ADVERTISEMENT

ವಿಧಾನಪರಿಷತ್‌ ಚುನಾವಣೆಗೆ ಸ್ಪರ್ಧಿಸುವುದಿಲ್ಲ; ರಘು ಆಚಾರ್

ಹೊಸಬರಿಗೆ ಅವಕಾಶ ನೀಡುವಂತೆ ಕೆಪಿಸಿಸಿ ಅಧ್ಯಕ್ಷರ ಬಳಿ ಚರ್ಚೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2021, 11:31 IST
Last Updated 9 ನವೆಂಬರ್ 2021, 11:31 IST
ರಘು ಆಚಾರ್
ರಘು ಆಚಾರ್   

ಚಿತ್ರದುರ್ಗ:ವಿಧಾನಪರಿಷತ್‌ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಪಕ್ಷ ಹೊಸ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಲಿ ಎಂದು ವಿಧಾನಪರಿಷತ್ ಸದಸ್ಯ ರಘು ಆಚಾರ್ ತಿಳಿಸಿದರು.

‘ಜಿಲ್ಲೆಯ ಜನತೆ ಎರಡು ಬಾರಿ ವಿಧಾನಪರಿಷತ್ ಸದಸ್ಯನಾಗಿ ನನಗೆ ಆಶೀರ್ವದಿಸಿದ್ದಾರೆ. ಈ ಅಭಿಮಾನಕ್ಕೆ ನಾನೂ ಋಣಿಯಾಗಿದ್ದೇನೆ. ಹೊಸಬರಿಗೆ ಅವಕಾಶ ಸಿಗಬೇಕು ಎಂಬ ಉದ್ದೇಶದಿಂದ ಸ್ಪರ್ಧೆಯಿಂದ ಹಿಂದೆ ಸರಿದಿದ್ದೇನೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

‘ಭೀಮಸಮುದ್ರ ಜಿ.ಎಸ್‌.ಮಂಜುನಾಥ್, ಹನುಮಲಿ ಷಣ್ಮುಖಪ್ಪ, ಎಚ್‌. ಆಂಜನೇಯ ಅವರಲ್ಲಿ ಯಾರಿಗಾದರೂ ಟಿಕೆಟ್‌ ನೀಡುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಬಳಿ ಚರ್ಚಿಸಿದ್ದೇನೆ. ಯಾರಿಗೆ ಟಿಕೆಟ್‌ ನೀಡಿದರೂ ಅವರ ಗೆಲುವಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಹೇಳಿದರು.

ADVERTISEMENT

‘ರಾಜಕೀಯ ಜೀವನಕ್ಕೆ ಹೊಸ ಆಯಾಮ ನೀಡಿದ್ದು, ಮುನ್ನುಡಿ ಬರೆದಿದ್ದು ಚಿತ್ರದುರ್ಗ ಜಿಲ್ಲೆ. ಹೀಗಾಗಿ ಇಲ್ಲಿಯೇ ರಾಜಕೀಯ ಮುಂದುವರಿಸುತ್ತೇನೆ. ಜಿಲ್ಲೆಯಲ್ಲಿದ್ದು ಜನರ ಸಂಕಷ್ಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ’ ಎಂದು ಭರವಸೆ ನೀಡಿದರು.

ಪಕ್ಷದ ಹಿರಿಯ ಮುಖಂಡರು ಒತ್ತಡ ಹೇರಿದರೆ ಮಾತ್ರ ನಿರ್ಧಾರ ಬದಲಿಸುತ್ತೇನೆ. ಸದ್ಯ ಬೇರೆಯವರಿಗೆ ಅವಕಾಶ ಕೊಡುವುದು ನನ್ನ ಉದ್ದೇಶವಾಗಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರಕ್ರಿಯಿಸಿದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ. ತಾಜ್‌ಪೀರ್, ಮುಖಂಡರಾದ ಬಿ.ಟಿ. ಜಗದೀಶ್, ಡಿ.ಎನ್. ಮೈಲಾರಪ್ಪ, ಎನ್‌.ಡಿ. ಕುಮಾರ್, ಗೀತಾ ನಂದಿನಿಗೌಡ, ನಜ್ಮಾ ತಾಜ್‌, ಶಶಾಂಕ್‌, ಮಹಮ್ಮದ್‌ ರಫಿ, ಎನ್‌ಎಸ್‌ಯುಐ ರಾಷ್ಟ್ರೀಯ ಕಾರ್ಯದರ್ಶಿ ಮಮತಾ ನೇರ್ಲಿಗೆ, ರಾಜ್ಯ ಘಟಕದ ಅಧ್ಯಕ್ಷ ಕೀರ್ತಿ ಗಣೇಶ್‌, ವಿನಯ್‌ ಗೋಡೆಮನೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.