ಚಿತ್ರದುರ್ಗ: ಭದ್ರಾ ಜಲಾಶಯದಿಂದ ಚಿತ್ರದುರ್ಗ ಶಾಖಾ ನಾಲೆಯತ್ತ ನೀರು ಹರಿಯಲಿದ್ದು, ಜಿಲ್ಲೆಯ ಜೀವನಾಡಿಯಾಗಿರುವ ವಾಣಿ ವಿಲಾಸ ಸಾಗರ ಜಲಾಶಯ 4ನೇ ಬಾರಿಗೆ ಭರ್ತಿಯಾಗುವ ಭರವಸೆ ಮೂಡಿದೆ. ಜುಲೈ 27ರಿಂದ ನಾಲ್ಕು ತಿಂಗಳವರೆಗೆ ನೀರು ಬರುವ ಕಾರಣ ವರ್ಷದಲ್ಲಿ 2ನೇ ಬಾರಿ ಜಲಾಶಯ ತುಂಬಿ ಕೋಡಿ ಬೀಳಲಿದೆಯೇ ಎಂಬ ನಿರೀಕ್ಷೆಯೂ ಗರಿಗೆದರಿದೆ.
ಜಲಾಶಯ ನಿರ್ಮಾಣವಾಗಿ 89 ವರ್ಷಗಳ ನಂತರ 2022, ಸೆ. 2ರಂದು ಜಲಾಶಯ ಇತಿಹಾಸದಲ್ಲೇ 2ನೇ ಬಾರಿಗೆ ತುಂಬಿ ಕೋಡಿ ಬಿದ್ದಿತ್ತು. ನಂತರ 2025ರ ಜ. 12ರಂದು ಜಲಾಶಯ 3ನೇ ಬಾರಿ ತುಂಬಿ ಕೋಡಿಯಲ್ಲಿ ನೀರು ಕಂಡಿತ್ತು. ಜ. 18ರಂದು ಸಿದ್ದರಾಮಯ್ಯ ಜಲಾಶಯಕ್ಕೆ ಬಾಗಿನ ಅರ್ಪಿಸಿದ್ದರು. ಸದ್ಯ ಜಲಾಶಯದಲ್ಲಿ 123.80 ಅಡಿ (ಗರಿಷ್ಠ ಸಾಮರ್ಥ್ಯ 130 ಅಡಿ) ನೀರಿನ ಸಂಗ್ರಹವಿದ್ದು, ಜಲಾಶಯ ತುಂಬಲು 6.20 ಅಡಿ ನೀರಿನ ಬಾಕಿ ಇದೆ.
ಜುಲೈ 27ರಿಂದ ನಾಲ್ಕು ತಿಂಗಳು ಕಾಲುವೆಗುಂಟ ನೀರು ಹರಿದರೆ ತರೀಕೆರೆ, ಕಡೂರು, ಹೊಸದುರ್ಗ ಭಾಗದ ಕೆರೆಗಳು ತುಂಬಿ ವಾರದೊಳಗೆ ಜಲಾಶಯಕ್ಕೆ ನೀರು ಬೀಳುತ್ತದೆ. ಕನಿಷ್ಠ ನಿತ್ಯ 600 ಕ್ಯುಸೆಕ್ ನೀರು ಜಲಾಶಯದತ್ತ ಬರಲಿದೆ. ಜೊತೆಗೆ ಹಾಸನ, ಚಿಕ್ಕಮಗಳೂರು ಭಾಗದಲ್ಲಿ ಉತ್ತಮ ಮಳೆಯೂ ಬರುತ್ತಿರುವುದರಿಂದ ವೇದಾವತಿ ನದಿ ತುಂಬಿಹರಿದು, ಜಲಾಶಯದ ಒಳಹರಿವು ಹೆಚ್ಚಲಿದೆ. ಇದರಿಂದ ನವೆಂಬರ್ ವೇಳೆಗೆ ಜಲಾಶಯ ಭರ್ತಿಯಾಗುವ ನಿರೀಕ್ಷೆ ಇದ್ದು, ವರ್ಷದಲ್ಲಿ 2 ಬಾರಿ ಭರ್ತಿಯಾಗುವ ಮೂಲಕ ಇತಿಹಾಸ ನಿರ್ಮಾಣವಾಗಲಿದೆ ಎಂದೇ ಬಣ್ಣಿಸಲಾಗುತ್ತಿದೆ.
ಕಳೆದ ವರ್ಷ ಜಲಾಶಯಕ್ಕೆ ನೀರು ಹರಿಯಲಾರಂಭಿಸಿದಾಗ ಜಲಾಶಯದಲ್ಲಿ 117 ಅಡಿ ನೀರಿನ ಸಂಗ್ರಹವಿತ್ತು. ಈ ವರ್ಷ 123.80 ಅಡಿ ನೀರಿದ್ದು, ಜಲಾಶಯ ಬಲುಬೇಗನೆ ಭರ್ತಿಯಾಗುವ ಭರವಸೆ ಮೂಡಿದೆ. ಭದ್ರಾ ಮೇಲ್ದಂಡೆ ಯೋಜನೆಯಿಂದ ವಿ.ವಿ. ಸಾಗರಕ್ಕೆ 2 ಟಿಎಂಸಿ ಅಡಿ ನೀರು ಹಂಚಿಕೆಯಾಗಿದ್ದು, ಜಲಾಶಯ ಭರ್ತಿಯಾಗುವುದು ಬಹುತೇಕ ಖಾತ್ರಿಯಾಗಿದೆ. ಜಲಾಶಯ ನಿರ್ಮಾಣವಾದ ನಂತರ ದಶಕಗಳವರೆಗೆ ನೀರು ಕಾಣದಾಗಿದ್ದ ಜಲಾಶಯ ಈಗ ಮತ್ತೆ ಮತ್ತೆ ತುಂಬುತ್ತಿದ್ದು, ಜಿಲ್ಲೆಯ ರೈತರಲ್ಲಿ ಸಂತಸ ಮೂಡಿದೆ.
ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಕಾಲುವೆಯಿಂದ ನೀರು ಹರಿಯಲಿದ್ದು, ನೀರಿನ ಹಾದಿಯ ಹಳ್ಳ, ಕೊಳ್ಳಗಳ ಮೂಲಕ ಭದ್ರೆ ವೇದಾವತಿ ನದಿ ಸೇರಲಿದ್ದಾಳೆ. ಚಿತ್ರದುರ್ಗ ಶಾಖಾ ಕಾಲುವೆಯ ಹಾದಿಯಲ್ಲಿ ಬರುವ ಕೆರೆ– ಕುಂಟೆ, ಬ್ಯಾರೇಜ್‌ಗಳನ್ನು ತುಂಬಿಸಿ ನೀರು ವಿವಿ ಸಾಗರದತ್ತ ಹರಿದು ಬರಲಿದೆ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ಕೆರೆ ತುಂಬಿಸಲು 0.24 ಟಿಎಂಸಿ ಅಡಿ ನೀರು ಹಂಚಿಕೆ ಮಾಡಲಾಗಿದೆ.
ನಂತರ ಹೊಸದುರ್ಗ ತಾಲ್ಲೂಕಿನ ಕೆರೆ ತುಂಬಿಸಲು 0.50 ಅಡಿ ನೀರು ಹಂಚಿಕೆ ಮಾಡಲಾಗಿದ್ದು, ವಿವಿಧ ಕೆರೆ, ಬ್ಯಾರೇಜ್‌ಗಳು ತುಂಬಿದ ನಂತರ ನೀರು ವಿ.ವಿ ಸಾಗರ ಸೇರಲಿದೆ. ಒಟ್ಟಾರೆ 4.25 ಟಿಎಂಸಿ ಅಡಿ ನೀರು ಹರಿಸಲು ವಿಶ್ವೇಶ್ವರಯ್ಯ ಜಲನಿಗಮ ಆದೇಶ ನೀಡಿದೆ. ಅನಧಿಕೃತವಾಗಿ ಪಂಪ್‌ಸೆಟ್ ಬಳಸಿ ನೀರು ಎತ್ತುವವರ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿರುವ ಕಾರಣ ಬಲುಬೇಗನೇ ಜಲಾಶಯ ಭರ್ತಿಯತ್ತ ಸಾಗಲಿದೆ ಎಂದು ಮೂಲಗಳು ತಿಳಿಸಿವೆ.
‘ಸದ್ಯ ವಿ.ವಿ. ಸಾಗರದ ನೀರು ಜಿಲ್ಲೆಯ 6 ತಾಲ್ಲೂಕುಗಳಿಗೆ ಕುಡಿಯುವುದಕ್ಕೆ ಹೆಚ್ಚು ಬಳಕೆಯಾಗುತ್ತಿದೆ. 5 ಟಿಎಂಸಿ ಅಡಿ ನೀರು ಹರಿಸಿದರೆ ರೈತರಿಗೆ ಅನುಕೂಲವಾಗಲಿದೆ’ ಎಂಬುದು ರೈತರ ಒತ್ತಾಯ.
ಭದ್ರಾ ಜಲಾಶಯದಿಂದ ಚಿತ್ರದುರ್ಗ ಶಾಖಾ ನಾಲೆಗೆ ನೀರು ಹರಿಸಲು ಸರ್ಕಾರ ಅನುಮತಿ ನೀಡಿದೆ. ವೇಳಾಪಟ್ಟಿ ನಿಗದಿ ಮಾಡಲಾಗಿದ್ದು ಅದರಂತೆ ನೀರು ಹರಿಸಲಾಗುವುದುಎಫ್.ಎಚ್.ಲಮಾಣಿ ಮುಖ್ಯ ಎಂಜಿನಿಯರ್ ವಿಶ್ವೇಶ್ವರಯ್ಯ ಜಲ ನಿಗಮ
ವಿ.ವಿ ಸಾಗರ ಜಲಾಶಯ ಮೈದುಂಬಿಕೊಂಡಿದ್ದರೂ ಜಲರಾಶಿಯನ್ನು ಹಿಡಿದಿಟ್ಟುಕೊಂಡಿರುವ ಹೊಸದುರ್ಗ ತಾಲ್ಲೂಕಿನ ಹಿನ್ನೀರು ಪ್ರದೇಶದ ಜನರಿಗೇ ಆ ನೀರು ಸಿಕ್ಕಿಲ್ಲ. ಹಿನ್ನೀರಿನ ಸಮೀಪದಲ್ಲೇ ಇರುವ ಲಕ್ಕಿಹಳ್ಳಿ ಮುತ್ತೋಡು ಕಾರೇಹಳ್ಳಿ ಗುಡ್ಡದ ನೇರಲಕೆರೆ ವ್ಯಾಪ್ತಿಯ ಹಳ್ಳಿಗಳಿಗೆ ಕುಡಿಯುವ ನೀರಿಗೂ ತತ್ವಾರವಿದೆ. ಕೊಳವೆಬಾವಿ ಕೊರೆಯಿಸಿದರೂ ನೀರು ಬಾರದ ಸ್ಥಿತಿ ಇದೆ. ವಿ.ವಿ. ಸಾಗರಕ್ಕೆ ಹರಿಯುವ ನೀರಿನ ಮೂಲಕ ಹಿನ್ನೀರು ಭಾಗದ ಸುತ್ತಮುತ್ತಲ ಗ್ರಾಮಗಳ ಕೆರೆಗಳನ್ನು ತುಂಬಿಸುವ ಬೇಡಿಕೆ ಮೊದಲಿನಿಂದಲೂ ಇತ್ತು. ಹೊಸದುರ್ಗ ಭಾಗದ ಜನರು ನೀರಿನ ಪಾಲು ಕೇಳುತ್ತಲೇ ಇದ್ದರು. ಸದ್ಯ ಬೇಡಿಕೆ ಈಡೇರುವ ಕಾಲ ಬಂದಿದ್ದು ಹೊಸದೊಂದು ಯೋಜನೆ ಸಿದ್ಧಗೊಂಡಿದೆ.
ಶುಕ್ರವಾರ (ಜುಲೈ 25) ಲಕ್ಕಿಹಳ್ಳಿಯಲ್ಲಿ ಈ ಕುರಿತು ಸಭೆ ನಡೆಯಲಿದ್ದು ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ಯೋಜನೆಯ ವಿವರ ನೀಡಲಿದ್ದಾರೆ. ‘ಹಿನ್ನೀರು ವ್ಯಾಪ್ತಿಯ 7 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಗಳನ್ನು ತುಂಬಿಸಲು ಬೃಹತ್ ಯೋಜನೆ ರೂಪಿಸಲಾಗಿದೆ. ಹಿನ್ನೀರಿನಿಂದ ಅಪಾಯ ಎದುರಿಸುತ್ತಿರುವ ರೈತರ ಕಣ್ಣೀರು ಒರೆಸಲಾಗುವುದು’ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.