ADVERTISEMENT

ಜಿಲ್ಲಾ ಪಂಚಾಯಿತಿ ಮಾಸಿಕ ಕೆಡಿಪಿ ಸಭೆ; ಶುಲ್ಕ ವಸೂಲಿ ವಿರುದ್ಧ ಅಸಮಾಧಾನ

ಖಾಸಗಿ ಶಾಲೆಗಳ ವರ್ತನೆಗೆ ಕಿಡಿ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2021, 9:39 IST
Last Updated 12 ಮಾರ್ಚ್ 2021, 9:39 IST
ಚಿತ್ರದುರ್ಗ ಜಿಲ್ಲಾ ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಅಧ್ಯಕ್ಷೆ ಶಶಿಕಲಾ ಸುರೇಶಬಾಬು ಮಾತನಾಡಿದರು. ಉಪಾಧ್ಯಕ್ಷೆ ವಿಜಯಲಕ್ಷ್ಮಿ ಪ್ರಕಾಶ್, ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಕೆ.ನಂದಿನಿ ದೇವಿ ಇದ್ದಾರೆ.
ಚಿತ್ರದುರ್ಗ ಜಿಲ್ಲಾ ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಅಧ್ಯಕ್ಷೆ ಶಶಿಕಲಾ ಸುರೇಶಬಾಬು ಮಾತನಾಡಿದರು. ಉಪಾಧ್ಯಕ್ಷೆ ವಿಜಯಲಕ್ಷ್ಮಿ ಪ್ರಕಾಶ್, ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಕೆ.ನಂದಿನಿ ದೇವಿ ಇದ್ದಾರೆ.   

ಚಿತ್ರದುರ್ಗ: ಸರ್ಕಾರದ ನಿರ್ದೇಶನ ಉಲ್ಲಂಘಿಸಿ ಮಕ್ಕಳಿಂದ ಪೂರ್ಣ ಪ್ರಮಾಣದ ಶುಲ್ಕ ವಸೂಲಿ ಮಾಡುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಜಿಲ್ಲಾ ಪಂಚಾಯಿತಿ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು. ಇಂತಹ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಸೂಚನೆ ನೀಡಲಾಯಿತು.

ಜಿಲ್ಲಾ ಪಂಚಾಯಿತಿಯಲ್ಲಿ ಶಶಿಕಲಾ ಸುರೇಶ್ ಬಾಬು ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಈ ವಿಚಾರ ಚರ್ಚೆಗೆ ಬಂದಿತು. ವಿಷಯ ಪ್ರಸ್ತಾಪಿಸಿದ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ನರಸಿಂಹರಾಜು ಬೇಸರ ಹೊರಹಾಕಿದರು.

‘ಕೋವಿಡ್‌ ಕಾರಣಕ್ಕೆ ಬಾಗಿಲು ಮುಚ್ಚಿದ್ದ ಶಾಲೆಗಳು ಇತ್ತೀಚೆಗೆ ಕಾರ್ಯಾರಂಭಗೊಂಡಿವೆ. ಶೈಕ್ಷಣಿಕ ವರ್ಷ ನಾಲ್ಕು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಆದರೆ, ಬಹುತೇಕ ಶಾಲೆಗಳು ಮಕ್ಕಳಿಂದ ಪೂರ್ಣಪ್ರಮಾಣದ ಶುಲ್ಕ ವಸೂಲಿ ಮಾಡುತ್ತಿವೆ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಉದ್ದೇಶದಿಂದ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸೀಟು ಪಡೆದ ಪೋಷಕರು ಪರಿತಪ್ಪಿಸುತ್ತಿದ್ದಾರೆ’ ಎಂದು ನರಸಿಂಹರಾಜು ಹೇಳಿದರು.

ADVERTISEMENT

‘ಶಿಕ್ಷಣ ನೀಡದೇ ಶುಲ್ಕ ವಸೂಲಿ ಮಾಡಿದರೆ ನೋವಾಗುತ್ತದೆ. ಆನ್‌ಲೈನ್‌ ಶಿಕ್ಷಣ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿಲ್ಲ. ಗ್ರಾಮೀಣ ಪ್ರದೇಶದಲ್ಲಿರುವ ರೈತರು, ಕಾರ್ಮಿಕರು ಸಮಸ್ಯೆಗೆ ಸಿಲುಕಿದ್ದಾರೆ. ಕೋವಿಡ್‌ ಕಾರಣಕ್ಕೆ ಕೂಲಿ ಕಳೆದುಕೊಂಡವರಿಗೆ ಮಕ್ಕಳ ಶಿಕ್ಷಣವೇ ಹೊರೆಯಾಗುತ್ತಿದೆ’ ಎಂದು ಸಭೆಯ ಗಮನ ಸೆಳೆದರು.

ಇದಕ್ಕೆ ಧ್ವನಿಗೂಡಿಸಿದ ಅಧ್ಯಕ್ಷೆ ಶಶಿಕಲಾ ಸುರೇಶಬಾಬು, ‘ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಕುಟುಂಬವೊಂದು ಮಗಳ ವರ್ಗಾವಣೆ ಪತ್ರ ನೀಡುವಂತೆ ಖಾಸಗಿ ಶಾಲೆಗೆ ಕೋರಿಕೊಂಡಿತ್ತು. ವಾರ್ಷಿಕ ಶುಲ್ಕ ಪಾವತಿಸಿ ವರ್ಗಾವಣೆ ಪತ್ರ ಪಡೆಯುವಂತೆ ಶಾಲೆಯ ಆಡಳಿತ ಮಂಡಳಿ ಸೂಚನೆ ನೀಡಿದೆ. ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಮಾನವೀಯತೆ ಮರೆತು ವರ್ತಿಸುತ್ತಿವೆ’ ಎಂದು ಕಿಡಿಕಾರಿದರು.

‘1ರಿಂದ 5ನೇ ತರಗತಿವರೆಗಿನ ಮಕ್ಕಳಿಗೆ ಶಾಲೆ ಆರಂಭಿಸುವಂತಿಲ್ಲವೆಂದು ಸರ್ಕಾರ ಸೂಚನೆ ನೀಡಿದೆ. ತರಗತಿ ನಡೆಸುತ್ತಿರುವುದು ಗೊತ್ತಾದರೆ ಶಿಸ್ತುಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ. ಆದರೆ, ಜಿಲ್ಲೆಯ ಹಲವೆಡೆ ಕಿರಿಯ ಪ್ರಾಥಮಿಕ ಹಂತದ ತರಗತಿಗಳು ಆರಂಭವಾಗಿವೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಭೆ ಕರೆದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಡಿಡಿಪಿಐ ರವಿಶಂಕರ ರೆಡ್ಡಿ ಅವರಿಗೆ ಸೂಚನೆ ನೀಡಿದರು.

ಹಾಸ್ಟೆಲ್‌ಗೆ ಸೌಲಭ್ಯ ಕಲ್ಪಿಸಿ:ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಇಲಾಖೆಯ ವಿದ್ಯಾರ್ಥಿನಿಲಯಗಳ ಮಕ್ಕಳಿಗೆ ಮೂಲಸೌಲಭ್ಯ ಕಲ್ಪಿಸಬೇಕು ಹಾಗೂ ಗುಣಮಟ್ಟದ ಆಹಾರ ಒದಗಿಸಬೇಕು ಎಂದು ಶಶಿಕಲಾ ಸುರೇಶಬಾಬು ತಾಕೀತು ಮಾಡಿದರು.

‘ಕೋವಿಡ್‌ ಕಾರಣಕ್ಕೆ ಹಾಸ್ಟೆಲ್‌ಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದೆ. ಜಿಲ್ಲಾ ಕೇಂದ್ರ ಹೊರತುಪಡಿಸಿ ಉಳಿದೆಡೆ ಎಸ್ಸೆಸ್ಸೆಲ್ಸಿ ಮಕ್ಕಳು ಮಾತ್ರ ಹಾಸ್ಟೆಲ್‌ನಲ್ಲಿದ್ದಾರೆ. ಆದರೆ, ಅವರಿಗೆ ಸ್ನಾನಕ್ಕೆ ಬಿಸಿನೀರು ಸಿಗುತ್ತಿಲ್ಲ. ಹಾಲು, ತರಕಾರಿ, ಆಹಾರ ಧಾನ್ಯಗಳ ಗುಣಮುಟ್ಟ ತೀರಾ ಕಳಪೆಯಾಗಿದೆ’ ಎಂದು ಕಿಡಿಕಾರಿದರು.

ಕುಡಿಯುವ ನೀರು ಒದಗಿಸಿ:ಗ್ರಾಮೀಣ ಪ್ರದೇಶದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಸಕಾಲಕ್ಕೆ ದುರಸ್ತಿ ಕಾಣುತ್ತಿಲ್ಲ. ಖಾಸಗಿ ಸಂಸ್ಥೆಗಳು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ನಿರ್ವಹಣಾ ವೆಚ್ಚವನ್ನು ಸರ್ಕಾರ ನೀಡಿದರೂ ಜನರಿಗೆ ನೀರು ಸಿಗದಿದ್ದರೆ ಜನಪ್ರತಿನಿಧಿಗಳು ಪ್ರಶ್ನೆ ಎದುರಿಸಬೇಕಾಗುತ್ತದೆ. ಐಮಂಗಲ ವ್ಯಾಪ್ತಿಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಆದಷ್ಟು ಬೇಗ ಚಾಲನೆ ಪಡೆದರೆ ಅನುಕೂಲ. 38 ಹಳ್ಳಿಗಳಿಗೂ ನೀರು ಒದಗಿಸಿ’ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಸೂಚಿಸಿದರು.

ನಗರದ ಚರಂಡಿ ಬಗ್ಗೆ ಚರ್ಚೆ!:ಚಿತ್ರದುರ್ಗ ನಗರಸಭೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಚರಂಡಿ ಕಾಮಗಾರಿಯ ಬಗ್ಗೆ ಜಿಲ್ಲಾ ಪಂಚಾಯಿತಿಯಲ್ಲಿ ಚರ್ಚೆ ನಡೆಯಿತು. ಕಾಮಗಾರಿಯ ಗುಣಮಟ್ಟದ ಬಗ್ಗೆ ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ ಅವರಿಂದ ಮಾಹಿತಿ ಪಡೆಯಲಾಯಿತು.

‘ಸಿಮೆಂಟ್ ಇಟ್ಟಿಗೆಯಿಂದ ಮಳೆನೀರು ಚರಂಡಿ ನಿರ್ಮಿಸುವುದು ತಪ್ಪಲ್ಲವೆ? ಇದು ನಗರ ವ್ಯಾಪ್ತಿಯ ಕಾಮಗಾರಿ ಆಗಿರುವುದರಿಂದ ನಾವು ಮಾತನಾಡಲು ಸಾಧ್ಯವಿಲ್ಲ’ ಎನ್ನುತ್ತ ವಿಷಯ ಪ್ರಸ್ತಾಪಿಸಿದರು ನರಸಿಂಹರಾಜು.

ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್‌ ಸತೀಶ್‌, ‘ಮಳೆ ನೀರು ಹೆಚ್ಚು ಹರಿಯದೇ ಇರುವ ಸ್ಥಳಗಳಲ್ಲಿ ಸಿಮೆಂಟ್‌ ಇಟ್ಟಿಗೆ ಬಳಕೆ ಮಾಡುವಂತೆ ಕೇಂದ್ರ ಕಚೇರಿಯಿಂದ ಸೂಚನೆ ಬಂದಿದೆ. ಕಾಮಗಾರಿಯ ಗುಣಮಟ್ಟದಲ್ಲಿ ಲೋಪ ಆಗದಂತೆ ಎಚ್ಚರ ವಹಿಸಲಾಗಿದೆ’ ಎಂದರು.

***

ಹೊಸದುರ್ಗ ತಾಲ್ಲೂಕಿನ ರಾಗಿ ಖರೀದಿ ಕೇಂದ್ರದಲ್ಲಿ ಅವ್ಯವಸ್ಥೆ ಇದೆ. ಈ ಬಗ್ಗೆ ಆಗಾಗ ಮಾಧ್ಯಮದಲ್ಲಿ ವರದಿ ಆಗುತ್ತಿದೆ. ಕೂಡಲೇ ಸ್ಪಂದಿಸಿ ರೈತರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಿ.

–ಶಶಿಕಲಾ ಸುರೇಶಬಾಬು

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ

***

ಜಿಲ್ಲೆಯ ಕೆಲ ಪ್ರತಿಷ್ಠಿತ ಶಾಲೆಗಳು ಮಾತ್ರ ಸರ್ಕಾರದ ನಿಯಮಾವಳಿಗಳನ್ನು ಪಾಲನೆ ಮಾಡುತ್ತಿಲ್ಲ. ಈ ಬಗ್ಗೆ ಇಲಾಖೆ ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

–ಕೆ.ರವಿಶಂಕರ ರೆಡ್ಡಿ

ಡಿಡಿಪಿಐ, ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.