
ಹಿರಿಯೂರು: ‘ಮನುಷ್ಯರ ಬದುಕು ಚಲನಚಿತ್ರ ಅಥವಾ ಧಾರಾವಾಹಿಯ ಕಥೆಯಂತಲ್ಲ ಎಂಬುದನ್ನು ಎಲ್ಲ ಮಹಿಳೆಯರೂ ನೆನಪಿನಲ್ಲಿಡಬೇಕು. ಹೀಗಾಗಿ ನಮ್ಮ ರಕ್ಷಣೆಗೆ ಅಗತ್ಯವಾದ ರಕ್ಷಣಾ ಕಲೆಗಳನ್ನು ಕರಗತ ಮಾಡಿಕೊಂಡಲ್ಲಿ ಧೈರ್ಯವಾಗಿ ಬದುಕು ಸಾಗಿಸಬಹುದು’ ಎಂದು ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ರೋಷಿಣಿ ಮಹೇಶ್ ಹೇಳಿದರು.
ನಗರದ ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನಲ್ಲಿ ಬುಧವಾರ ಕ್ಲಬ್ ವತಿಯಿಂದ ಏರ್ಪಡಿಸಿದ್ದ ರಕ್ಷಣಾತ್ಮಕ ಕಲೆಯ ಬಗ್ಗೆ ಮಾಹಿತಿ ಹಾಗೂ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಎಲ್ಲಿ ಹೆಣ್ಣು ಗೌರವಿಸಲ್ಪಡುತ್ತಾಳೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ ಎಂಬ ಮಾತಿದೆ. ಆದರೆ, ಅಂತಹ ಗೌರವ ನಮಗೆ ಸಿಗುತ್ತಿದೆಯೇ ಎಂಬ ಪ್ರಶ್ನೆ ನಿತ್ಯದ ವಿದ್ಯಮಾನಗಳನ್ನು ಗಮನಿಸಿದಾಗ ಪ್ರತಿ ಮಹಿಳೆಯನ್ನೂ ಕಾಡುತ್ತದೆ. ಹೆಣ್ಣಿನ ಮೇಲೆ ಅತ್ಯಾಚಾರ, ಕೊಲೆ, ಲೈಂಗಿಕ ದೌರ್ಜನ್ಯ ಎಂಬ ಸುದ್ದಿಗಳು ಮಾಧ್ಯಮಗಳಲ್ಲಿ ಎದ್ದು ಕಾಣುತ್ತವೆ. ಮನೆಯಿಂದ ಹೊರಗೆ ದುಡಿಯುವ ಎಲ್ಲ ಮಹಿಳೆಯರಿಗೂ ಸರ್ಕಾರ ರಕ್ಷಣೆ ಕೊಡಲು ಸಾಧ್ಯವಿಲ್ಲ ಎಂಬುದು ವಾಸ್ತವ. ಹೀಗಾಗಿ ಹೊರಗಿನ ಸಮಾಜದಲ್ಲಿ ನಿರ್ಭೀತಿಯಿಂದ ಓಡಾಡಲು ಕರಾಟೆ, ಕುಂಗ್ ಫೂನಂತಹ ವಿದ್ಯೆಗಳನ್ನು ಕಲಿಯುವುದು ಇಂದಿನ ಅಗತ್ಯ’ ಎಂದು ಪ್ರತಿಪಾದಿಸಿದರು.
ಮಹಿಳೆಯರು ಕರಾಟೆ ಕಲಿತಿದ್ದರೆ ಆಪತ್ತು ಎದುರಾದಾಗ ಹೇಗೆ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಬಹುದು ಎಂಬುದನ್ನು ಕರಾಟೆ ತರಬೇತುದಾರ ರಂಗಸ್ವಾಮಿ ಪ್ರದರ್ಶನದ ಮೂಲಕ ತೋರಿಸಿದರು.
ಪ್ರಾಂಶುಪಾಲ ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಕ್ಲಬ್ ಕಾರ್ಯದರ್ಶಿ ಸರ್ವಮಂಗಳಾ ರಮೇಶ್, ಪದ್ಮಜಾ, ಸೌಮ್ಯಾ ಪ್ರಶಾಂತ್, ಇಂಪಾ ರಿತೇಶ್, ಲತಾ ಅನಿಲ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.