ADVERTISEMENT

ಚಿತ್ರದುರ್ಗ: ಹನಿ ನೀರಿಗೂ ಶುರುವಾಗಿದೆ ಲೆಕ್ಕಚಾರ

ಬತ್ತುತ್ತಿವೆ ಕೊಳವೆ ಬಾವಿ l ಗ್ರಾಮೀಣ ಭಾಗಕ್ಕೆ ಟ್ಯಾಂಕರ್‌ ನೀರಿನ ಆಸರೆ

ಕೆ.ಪಿ.ಓಂಕಾರಮೂರ್ತಿ
Published 4 ಏಪ್ರಿಲ್ 2024, 6:48 IST
Last Updated 4 ಏಪ್ರಿಲ್ 2024, 6:48 IST
ಚಿತ್ರದುರ್ಗ ತಾಲ್ಲೂಕಿನ ಬೆಳಗಟ್ಟ ಗ್ರಾಮದಲ್ಲಿ ಕುಡಿಯುವ ನೀರಿಗೆ ಬಿಂದಿಗೆ ಜತೆ ನಿಂತಿರುವ ಜನ 
ಪ್ರಜಾವಾಣಿ ಚಿತ್ರ– ವಿ.ಚಂದ್ರಪ್ಪ
ಚಿತ್ರದುರ್ಗ ತಾಲ್ಲೂಕಿನ ಬೆಳಗಟ್ಟ ಗ್ರಾಮದಲ್ಲಿ ಕುಡಿಯುವ ನೀರಿಗೆ ಬಿಂದಿಗೆ ಜತೆ ನಿಂತಿರುವ ಜನ ಪ್ರಜಾವಾಣಿ ಚಿತ್ರ– ವಿ.ಚಂದ್ರಪ್ಪ   

ಚಿತ್ರದುರ್ಗ: ಮುಂಜಾನೆ, ರಾತ್ರಿ ತಲಾ 6 ಬಿಂದಿಗೆ ಮೇಲೆ ಅರ್ಧ ಬಿಂದಿಗೆ ನೀರು ಹೆಚ್ಚು ಸಿಕ್ಕರೆ ಪುಣ್ಯ. ಬಂಗಾರದ ಲೆಕ್ಕದಂತೆ ಆಗಿದೆ ಬದುಕು... ಹೀಗೆ ಕುಡಿಯುವ ನೀರಿನ ಸಮಸ್ಯೆಯ ತೀವ್ರತೆ ಹೇಳುತ್ತಿದ್ದಾರೆ ಜಿಲ್ಲೆಯ ಗ್ರಾಮೀಣ ಭಾಗದ ಜನರು.

ದಿನದಿಂದ ದಿನಕ್ಕೆ ಬೇಸಿಗೆ ತಾಪಮಾನ ಏರಿಕೆ ಆಗುತ್ತಿದ್ದರೆ ಇತ್ತ ಅಂರ್ತಜಲ ಪಾತಾಳ ಸೇರುತ್ತಿದೆ. ಎಲ್ಲೆಡೆ ಬೋರ್‌ವೆಲ್‌ ಸದ್ದು ಕೇಳುತ್ತಿದೆಯೇ ವಿನಾ ನೀರು ಮಾತ್ರ ಕಾಣುತ್ತಿಲ್ಲ.‌ ನಮ್ಮೂರಲ್ಲಿ ಇವತ್ತು 8, ಆ ಊರಲ್ಲಿ 10.. ಹೀಗೆ ವಿಫಲವಾದ ಕೊಳವೆ ಬಾವಿ ಸಂಖ್ಯೆ ಸಹ ಎರಡಂಕಿ ದಾಟುತ್ತಿದೆ.

ಜನವರಿ ಅಂತ್ಯದಿಂದಲೇ ಜಿಲ್ಲೆಯಲ್ಲಿ ಆರಂಭವಾದ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಹುತೇಕ ಗ್ರಾಮಗಳು ಟ್ಯಾಂಕರ್‌ ನೀರಿನ ಮೇಲೆ ಅವಲಂಬಿತವಾಗಿವೆ.

ADVERTISEMENT

ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗೆ ಆಸರೆಯಾಗಿರುವ ಕೊಳವೆಬಾವಿಗಳಲ್ಲಿ ಅಂರ್ತಜಲ ಪಾತಾಳ ತಲುಪಿದೆ. ಒಂದು ಬಿಂದಿಗೆ ನೀರಿಗೆ ದಿನಪೂರ್ತಿ ಕಾಯುವ ಸ್ಥಿತಿ ಎದುರಾಗಿದೆ. ಜಿಲ್ಲೆಯ 367 ಹಳ್ಳಿಗಳಲ್ಲಿ ನೀರಿನ ಸಮಸ್ಯೆಯ ಲಕ್ಷಣ ಸ್ಪಷ್ಟವಾಗಿದೆ. ಈ ಸಂಖ್ಯೆ ದಿನ ಕಳೆದಂತೆ ಹೆಚ್ಚಾಗುತ್ತಿದೆ.

ಜಿಲ್ಲೆಯಲ್ಲಿ 189 ಗ್ರಾಮ ಪಂಚಾಯಿತಿಗಳಿದ್ದು, 1,069 ಗ್ರಾಮಗಳಿವೆ. ಜಿಲ್ಲೆಯ 40 ಗ್ರಾಮ ಪಂಚಾಯಿತಿಗಳ 104 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಈ ಪೈಕಿ 60 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. 39 ಗ್ರಾಮಗಳಿಗೆ ಖಾಸಗಿ ಕೊಳವೆಬಾವಿಗಳ ಮೂಲಕ ವ್ಯವಸ್ಥೆ ಕಲ್ಪಿಸಲಾಗಿದೆ. ಜತೆಗೆ ಮುಂಜಾಗ್ರತಾ ಕ್ರಮವಾಗಿ ಕೊಳವೆ ಬಾವಿ ಗುರುತಿಸುವ ಕೆಲಸ ಸಹ ನಡೆಯುತ್ತಿದೆ. ಮುಂದಿನ ಕೆಲವು ದಿನಗಳಲ್ಲಿ 364 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬರುವ ಸಾಧ್ಯತೆ ಇದೆ.

ಮೊಳಕಾಲ್ಮುರು, ಚಳ್ಳಕೆರೆ, ಹಿರಿಯೂರು, ಚಿತ್ರದುರ್ಗ, ಹೊಸದುರ್ಗ, ಹೊಳಲ್ಕೆರೆ ವ್ಯಾಪ್ತಿಯಲ್ಲಿ 170 ಖಾಸಗಿ ಕೊಳವೆಬಾವಿ ಮಾಲೀಕರ ಜತೆ ನೀರು ಸರಬರಾಜಿಗೆ ಜಿಲ್ಲಾಡಳಿತ ಒಪ್ಪಂದ ಮಾಡಿಕೊಂಡಿದೆ. ಅವುಗಳಿಂದ ನೀರಿನ ಸರಬರಾಜು ಮಾಡಲಾಗುತ್ತಿದೆ. ಈ ಕೊಳವೆ ಬಾವಿಗಳಲ್ಲೂ ನೀರು ಬತ್ತುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಗ್ರಾಮಗಳ ವ್ಯಾಪ್ತಿಯಲ್ಲಿ ಕೊಳವೆ ಬಾವಿ ಕೊರೆಯಿಸಿದರು ಸಹ ನೀರು ಲಭ್ಯವಾಗುತ್ತಿಲ್ಲ. 800ರಿಂದ 1,000 ಅಡಿ ಕೊರೆಯಿಸಿದರೂ ಹನಿ ನೀರು ಸಿಗುತ್ತಿಲ್ಲ. ಗ್ರಾಮ ಪಂಚಾಯಿತಿಯಿಂದ ಟ್ಯಾಂಕರ್‌ ವ್ಯವಸ್ಥೆ ಕಲ್ಪಿಸಿ ತಾತ್ಕಾಲಿಕವಾಗಿ ಸಮಸ್ಯೆ ಬಗೆಹರಿಸಲಾಗುತ್ತಿದೆ.

ಚಿತ್ರದುರ್ಗ ತಾಲ್ಲೂಕಿನ ಬೆಳಗಟ್ಟ, ದ್ಯಾಮವ್ವನಹಳ್ಳಿ, ಗುಡ್ಡದ ರಂಗವ್ವನಹಳ್ಳಿ, ಗೋನೂರು, ಕಾಲಗೆರೆ, ಕೂನಬೇವು, ಮದಕರಿಪುರ, ಮಾಡನಾಯಕನಹಳ್ಳಿ, ತುರುವನೂರು, ಬೊಮ್ಮನಹಳ್ಳಿ, ಐಯ್ಯನಹಳ್ಳಿ, ಇಸಾಮುದ್ರ ಹಾಗೂ ಮುದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ 21 ಹಳ್ಳಿಗಳು ತೀವ್ರ ಸಮಸ್ಯೆಗೆ ಸಿಲುಕಿವೆ. 14 ಖಾಸಗಿ ಬೋರ್‌ವೆಲ್‌ಗಳಲ್ಲಿ ನೀರಿನ ವ್ಯವಸ್ಥೆ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ 27 ಗ್ರಾಮ ಪಂಚಾಯಿತಿ ವ್ಯಾಪ್ತಿಯ 59 ಗ್ರಾಮಗಳಲ್ಲಿ ತೀವ್ರ ತರನಾದ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಬಹುದು ಎಂದು ತಾಲ್ಲೂಕು ಆಡಳಿತ ಅಂದಾಜಿಸಿದೆ.

ಖಾಸಗಿ ಕೊಳವೆಬಾವಿ ಲಭ್ಯವಿಲ್ಲದ ಮಟ್ಟಿಕಲ್ಲಹಳ್ಳಿ, ಹಳೇಕಲ್ಲಹಳ್ಳಿ, ಗೋನೂರು, ಮಾಡನಾಯಕನಹಳ್ಳಿ ಚಿಕ್ಕಪ್ಪನಹಳ್ಳಿಗೆ ಟ್ಯಾಂಕರ್‌ ನೀರು ಸರಬರಾಜು ಮಾಡಲಾಗುತ್ತಿದೆ. ಟ್ಯಾಂಕರ್‌ ನೀರು ಸಮಯಕ್ಕೆ ಸರಿಯಾಗಿ ಲಭ್ಯವಾಗುತ್ತಿಲ್ಲ ಎಂದು ದೂರುತ್ತಾರೆ ಗ್ರಾಮಸ್ಥರು.

ಕೊಳವೆ ಬಾವಿಗಳ ಅಂತರ್ಜಲ ಮಟ್ಟ ಕುಸಿದಿರುವುದರಿಂದ ಹೆಚ್ಚಿನ ಪೈಪ್‌ಗಳನ್ನು ಕೊಳವೆ ಬಾವಿಗಳಿಗೆ ಅಳವಡಿಸಿ ನೀರು ಪೂರೈಕೆ ಮಾಡಲಾಗುತ್ತಿದೆ. ಜಿಲ್ಲೆಯ ಎಲ್ಲ ತಾಲ್ಲೂಕಿಗೂ ಈಗಾಗಲೇ ₹ 25 ಲಕ್ಷವನ್ನು ಜಿಲ್ಲಾಡಳಿತ ಬಿಡುಗಡೆ ಮಾಡಿದೆ. ಆದರೆ ಅಂರ್ತಜಲ ಮಟ್ಟ ಕುಸಿಯುತ್ತಿರುವುದು ಆತಂಕ ಸೃಷ್ಟಿಸಿದೆ.

ಟಿ.ವೆಂಕಟೇಶ್‌
ನೀರು ಸರಬರಾಜಿನಲ್ಲಿ ವ್ಯತ್ಯಯ ಆಗುತ್ತಿರುವ ದೂರುಗಳು ಗ್ರಾಮೀಣ ಭಾಗದಿಂದ ಹೆಚ್ಚಾಗಿವೆ. ಸ್ಥಳಕ್ಕೆ ಖುದ್ದು ಭೇಟಿ ನೀಡಿ ಸಕಾಲಕ್ಕೆ ಪರಿಹಾರ ಕಲ್ಪಿಸಬೇಕು. ಟ್ಯಾಂಕರ್‌ಗಳಿಗೆ ಜಿಪಿಎಸ್‌ ತಂತ್ರಾಂಶ ಅಳವಡಿಸುವಂತೆ ಸೂಚಿಸಲಾಗಿದೆ.
-ಟಿ.ವೆಂಕಟೇಶ್‌ ಜಿಲ್ಲಾಧಿಕಾರಿ
ಹಂಪಮ್ಮ
ದಿನ ಬೆಳಿಗ್ಗೆ ಸಂಜೆ ಎರಡು ಗಂಟೆ ಟ್ಯಾಂಕ್‌ ನೀರು ಬಿಡುತ್ತಿದ್ದಾರೆ. ಮಳೆಯಿಲ್ಲದ ಕಾರಣ ಸಮಸ್ಯೆ ಹೆಚ್ಚಾಗಿದೆ. ಸರತಿಯಲ್ಲಿ ನಿಂತು ಎಲ್ಲರೂ ಹೊಂದಾಣಿಕೆಯಿಂದ ನೀರು ಹಿಡಿದುಕೊಳ್ಳುತ್ತೇವೆ.
ಹಂಪಮ್ಮ ನಿವಾಸಿ ಬೆಳಗಟ್ಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.