಾರಿಗಳಾದ ಅರುಣ್ ಗಂಗಾಧರಪ್ಪ, ಶಶಿಧರ್, ಲೋಹಿತ್, ಸಿದ್ದೇಶ್, ರೂಪೇಶ್, ಚೇತನ್ ಸೇರಿ ಹಲವರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.