ADVERTISEMENT

ಚಿಕ್ಕಜಾಜೂರು: ಬಿಸಿ ತುಪ್ಪವಾದ ತರಕಾರಿ ಬೆಲೆ

ಬಡವರು, ಮಧ್ಯಮವರ್ಗದ ಜನ ಹೈರಾಣು

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2021, 3:54 IST
Last Updated 14 ಡಿಸೆಂಬರ್ 2021, 3:54 IST
ಚಿಕ್ಕಜಾಜೂರಿನ ವಾರದ ಸಂತೆಯಲ್ಲಿ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಅಲ್ಪಸ್ವಲ್ಪ ತರಕಾರಿ ಖರೀದಿಯಲ್ಲಿ ನಿರತರಾಗಿದ್ದ ಗ್ರಾಹಕರು.
ಚಿಕ್ಕಜಾಜೂರಿನ ವಾರದ ಸಂತೆಯಲ್ಲಿ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಅಲ್ಪಸ್ವಲ್ಪ ತರಕಾರಿ ಖರೀದಿಯಲ್ಲಿ ನಿರತರಾಗಿದ್ದ ಗ್ರಾಹಕರು.   

ಚಿಕ್ಕಜಾಜೂರು: ತರಕಾರಿ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದ್ದು, ಬಡ ಗ್ರಾಹಕರಿಗೆ ತರಕಾರಿ ಕೊಳ್ಳುವುದು ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಅಡುಗೆ ಮಾಡಲು ತರಕಾರಿ ಅತ್ಯವಶ್ಯಕ. ಆದರೆ, ಅವುಗಳ ಬೆಲೆಯನ್ನು ಕೇಳುತ್ತಲೇ ಬಡವರು ಹಾಗೂ ಮಧ್ಯಮ ವರ್ಗದ ಗ್ರಾಹಕರು ತರಕಾರಿಯನ್ನು ಕೊಳ್ಳಬೇಕೇ? ಬೇಡವೇ ಎಂಬ ಜಿಜ್ಞಾಸೆ ತರಕಾರಿ ಅಂಗಡಿಗಳ ಮುಂದೆ ಹೋದಾಗ ಕಾಡುತ್ತಿದೆ.

₹ 15–20ಕ್ಕೆ ಸಿಗುತ್ತಿದ್ದ ಟೊಮೊಟೊ ಈಗ ಕೆ.ಜಿ.ಗೆ ₹ 80–90ಕ್ಕೆ ಏರಿಕೆ ಕಂಡಿದೆ. ಜವಳಿಕಾಯಿ, ಕ್ಯಾರೆಟ್‌, ಬದನೆಕಾಯಿ, ಹಸಿ ಅಲಸಂದೆಕಾಯಿ, ಬೀನ್ಸ್‌, ಹಸಿಮೆಣಸಿನಕಾಯಿ ದಪ್ಪ, ಬೀನ್ಸ್‌, ಬೀಟ್‌ರೂಟ್‌, ಕ್ಯಾಪ್ಸಿಕಾಮ್‌, ಹೀರೇಕಾಯಿ, ಹಾಗಲಕಾಯಿ, ಕೆ.ಜಿ.ಗೆ ₹ 80 ಆಗಿದೆ. ತರಕಾರಿ ಇಲ್ಲದೆ ಸಾರು ಮಾಡಿದರೆ ರುಚಿ ಇರುವುದಿಲ್ಲ. ಹಾಗಂತ ತರಕಾರಿಯನ್ನು ಇಷ್ಟೊಂದು ಬೆಲೆಗೆ ಕೊಂಡುಕೊಳ್ಳಲೂ ಆಗುತ್ತಿಲ್ಲ ಎಂದು ನಾಗರಿಕರು ಬೇಸರ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಈ ಮೊದಲು ₹ 100ರಿಂದ ₹ 150 ಕೊಟ್ಟು ಚೀಲದ ತುಂಬ ತರಕಾರಿಯನ್ನು ತರುತ್ತಿದ್ದೆವು. ಆದರೆ, ಈಗಿನ ಬೆಲೆಗೆ ಚೀಲವಿರಲಿ, ಕ್ಯಾರಿ ಬ್ಯಾಗನ್ನೂ ತುಂಬಿಸಲಾಗುತ್ತಿಲ್ಲ. ಬೆಲೆ ಏರಿಕೆ ಹೀಗೆ ಮುಂದುವರಿದರೆ ಬಡವರು ಬದುಕುವುದಾದರೂ ಹೇಗೆ’ ಎಂದು ಮಧ್ಯಮ ವರ್ಗದ ಗ್ರಾಹಕರಾದ ಬಸವರಾಜ್‌, ಶೇಖರಪ್ಪ, ನಾಗರಾಜಪ್ಪ, ಚಂದ್ರಶೇಖರ್‌, ಲಿಂಗರಾಜ್‌, ದಿವಾಕರ್ ಮೊದಲಾದವರು ಪ್ರಶ್ನಿಸಿದರು.

‘ತರಕಾರಿ ಬೆಲೆ ಇಳಿಯುವವರೆಗೆ ರೊಟ್ಟಿ, ಚಪಾತಿ ಮಾಡುವಂತಿಲ್ಲ. ಪಲ್ಯ ಇಲ್ಲದೆ ತಿನ್ನುವುದಾದರೂ ಹೇಗೆ? ಬರಿ ಸೊಪ್ಪು, ಬೇಳೆಕಾಳುಗಳಿಂದ ಮಾಡಿದ ಸಾರು ಅಥವಾ ಪಲ್ಯವನ್ನು ಮಕ್ಕಳು ತಿನ್ನುವುದಿಲ್ಲ. ಬರುವ ಅಲ್ಪ ಸ್ವಲ್ಪ ಕೂಲಿ ಹಣದಿಂದ ಸಂಸಾರವನ್ನು ನಡೆಸುವುದಾರೂ ಹೇಗೆ ಎಂಬುದು ತೋಚುತ್ತಿಲ್ಲ’ ಎನ್ನುತ್ತಾರೆ ಗೃಹಿಣಿಯರಾದ ಸಾಕಮ್ಮ, ಅನಸೂಯಮ್ಮ, ಸಾವಿತ್ರಮ್ಮ, ಗಾಯತ್ರಮ್ಮ, ಗೌರಮ್ಮ ಲಕ್ಷ್ಮೀದೇವಿ, ಮಂಜುಳ, ಲಲಿತಮ್ಮ, ಕವಿತ, ದ್ರಾಕ್ಷಾಯಣಮ್ಮ ಮೊದಲಾದವರು.

ವ್ಯಾಪಾರ ಕುಸಿತ: ಬೆಲೆ ಏರಿಕೆಯಿಂದಾಗಿ ಗ್ರಾಹಕರು ತರಕಾರಿಯನ್ನು ಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ವ್ಯಾಪಾರಕ್ಕೆ ಬರುವ ಗ್ರಾಹಕರ ಸಂಖ್ಯೆಯೇ ಕಡಿಮೆಯಾಗಿದೆ. ವ್ಯಾಪಾರವನ್ನೇ ನೆಚ್ಚಿಕೊಂಡ ನಾವು ಬದುಕುವುದಾದರೂ ಹೇಗೆ ಎಂದು ವರ್ತಕರಾದ ಮಂಜಣ್ಣ, ಸಾವಿತ್ರಮ್ಮ, ಬಸವರಾಜಪ್ಪ, ನೀಲಮ್ಮ, ಕೆಂಚಪ್ಪ, ಮಂಜಪ್ಪ ಮೊದಲಾದವರು ತಮ್ಮ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.