ADVERTISEMENT

ಆರ್‌ಎಸ್‌ಎಸ್‌ ಇಲ್ಲದಿದ್ದರೆ ಈ ದೇಶ ಪಾಕಿಸ್ತಾನವಾಗುತ್ತಿತ್ತು: ಕೆ.ಎಸ್. ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2021, 15:55 IST
Last Updated 11 ಅಕ್ಟೋಬರ್ 2021, 15:55 IST
ಕೆ.ಎಸ್‌.ಈಶ್ವರಪ್ಪ
ಕೆ.ಎಸ್‌.ಈಶ್ವರಪ್ಪ   

ಹೊಸದುರ್ಗ (ಚಿತ್ರದುರ್ಗ): ‘ಶಿವಾಜಿ ಜನಿಸದಿದ್ದರೆ ಈ ದೇಶದಲ್ಲಿ ಹಿಂದೂಗಳು ಇರುತ್ತಿರಲಿಲ್ಲ. ಹಾಗೆಯೇ ಆರ್‌ಎಸ್‌ಎಸ್‌ ಇಲ್ಲದಿದ್ದರೆ ಈ ದೇಶ ಪಾಕಿಸ್ತಾನವೋ ಅಥವಾ ಇನ್ನೊಂದೋ ಆಗುತ್ತಿತ್ತು’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ತಿರುಗೇಟು ನೀಡಿದರು.

ತಾಲ್ಲೂಕಿನ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾಧ್ಯಮದವರ ಜೊತೆ ಮಾತನಾಡಿದರು. ‘ರಾಮನ ಬಗ್ಗೆ ರಾವಣನಿಗೆ ಎಲ್ಲಾ ಗೊತ್ತಿತ್ತು. ಆದರೆ, ಶಿವಾಜಿ ಬಗ್ಗೆ ಔರಂಗಜೇಬ್‌ಗೆ ಏನೂ ಗೊತ್ತಿರಲಿಲ್ಲ. ಶಿವಾಜಿ ಜನಿಸದಿದ್ದರೆ ಈ ದೇಶದಲ್ಲಿ ಹಿಂದೂಗಳು ಇರುತ್ತಿರಲಿಲ್ಲ’ ಎಂದರು.

‘ಇಂದಿರಾಗಾಂಧಿ ಹಾಗೂ ನೆಹರೂ ಅವರು ಆರ್‌ಎಸ್‌ಎಸ್‌ ಅನ್ನು ಟೀಕಿಸಿ ಅನುಭವಿಸಿದ್ದಾರೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌, ಎಚ್‌.ಡಿ. ಕುಮಾರಸ್ವಾಮಿ ಅವರಿಗೂ ನಾನು ಹೇಳುತ್ತೇನೆ, ಆರ್‌ಎಸ್‌ಎಸ್‌ ಬಗ್ಗೆ ಮಾತನಾಡೋದು ಬೆಂಕಿಯ ಜತೆ ಸರಸವಾಡಿದಂತೆ’ ಎಂದು ಎಚ್ಚರಿಸಿದರು.

ADVERTISEMENT

‘ಕೊಲೆಗಡುಕರು ಕಾಂಗ್ರೆಸ್ಸಿಗರೇ ಹೊರತು ಬಿಜೆಪಿಯವರಲ್ಲ’ ಎಂದು ವಿರೋಧ ಪಕ್ಷದದವರ ಟೀಕೆಗೆ ತಿರುಗೇಟು ನೀಡಿದರು.

‘ಮುಸ್ಲಿಂ ಮತಕ್ಕಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಹಿಂದೆ ಗೋಹತ್ಯೆ ತಡೆಯಲು ಹೋದ 32 ಮಂದಿ ಹಿಂದೂ ಯುವಕರ ಕಗ್ಗೊಲೆ ಆಗಿದ್ದರಿಂದ ಅವರು ಅಧಿಕಾರ ಕಳೆದುಕೊಂಡರು. ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಕ್ರೈಸ್ತರ ಸಭೆಗೆ ಹೋಗಿ ಅವರ ಮನವೊಲಿಸುವ ಮಾತನಾಡುತ್ತಿದ್ದಾರೆ. ರಾಜಕೀಯ ಮಾಡಲು ಬೇಕಾದಷ್ಟು ವಿಚಾರಗಳು ಇವೆ. ಆದರೆ ರಾಷ್ಟ್ರೀಯ ವಿಚಾರಗಳ ಬಗ್ಗೆ ರಾಜಕಾರಣ ಬೇಡ. ದೇಶದ ಯುವಕರಿಗೆ ಆರ್‌ಎಸ್‌ಎಸ್‌ ರಾಷ್ಟ್ರೀಯ ವಿಚಾರವನ್ನು ತಿಳಿಸುತ್ತಿದೆ. ಆರ್‌ಎಸ್‌ಎಸ್‌ ಕ್ಯಾಂಪ್‌ಗೆ ಈ ಹಿಂದೆ ಬಂದಿದ್ದ ಗಾಂಧೀಜಿ ಅವರು ‘ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ಎಂದು ಶ್ಲಾಘಿಸಿದ್ದರು’ ಎಂದು ಸ್ಮರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.