ADVERTISEMENT

ರಾಜ್ಯವನ್ನು ವ್ಯಸನ ಮುಕ್ತವನ್ನಾಗಿಸಲು ಒತ್ತಾಯಿಸಿ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2021, 7:48 IST
Last Updated 21 ಅಕ್ಟೋಬರ್ 2021, 7:48 IST
ಎಚ್.ಸಿ. ಲಾವಣ್ಯ
ಎಚ್.ಸಿ. ಲಾವಣ್ಯ   

ಹಿರಿಯೂರು: ಕರ್ನಾಟಕವನ್ನು ವ್ಯಸನಮುಕ್ತ ರಾಜ್ಯವನ್ನಾಗಿಸಲು ‘ವ್ಯಸನ ದಾಸನಾಗುವ ಬದಲು, ಶಿಕ್ಷಣದ ದಾಸನಾಗು’ ಎಂಬ ಘೋಷಣೆಯೊಂದಿಗೆ ತಾಲ್ಲೂಕಿನ ಹೇಮದಳ ಗ್ರಾಮದ ವಿದ್ಯಾರ್ಥಿನಿ ಎಚ್.ಸಿ. ಲಾವಣ್ಯಾ ಅ. 21 ಮತ್ತು 22ರಂದು ಹಿರಿಯೂರಿನ ಅಂಬೇಡ್ಕರ್ ವೃತ್ತದಿಂದ ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ.

ಪ್ರಸ್ತುತ ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಪ್ರಥಮ ಬಿ.ಎಸ್‌ಸಿ. ವ್ಯಾಸಂಗ ಮಾಡುತ್ತಿರುವ ಲಾವಣ್ಯಾ, 2016ರಲ್ಲಿ 8ನೇ ತರಗತಿ ಓದುತ್ತಿದ್ದಾಗ ಜಿಲ್ಲೆಯನ್ನು ಬಯಲು ಶೌಚಮುಕ್ತ ಮಾಡುವಂತೆ ಒತ್ತಾಯಿಸಿ ಸತ್ಯಾಗ್ರಹ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.

‘ಗ್ರಾಮೀಣ ಭಾಗದಲ್ಲಿ ಇಂದಿಗೂ ಶೌಚಾಲಯ ವ್ಯವಸ್ಥೆ ಇಲ್ಲದ ಲಕ್ಷಾಂತರ ಮಂದಿ ಇದ್ದಾರೆ. ಬಯಲು ಶೌಚಕ್ಕೆ ಹೋಗುವುದೆಂದರೆ ಅಪಾಯಗಳನ್ನು ಆಹ್ವಾನಿಸಿದಂತೆ. ಕಾಡುಪ್ರಾಣಿಗಳ ಹಾವಳಿ, ವಿಷಜಂತುಗಳ ಕಾಟ, ಇವನ್ನು ಮೀರಿಸಿದ ರೀತಿಯಲ್ಲಿ ಕಾಮುಕರ ಉಪಟಳ ಎಲ್ಲವನ್ನೂ ಮಹಿಳೆಯರು ಅನುಭವಿಸುತ್ತಿದ್ದರು. ಇಂತಹ ದೃಶ್ಯಗಳನ್ನು ಕಣ್ಣಾರೆ ಕಂಡು ಉಪವಾಸ ಸತ್ಯಾಗ್ರಹ ಆರಂಭಿಸಿದ್ದೆ. ಅಂದು ಸಿ.ಎಂ. ಆಗಿದ್ದ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದೆ. ಆಗ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಎಚ್.ಕೆ. ಪಾಟೀಲರು ಸ್ಪಂದಿಸಿ ಅಧಿಕಾರಿಗಳ ತಂಡವನ್ನು ಹೇಮದಳ ಗ್ರಾಮಕ್ಕೆ ಕಳುಹಿಸಿದ್ದರು. ಇಂದಿಗೂ ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶೇ 40ರಷ್ಟು ಕುಟುಂಬಗಳಿಗೆ ಶೌಚಾಲಯಗಳು ಇಲ್ಲದಿರುವುದು ಬೇಸರದ ಸಂಗತಿ’ ಎನ್ನುತ್ತಾರೆ ಲಾವಣ್ಯಾ.

ADVERTISEMENT

‘ರಾಜ್ಯದಲ್ಲಿ ಮದ್ಯಪಾನ, ಜೂಜು, ಮಾದಕ ವಸ್ತು ಸೇವನೆಗೆ ಯುವ ಪೀಳಿಗೆಯವರು ಬಲಿಯಾಗುತ್ತಿದ್ದು, ಅವರನ್ನು ವ್ಯಸನ ಮುಕ್ತರನ್ನಾಗಿಸಬೇಕು ಎಂದು ಎರಡು ದಿನಗಳ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಇದು ನನ್ನ ಸಾಮಾಜಿಕ ಜವಾಬ್ದಾರಿ ಎಂಬ ಭಾವನೆ ನನ್ನದು. ಆರೋಗ್ಯವಂತ ಸಮಾಜದ ಕನಸು ಕಾಣುವ ಪ್ರತಿಯೊಬ್ಬರೂ ನನ್ನ ಜೊತೆ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬಹುದು’ ಎಂದು ಲಾವಣ್ಯಾ ಮನವಿ ಮಾಡಿದ್ದಾರೆ.

ಅ. 21ರಂದು ಬೆಳಿಗ್ಗೆ 11ಕ್ಕೆ ನಗರದ ಸಾರ್ವಜನಿಕ ಆಸ್ಪತ್ರೆ ಮುಂಭಾಗದಲ್ಲಿರುವ ಡಾ. ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ಪಾದಯಾತ್ರೆ ಆರಂಭವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.