ADVERTISEMENT

ಎರಡನೇ ದಿನವೂ ರಸ್ತೆಗಿಳಿಯದ ಬಸ್‌ಗಳು

204 ಡ್ರೈವರ್, ಕಂಡಕ್ಟರ್ ರಜೆಯ ಮೇಲೆ; ₹ 20 ಲಕ್ಷ ನಷ್ಟ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2020, 12:38 IST
Last Updated 24 ಮಾರ್ಚ್ 2020, 12:38 IST
ಚಿತ್ತಾಪುರ ಪಟ್ಟಣದ ಹೊರವಲಯದಲ್ಲಿರುವ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಘಟಕದಲ್ಲಿ ಬಸ್ಸುಗಳು ಸೋಮವಾರ ರಸ್ತೆಗಿಳಿಯದೆ ನಿಂತಿವೆ
ಚಿತ್ತಾಪುರ ಪಟ್ಟಣದ ಹೊರವಲಯದಲ್ಲಿರುವ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಘಟಕದಲ್ಲಿ ಬಸ್ಸುಗಳು ಸೋಮವಾರ ರಸ್ತೆಗಿಳಿಯದೆ ನಿಂತಿವೆ   

ಚಿತ್ತಾಪುರ: ಕೊರೊನಾ ವೈರಸ್ ಹರಡುವುದನ್ನು ತಡೆಯಲೆಂದು ಭಾನುವಾರ ಜರುಗಿದ ಜನತಾ ಕರ್ಫ್ಯೂ ಹಾಗೂ ಸೋಮವಾರದ ಕಲಬುರ್ಗಿ ಲಾಕ್ ಡೌನ್ ಜಾರಿಯಿಂದ ಪಟ್ಟಣದಲ್ಲಿರುವ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಘಟಕಕ್ಕೆ ಅಂದಾಜು ₹20 ಲಕ್ಷ ನಷ್ಟವಾಗಿದೆ ಎಂದು ತಿಳಿದುಬಂದಿದೆ.

ಕಲಬುರ್ಗಿ ಜಿಲ್ಲೆಯಲ್ಲಿ ಕೊರೊನಾ ವೈರಸ್ ಹರಡಿ ವ್ಯಕ್ತಿಯೊಬ್ಬರು ಮೃತಪಟ್ಟು ಸಾರಿಗೆ ಸಂಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಜನತಾ ಕರ್ಫ್ಯೂ ಮತ್ತು ಸೋಮವಾರದ ಕಲಬುರ್ಗಿ ಲಾಕ್ ಡೌನ್ ಗಿಂತ ಮೊದಲು ನಾಲ್ಕು ದಿನಗಳಿಂದ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿ ಸಾರಿಗೆ ಸಂಸ್ಥೆಯು ನಷ್ಟ ಅನುಭವಿಸಿದೆ.

ಘಟಕಕ್ಕೆ ದಿನವು ₹6 ರಿಂದ ₹6.50 ಲಕ್ಷ ಆದಾಯ ಇದೆ. ಎರಡು ದಿನಗಳಲ್ಲಿ ₹13 ಲಕ್ಷ ನಷ್ಟವಾಗಿದೆ. ಅದಕ್ಕಿಂತ ಮುಂಚೆ ಕೆಲವು ಗ್ರಾಮಗಳಿಗೆ ಬಸ್ ಸಂಚಾರ ರದ್ದು ಮಾಡಲಾಗಿದೆ. ಪ್ರಯಾಣಿಕರ ಇಳಿಮುಖದಿಂದಆರು ದಿನಗಳಿಂದ ದೈನಂದಿನ ಆದಾಯದ ಶೇ 50 ರಷ್ಟು ಕಡಿಮೆಯಾಗಿದೆ. ಹೀಗಾಗಿ ಅಂದಾಜು₹ 20 ಲಕ್ಷದಷ್ಟು ನಷ್ಟವಾಗಿದೆ ಎಂದು ಘಟಕ ವ್ಯವಸ್ಥಾಪಕ ವಿಠಲ್ ಕದಮ್ ಹೇಳಿದರು.

ADVERTISEMENT

ಘಟಕದಲ್ಲಿ ಕೆಲಸ ಮಾಡುತ್ತಿದ್ದ 204 ಜನ ಕಂಡಕ್ಟರ್, ಡ್ರೈವರ್‌ಗಳಿಗೆ ರಜೆ ನೀಡಲಾಗಿದೆ. ಎಲ್ಲಾ ಬಸ್ಸುಗಳು ಘಟಕದಲ್ಲಿವೆ. ಸಂಸ್ಥೆಯ ಮೇಲಾಧಿಕಾರಿ ಆದೇಶ ಮಾಡುವವರೆಗೆ ಯಾವುದೇ ಬಸ್ ಸಂಚಾರ ಇರುವುದಿಲ್ಲ ಎಂದು ತಿಳಿಸಿದರು.

ಕಲಬುರ್ಗಿ ಲಾಕ್ ಡೌನ್ ಕ್ರಮದಿಂದ ಬಸ್ ಸಂಚಾರ ಪ್ರಾರಂಭ ಅನುಮಾನ. ತೀರಾ ಅಗತ್ಯ ಎನಿಸಿದರೆ ಜಿಲ್ಲೆ ವ್ಯಾಪ್ತಿಯಲ್ಲಿ ಬಸ್ ಸಂಚಾರ ಮಾಡುವುದು ಹಿರಿಯ ಅಧಿಕಾರಿಗಳ ನಿರ್ಧಾರವನ್ನು ಅವಲಂಭಿಸಿದೆ ಎಂದು ತಿಳಿದುಬಂದಿದೆ.

ಪಟ್ಟಣದ ಬಸ್ ನಿಲ್ದಾಣವು ಬಸ್ ಮತ್ತು ಪ್ರಯಾಣಿಕರಿಲ್ಲದೆ ಭಣಗುಡುತ್ತಿದೆ. ನಿಲ್ದಾಣದಲ್ಲಿನ ಎಲ್ಲಾ ಅಂಗಡಿಗಳು ಬಂದ್ ಆಗಿವೆ. ಕೊರೊನಾ ವೈರಸ್ ಬಗ್ಗೆ ಜನರಲ್ಲಿ ಅರಿವು, ಜಾಗೃತಿ ಮೂಡಿಸುವ ಕೆಲಸ ಮಾತ್ರ ಸಂಸ್ಥೆಯ ಸಿಬ್ಬಂದಿ ಮಾಡುತ್ತಿದ್ದಾರೆ.

ಬಟ್ಟೆ ಅಂಗಡಿಗಳು ಬಂದ್‌: ಮಂಗಳವಾರ ಯುಗಾದಿ ಅಮಾವಾಸ್ಯೆ ಹಾಗೂ ಬುಧವಾರ ಯುಗಾದಿ ಹಬ್ಬವಿದ್ದರೂ ಬಟ್ಟೆ ವ್ಯಾಪಾರಕ್ಕೆ ಅವಕಾಶ ನೀಡಿಲ್ಲವಾದ್ದರಿಂದ ಕಪಡಾ ಬಾಜಾರದಲ್ಲಿನ ಎಲ್ಲ ಬಟ್ಟೆ ಅಂಗಡಿಗಳು ಬಂದ್ ಆಗಿವೆ. ಕೊರೊನಾ ವೈರಸ್ ಜನರ ಹಬ್ಬದ ಸಂಭ್ರಮ ಕಸಿದುಕೊಂಡಿದೆ.

ತರಕಾರಿ, ಹಣ್ಣು, ಹಾಲು ಮಾರಾಟ: ಜಿಲ್ಲೆ ಲಾಕ್ ಡೌನ್ ಜಾರಿಯಾದ ನಂತರವೂ ಪಟ್ಟಣದಲ್ಲಿ ಜೀವನಾವಶ್ಯಕ ವಸ್ತುಗಳ ಮಾರಾಟ ಎಂದಿನಂತೆ ಮುಂದುವರಿಯಿತು.

ಸಹಜ ಸ್ಥಿತಿಗೆ: ಭಾನುವಾರದ ಜನತಾ ಕರ್ಫ್ಯೂನಿಂದ ಸಂಪೂರ್ಣ ಸ್ತಬ್ಧವಾಗಿದ್ದ ಪಟ್ಟಣವು ಸೋಮವಾರ ಸಾಮಾನ್ಯ ಸ್ಥಿತಿಗೆ ಮರಳಿತು. ಮಾರುಕಟ್ಟೆಯಲ್ಲಿ ಬೆಳಿಗ್ಗೆಯಿಂದ ಜನರು ಕಿರಾಣಿ ಸಾಮಾನು, ತರಕಾರಿ, ಹಣ್ಣು ಖರೀದಿಯಲ್ಲಿ ನಿರತರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.