ADVERTISEMENT

ಮಹಿಳೆಯರ ಬದುಕಿಗೆ ಬೆಳಕಾದ ‘ದೀಪಾ’

ಜಿ.ಬಿ.ನಾಗರಾಜ್
Published 8 ಮಾರ್ಚ್ 2020, 11:30 IST
Last Updated 8 ಮಾರ್ಚ್ 2020, 11:30 IST
ದೀಪಾ ಅವರ ಫ್ಯಾನ್ಸಿ ಸ್ಟೋರ್‌
ದೀಪಾ ಅವರ ಫ್ಯಾನ್ಸಿ ಸ್ಟೋರ್‌   

ಚಿತ್ರದುರ್ಗ: ಸ್ವಸಹಾಯ ಸಂಘ ನೀಡಿದ ಸಣ್ಣ ಸಾಲದ ನೆರವಿನಿಂದ ಬದುಕು ಕಟ್ಟಿಕೊಂಡ ದೀಪಾ,ಹಲವು ಗ್ರಾಮೀಣ ಮಹಿಳೆಯರ ಬದುಕಿಗೆ ಬೆಳಕಾಗಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಎದುರಾದ ಸಂಕಷ್ಟಗಳನ್ನು ಮೆಟ್ಟಿ ಸ್ವಾವಲಂಬಿಯಾಗಿ ಜೀವನ ಕಟ್ಟಿಕೊಂಡಿದ್ದಾರೆ.

ಚಿತ್ರದುರ್ಗ ತಾಲ್ಲೂಕಿನ ಗೊಡಬನಾಳ್‌ ಗ್ರಾಮದ ದೀಪಾ ನಾಲ್ಕನೇ ತರಗತಿವರೆಗೆ ಮಾತ್ರ ವ್ಯಾಸಂಗ ಮಾಡಿದ್ದಾರೆ. ಇಷ್ಟಪಟ್ಟು ಜೀವನಕ್ಕೆ ಜತೆಯಾದ ಪತಿ ಸಿದ್ದೇಶ್‌ ಅಕಾಲಿಕ ಮರಣಕ್ಕೆ ತುತ್ತಾದಾಗ ಬದುಕೇ ದುಸ್ತರವಾಗಿತ್ತು. ಮನೆ,ಜಮೀನು ಇಲ್ಲದೇ ಅಕ್ಷರಶಃ ನಲುಗಿ ಹೋಗಿದ್ದರು. ಸಂಕಷ್ಟದ ಸಂದರ್ಭದಲ್ಲಿ ನೆರವಿಗೆ ಬಂದಿದ್ದು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ.

ಗ್ರಾಮದ ಹತ್ತಾರು ಮಹಿಳೆಯರು ಸೇರಿ ರಚಿಸಿದ ಸ್ವಸಹಾಯ ಸಂಘಕ್ಕೆ ದೀಪಾ ಸದಸ್ಯೆಯಾದರು.₹ 30ಸಾವಿರ ಸಾಲ ಪಡೆದು ಹಳ್ಳಿಯಲ್ಲೇ ಫ್ಯಾನ್ಸಿ ಸ್ಟೋರ್‌ ತೆರೆದರು. ಮದುವೆ ಸೇರಿ ಇತರ ಸಮಾರಂಭಗಳಿಗೆ ಫ್ಯಾನ್ಸಿ ಆಭರಣ ಬಾಡಿಗೆ ನೀಡುವುದು,ಅಲಂಕಾರಿಕ ಸಾಮಗ್ರಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ‘ರುಡ್‌ಸೆಟ್‌’ ಹಾಗೂ ‘ಜ್ಞಾನವಿಕಾಸ’ ಸಂಸ್ಥೆಯಲ್ಲಿ ಪಡೆದ ತರಬೇತಿ ಇವರ ಬದುಕನ್ನು ಬದಲಿಸಿತು.

ADVERTISEMENT

ಸ್ವಸಹಾಯ ಸಂಘದಲ್ಲಿ ಸಾಲ ಸೌಲಭ್ಯ ಪಡೆದು ರೊಟ್ಟಿಯಂತ್ರ ಖರೀದಿಸಿದರು. ಮನೆಯ ಸಮೀಪದ ಖಾಲಿ ನಿವೇಶನವೊಂದನ್ನು ಬಾಡಿಗೆ ಪಡೆದು ಶೆಡ್‌ ನಿರ್ಮಿಸಿಕೊಂಡರು. ಪಂಡರಹಳ್ಳಿ ಹಾಗೂ ಗೊಡಬನಾಳ್‌ ಗ್ರಾಮದ ನಾಲ್ಕಾರು ಮಹಿಳೆಯರಿಗೆ ಕೆಲಸ ನೀಡಿದರು. ‘ಶ್ರೀಗುರು ಕರಿಬಸವೇಶ್ವರ ಕಾಂಡಿಮೆಂಟ್ಸ್‌’ ಹೆಸರಿನಲ್ಲಿ ರೊಟ್ಟಿ,ಚಟ್ನಿಪುಡಿ,ಶೇಂಗಾ ಬೀಜ ಹಾಗೂ ಚಿಪ್ಸ್‌ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ.

‘ಪತಿಯನ್ನು ಕಳೆದುಕೊಂಡಾಗ ಬದುಕು ದುರ್ಬರವಾಗಿತ್ತು. ಇಬ್ಬರು ಚಿಕ್ಕ ಮಕ್ಕಳಿಗಾಗಿ ಜೀವನ ಸಾಗಿಸಬೇಕು ಎಂಬ ದೃಢ ನಿರ್ಧಾರ ಕೈಗೊಂಡೆ. ಆರ್ಥಿಕ ನೆರವು ನೀಡುವುದಾಗಿ ಸ್ವಸಹಾಯ ಸಂಘ ಆಶ್ವಾಸನೆ ನೀಡಿತು. ಐದಾರು ವರ್ಷಗಳಲ್ಲಿ ಸ್ವಾವಲಂಬಿ ಜೀವನ ಕಟ್ಟಿಕೊಂಡಿದ್ದೇನೆ. ಇತರ ಮಹಿಳೆಯರಿಗೂ ಉದ್ಯೋಗ ನೀಡಿದ್ದೇನೆ’ ಎಂದು ಹರ್ಷ ವ್ಯಕ್ತಪಡಿಸುತ್ತಾರೆ ದೀಪಾ.

ಚಿತ್ರದುರ್ಗದ ಹಲವು ಹೋಟೆಲ್‌,ಅಂಗಡಿ,ಸುತ್ತಲಿನ ಗ್ರಾಮಗಳಲ್ಲಿ ‘ಕರಿಬಸವೇಶ್ವರ ಕಾಂಡಿಮೆಂಟ್ಸ್‌’ ರೊಟ್ಟಿಗೆ ಹೆಚ್ಚು ಬೇಡಿಕೆ. ಜೋಳ ಹಾಗೂ ಸಜ್ಜೆ ರೊಟ್ಟಿಯನ್ನು ಗ್ರಾಹಕರು ಹೆಚ್ಚು ಇಷ್ಟಪಡುತ್ತಾರೆ. ಅಗತ್ಯ ಚಟ್ನಿ,ಪಲ್ಯ ಕೂಡ ನೀಡುತ್ತಾರೆ. 50ಕ್ಕೂ ಹೆಚ್ಚು ಅಂಗಡಿಗಳಿಗೆ ಚಿಪ್ಸ್‌ ಮಾರಾಟ ಮಾಡುತ್ತಾರೆ. ಈ ಸ್ವಾವಲಂಬಿ ಬದುಕನ್ನು ನೋಡಲು ಹಲವೆಡೆಯಿಂದ ಜನರು ಗೊಡಬನಾಳ್‌ಗೆ ಭೇಟಿ ನೀಡುತ್ತಿದ್ದಾರೆ.

‘ರೊಟ್ಟಿ ಹಾಗೂ ಚಿಪ್ಸ್‌ಗಳನ್ನು ಹಳ್ಳಿಗೆ ಕೊಂಡೊಯ್ದು ಮಾರಾಟ ಮಾಡುತ್ತಿದ್ದೆವು. ಮಾರುಕಟ್ಟೆಯಲ್ಲಿ ಪರಿಚಯವಾದ ಬಳಿಕ ಚಿತ್ರದುರ್ಗ ನಗರದ ದೊಡ್ಡ ಅಂಗಡಿ,ಹೋಟೆಲ್‌ಗಳಿಂದ ಬೇಡಿಕೆ ಬಂದಿತು. ನಿತ್ಯ ಬಸ್ಸಿನಲ್ಲಿ ಕೊಂಡೊಯ್ದು ಪೂರೈಕೆ ಮಾಡುವುದು ಕಷ್ಟವಾಗುತ್ತಿತ್ತು. ಹೀಗಾಗಿ,ಆಮ್ನಿಯೊಂದನ್ನು ಖರೀದಿಸಿದ್ದೇವೆ. ಆಮ್ನಿ ಚಾಲಕನೇ ಉತ್ಪನ್ನಗಳನ್ನು ಸರಬರಾಜು ಮಾಡುತ್ತಾನೆ’ ಎಂದಾಗ ದೀಪಾ ಅವರ ಕಣ್ಣಲ್ಲಿ ಜೀವನ ಗೆದ್ದ ವಿಶ್ವಾಸ ಇಣುಕುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.