ADVERTISEMENT

ಹೊಸದುರ್ಗ: ಸಮೃದ್ಧ ಬದುಕು ನೀಡಿದ ಸುಗಂಧರಾಜ

​ಪ್ರಜಾವಾಣಿ ವಾರ್ತೆ
Published 11 ಜೂನ್ 2025, 6:23 IST
Last Updated 11 ಜೂನ್ 2025, 6:23 IST
ಹೊಸದುರ್ಗದ ಅಂಚಿಬಾರಿಹಟ್ಟಿಯಲ್ಲಿ ಶಿವಕುಮಾರ್ ವಿ. ಅವರ ಜಮೀನಿನಲ್ಲಿ ಬೆಳೆದು ನಿಂತಿರುವ ಸುಗಂಧರಾಜ
ಹೊಸದುರ್ಗದ ಅಂಚಿಬಾರಿಹಟ್ಟಿಯಲ್ಲಿ ಶಿವಕುಮಾರ್ ವಿ. ಅವರ ಜಮೀನಿನಲ್ಲಿ ಬೆಳೆದು ನಿಂತಿರುವ ಸುಗಂಧರಾಜ   

ಹೊಸದುರ್ಗ: ತಾಲ್ಲೂಕಿನ ಅಂಚಿಬಾರಿಹಟ್ಟಿಯ ಶಿವಕುಮಾರ್‌ ಅವರ ಜಮೀನಿನಲ್ಲಿರುವ ಸುಗಂಧರಾಜ ಹೂವಿನ ಸುವಾಸನೆ ದಾರಿಹೋಕರನ್ನು ತನ್ನತ್ತ ಸೆಳೆಯುತ್ತದೆ. ಪ್ರತಿಗಿಡಗಳೂ ಹೂ ತುಂಬಿ, ಪರಿಮಳ ಬೀರುತ್ತಾ ಮನಕ್ಕೆ ಮುದ ನೀಡುತ್ತಿವೆ. ಪುಷ್ಪ‍ ಕೃಷಿ ಮಾಲೀಕರಿಗೂ ಉತ್ತಮ ಆದಾಯ ತಂದು ಕೊಟ್ಟಿದೆ. ಎರಡು ವರ್ಷಗಳಲ್ಲಿ ₹4 ಲಕ್ಷ ಆದಾಯ ಪಡೆದಿರುವ ಅವರು ಸಮೃದ್ಧ ಜೀವನ ನಡೆಸುತ್ತಿದ್ದಾರೆ.

ಈ ಮೊದಲೆಲ್ಲಾ ಎಲ್ಲ ರೈತರಂತೆ ಶಿವಕುಮಾರ್‌ ವಿ. ಅವರು ಮೆಕ್ಕೆಜೋಳ, ರಾಗಿ, ಸಜ್ಜೆ ಸೇರಿ ಇತರೆ ಬೆಳೆಗಳನ್ನು ಬೆಳೆಯುತ್ತಿದ್ದರೂ ಮಾಡಿದ ಖರ್ಚು ವಾಪಸ್ ಬರುತ್ತಿರಲಿಲ್ಲ. ಹಾಗಾಗಿ ಕಡಿಮೆ ಬಂಡವಾಳ ಹೂಡಿ ಅಧಿಕ ಬೆಳೆ ಬೆಳೆಯುವ ಮಾರ್ಗದ ಕುರಿತು ಆಲೋಚನೆಯಲ್ಲಿದ್ದಾಗ, ಸ್ನೇಹಿತನ ಸಲಹೆ ಮೇರೆಗೆ ಸುಗಂಧರಾಜ ಕೃಷಿಗೆ ಮುಂದಾದರು. 2 ಎಕರೆ ಭೂಮಿಯಲ್ಲಿ 7 ವರ್ಷಗಳಿಂದ ಸುಗಂಧರಾಜ ಬೆಳೆಯುತ್ತಿದ್ದಾರೆ. 

ಸುಗಂಧರಾಜ ಹೂವಿನ ಗಡ್ಡೆಗಳನ್ನು ಶುಚಿಗೊಳಿಸಿ ತಿಂಗಳ ಮೊದಲೇ ಹದ ಮಾಡಿದ ಭೂಮಿಗೆ ನಾಟಿ ಮಾಡಬೇಕು. ತಿಂಗಳಿಗೊಮ್ಮೆ ಕಳೆ ತೆಗೆಯಬೇಕು. ಕಳೆ ತೆಗೆದರೆ ಗಿಡ ಸಮೃದ್ಧವಾಗಿ ಬೆಳೆಯುತ್ತದೆ. ದಿನ ಬಿಟ್ಟು ದಿನ ನೀರು ಹರಿಸಬೇಕು. ಭೂಮಿ ಸದಾ ತಂಪಾಗಿರುವಂತೆ ನೋಡಿಕೊಳ್ಳಬೇಕು. ಮನೆಯವರೆಲ್ಲಾ ಪುಷ್ಪ ಕೃಷಿಯಲ್ಲಿ ತೊಡಗಿದರೆ, ವೆಚ್ಚ ತಗ್ಗಿಸಬಹುದು. ಕಡಿಮೆ ಸಮಯದಲ್ಲಿ ಅಧಿಕ ಲಾಭ ಗಳಿಸಬಹುದು ಎನ್ನುತ್ತಾರೆ ರೈತ ಶಿವಕುಮಾರ್‌ ವಿ.

ADVERTISEMENT
ಶಿವಕುಮಾರ್ ವಿ.

ಖರ್ಚು–ವೆಚ್ಚ...

‘ಲಕ್ಕಿಹಳ್ಳಿ ಮಾದಿಹಳ್ಳಿಯಲ್ಲಿ ಗಡ್ಡೆ ತರಿಸಿದ್ದೆ. ಗೊಬ್ಬರ ಔಷಧಿ ಇನ್ನಿತರೆ ಸೇರಿ ವರ್ಷಕ್ಕೆ ₹30 ಸಾವಿರದಿಂದ ₹40 ಸಾವಿರ ಖರ್ಚಾಗುತ್ತದೆ. ಮನೆಯವರೆಲ್ಲಾ ಸೇರಿ ಬೆಳಗಿನ ಅವಧಿಯಲ್ಲಿ ಹೂ ಬಿಡಿಸಲು ತೊಡಗುತ್ತಾರೆ. ಸುಗಂಧರಾಜ ಹೂವನ್ನು ನಿತ್ಯ ಹಿರಿಯೂರು ಮಾರುಕಟ್ಟೆಗೆ ಒಯ್ಯಲಾಗುತ್ತದೆ. ದಿನಕ್ಕೆ 30ರಿಂದ 40 ಕೆ.ಜಿವರೆಗೂ ಹೂ ಪಡೆಯಬಹುದು. ಕೆ.ಜಿ ಗೆ ₹50 ದರ ಸಿಕ್ಕರೂ ಒಳ್ಳೆಯದರು. ಹಬ್ಬ ಮದುವೆ ಸಂದರ್ಭಗಳಲ್ಲಿ  7 ಕೆ.ಜಿ ಹೂವು ಇರುವ ಜೋಡಿ ಕವರ್‌ಗೆ ₹800ರಿಂದ ₹900 ದರ ಸಿಗುತ್ತದೆ. ಒಮ್ಮೊಮ್ಮೆ ₹1000ದಿಂದ ₹1500 ದರ ಸಿಕ್ಕ ನಿದರ್ಶನವೂ ಇದೆ. ವರ್ಷಕ್ಕೆ ₹1 ಲಕ್ಷದಿಂದ ₹1.5 ಲಕ್ಷ ಆದಾಯ ಗಳಿಸಬಹುದು’ ಎನ್ನುತ್ತಾರೆ ಅಂಚಿಬಾರಿಹಟ್ಟಿಯ ರೈತ ಶಿವಕುಮಾರ್‌ ವಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.