ADVERTISEMENT

ಚಿತ್ರದುರ್ಗ | ಸಿಬ್ಬಂದಿಯೇ ಇಲ್ಲದ ಪಶು ಆಸ್ಪತ್ರೆ; ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 7:34 IST
Last Updated 10 ಸೆಪ್ಟೆಂಬರ್ 2025, 7:34 IST
ಹಿರಿಯೂರು ತಾಲ್ಲೂಕು ದಿಂಡಾವರ ಗ್ರಾಮದ ಪಶು ಆಸ್ಪತ್ರೆ
ಹಿರಿಯೂರು ತಾಲ್ಲೂಕು ದಿಂಡಾವರ ಗ್ರಾಮದ ಪಶು ಆಸ್ಪತ್ರೆ   

ಹಿರಿಯೂರು: ತಾಲ್ಲೂಕಿನ ಯಲ್ಲದಕೆರೆ ಮತ್ತು ದಿಂಡಾವರ ಗ್ರಾಮಗಳಲ್ಲಿ ಪಶು ಆಸ್ಪತ್ರೆಗಳಿದ್ದರೂ ಸಿಬ್ಬಂದಿ ಇಲ್ಲದ ಕಾರಣ ಪಶುಪಾಲನಾ ವೃತ್ತಿಯನ್ನೇ ನಂಬಿ ಜೀವನ ನಡೆಸುತ್ತಿರುವವರು ಸಂಕಷ್ಟಕ್ಕೆ ಸಿಲುಕಿದ್ದಾರೆ.

‘ದಿಂಡಾವರ ಆಸ್ಪತ್ರೆಯಲ್ಲಿದ್ದ ಕಾಂಪೌಂಡರ್ ಒಬ್ಬರನ್ನು ಈಶ್ವರಗೆರೆ ಆಸ್ಪತ್ರೆಗೆ ವರ್ಗಾವಣೆ ಮಾಡಿರುವ ಕಾರಣ ಆಸ್ಪತ್ರೆಯಲ್ಲಿ ‘ಡಿ’ ದರ್ಜೆಯ ಒಬ್ಬ ನೌಕರ ಇದ್ದಾರೆ. ಅವರಿಂದ ಕುರಿ–ಮೇಕೆಗಳಿಗೆ ಸಾಂಕ್ರಾಮಿಕ ರೋಗಗಳು ಕಂಡುಬಂದಲ್ಲಿ ಚಿಕಿತ್ಸೆ ನೀಡುವುದು ಸಾಧ್ಯವೇ?’ ಎಂದು ಗ್ರಾಮಸ್ಥರು ಪ್ರಶ್ನಿಸುತ್ತಾರೆ.

ಕಲ್ಲುವಳ್ಳಿ ಭಾಗ ಎಂದು ಗುರುತಿಸಿರುವ ಗೌಡನಹಳ್ಳಿಯಿಂದ ಕೊಟ್ಟಗೇರಹಟ್ಟಿವರೆಗೆ 30 ಗ್ರಾಮಗಳಿದ್ದು, ಕುರಿ–ಮೇಕೆಗಳು ಒಳಗೊಂಡು ಅಂದಾಜು 70,000 ಜಾನುವಾರುಗಳಿವೆ. ದುಗ್ಗಾಣಿಹಟ್ಟಿ ಗ್ರಾಮವೊಂದರಲ್ಲೇ 15,000ದಿಂದ 20,000 ಕುರಿ–ಮೇಕೆಗಳಿವೆ. ದಿಂಡಾವರಕ್ಕೆ ಸಮೀಪದ ಪಶು ಆಸ್ಪತ್ರೆ ಇರುವುದು ಯಲ್ಲದಕೆರೆ ಗ್ರಾಮದಲ್ಲಿ. ಅಲ್ಲಿದ್ದ ಪಶುವೈದ್ಯ ಹಾಗೂ ಇನ್‌ಸ್ಪೆಕ್ಟರ್ ಅನ್ನು ವರ್ಗಾವಣೆ ಮಾಡಿದ್ದು, ಅಲ್ಲಿಯೂ ಒಬ್ಬರು ‘ಡಿ’ ದರ್ಜೆ ನೌಕರ ಇದ್ದಾರೆ. ಕೃಷಿಯ ಜೊತೆ ಪಶುಪಾಲನೆ ಮಾಡುತ್ತಿರುವ ರೈತರ ಬಗ್ಗೆ ಸರ್ಕಾರದ ಕಾಳಜಿ ಎಷ್ಟಿದೆ ಎಂಬುದು ಇದರಿಂದ ಅರ್ಥವಾಗುತ್ತದೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಾರೆ.

ADVERTISEMENT

ಈ ಭಾಗದ ಕುರಿಗಾಹಿಗಳು ಬೇಸಿಗೆ ಆರಂಭವಾಗುತ್ತಿದ್ದಂತೆಯೇ ಮೇವು ಅರಸಿ ಹಾಸನ, ಚಿಕ್ಕಮಗಳೂರು, ಕುಶಾಲನಗರ, ಚಾಮರಾಜನಗರ, ಮಂಡ್ಯ, ರಾಣೇಬೆನ್ನೂರು ಕಡೆಗೆ ಕುರಿ–ಮೇಕೆಗಳೊಂದಿಗೆ ವಲಸೆ ಹೋಗುತ್ತಾರೆ. ಅಲ್ಲಿ ಮಳೆ ಜೋರಾದ ನಂತರ ಮರಳಿ ಊರಿಗೆ ಬರುತ್ತಾರೆ. ಸ್ಥಳ ಬದಲಾವಣೆ ಕಾರಣಕ್ಕೆ ಕುರಿ–ಮೇಕೆಗಳಿಗೆ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಂಡಲ್ಲಿ ಪಶು ಆಸ್ಪತ್ರೆ ಅತ್ಯಗತ್ಯ. ನಮ್ಮಲ್ಲಿ ಆಸ್ಪತ್ರೆ ಇದ್ದರೂ ಹೆಸರಿಗೆ ಮಾತ್ರ ಎಂಬಂತಿದೆ. ಸಾಂಕ್ರಾಮಿಕ ರೋಗಗಳು ಕಾಣಿಸಿಕೊಂಡಾಗ ತಕ್ಷಣ ಚಿಕಿತ್ಸೆ ಸಿಗದೇ ಹೋದರೆ ಕುರಿ–ಮೇಕೆಗಳು ಬದುಕಿ ಉಳಿಯುವುದಿಲ್ಲ ಎಂದು ಕುರಿಗಾಹಿಗಳು ಆತಂಕ ವ್ಯಕ್ತಪಡಿಸುತ್ತಾರೆ.

ದಿಂಡಾವರ ಪಶು ಆಸ್ಪತ್ರೆಯ ಕಾಂಪೌಂಡರ್ ಅನ್ನು ಈಶ್ವರಗೆರೆಗೆ ಸರ್ಕಾರ ವರ್ಗಾವಣೆ ಮಾಡಿದ್ದು ವಾರದಲ್ಲಿ 2–3 ದಿನ ದಿಂಡಾವರದಲ್ಲಿ ಸೇವೆ ಸಲ್ಲಿಸುವಂತೆ ಸೂಚಿಸಲಾಗಿದೆ. ಯಲ್ಲದಕೆರೆಗೆ ಕಿರಿಯ ವೈದ್ಯರೊಬ್ಬರನ್ನು ನೇಮಿಸುವಂತೆ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ.
ಹುಸೇನ್ ಸಾಬ್ ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ
ನಮ್ಮ ಭಾಗದಲ್ಲಿ ಜಾನುವಾರುಗಳ ಸಂಖ್ಯೆ ಹೆಚ್ಚಿರುವ ಕಾರಣ ದಿಂಡಾವರ ಗ್ರಾಮದ ಪಶು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕು. ಕಾಯಂ ಪಶುವೈದ್ಯರು ಕಾಂಪೌಂಡರ್ ನೇಮಿಸಬೇಕು.
ಡಿ.ಚಂದ್ರಗಿರಿ ಭಾರತೀಯ ಕಿಸಾನ್ ಸಂಘದ ಹಿರಿಯೂರು ಘಟಕದ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.