ಮೂಡುಬಿದಿರೆ: ಕೇಸರಿ, ಬಿಳಿ, ಹಸಿರು ಬಣ್ಣದ ಸಮವಸ್ತ್ರ ಧರಿಸಿದ ವಿದ್ಯಾರ್ಥಿಗಳ ಸಾಲು ನಿರ್ಮಿಸಿದ ವೇದಿಕೆಯ ಮುಂಭಾಗದಲ್ಲಿ ಅದೇ ಬಣ್ಣದ ಹೂಗಳಿಂದ ಅಲಂಕೃತವಾದ ಧ್ವಜಸ್ತಂಭ. ಡಾ.ಮೋಹನ್ ಆಳ್ವ ಅವರೊಂದಿಗೆ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಧ್ವಜಸ್ತಂಭದ ಬಳ್ಳಿಯನ್ನು ಎಳೆದು ತ್ರಿವರ್ಣ ಬಾವುಟ ಅರಳಿಸುತ್ತಿದ್ದಂತೆ ಆಳ್ವಾಸ್ ವಿದ್ಯಾರ್ಥಿಗಳಿಂದ `ಕೋಟಿ ಕಂಠೋಂಸೆ... ` ಎಂಬ ರಾಷ್ಟ್ರೀಯ ಭಾವೈಕ್ಯತಾ ಗೀತೆ ಮೊಳಗಿತು.
ಆಳ್ವಾಸ್ ಶಿಕ್ಷಣ ಸಂಸ್ಥೆ ವತಿಯಿಂದ ವಿದ್ಯಾಗಿರಿಯಲ್ಲಿ ಬುಧವಾರ ನಡೆದ 66ನೇ ಸ್ವಾತಂತ್ರ ದಿನಾಚರಣೆ ವೇಳೆ ಕಂಡು ಬಂದ ದೃಶ್ಯಾವಳಿಗಳಿವು. ಸೇರಿದ 16 ಸಾವಿರ ವಿದ್ಯಾರ್ಥಿಗಳು, ಕೈಯಲ್ಲಿದ್ದ ರಾಷ್ಟ್ರ ಧ್ವಜವನ್ನು ಮೇಲಕ್ಕೆತ್ತಿ ಬೀಸತೊಡಗಿದರು. ಅಷ್ಟ ದಿಕ್ಕುಗಳಲ್ಲಿ ತ್ರಿವರ್ಣ ಬಲೂನುಗಳು ಆಕಾಶದೆತ್ತರಕ್ಕೆ ಹಾರಿ ತೇಲತೊಡಗಿದವು. ಕೆ.ವಿ ಸುಬ್ಬಣ್ಣ ಬಯಲು ರಂಗಮಂದಿರ ಅಕ್ಷರಶ: ತ್ರಿವರ್ಣಮಯವಾಯಿತು.
ಆಳ್ವಾಸ್‌ನ ಎನ್‌ಸಿಸಿ, ಸ್ಕೌರ್ಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು, ಸಾಂಸ್ಕೃತಿಕ ವಿದ್ಯಾರ್ಥಿ ತಂಡಗಳು, ಬ್ಯಾಂಡ್ ಸೆಟ್‌ಗಳು ವಿಶೇಷ ಗಮನಸೆಳೆಯಿತು. ಸಹಸ್ರಾರು ವಿದ್ಯಾರ್ಥಿ ಸಮುದಾಯದ ಮಧ್ಯೆ ತ್ರಿವರ್ಣಮಯ ಸಮವಸ್ತ್ರದಲ್ಲಿ ನಿಂತ ವಿದ್ಯಾರ್ಥಿಗಳು `ಆಳ್ವಾಸ್~ ಹೆಸರನ್ನು ಮೂಡಿಸಿದ್ದು ಆಕರ್ಷಕವಾಗಿತ್ತು.
ಸಶಕ್ತ ಪ್ರಜಾಪ್ರಭುತ್ವ: ವಿದ್ಯಾಗಿರಿಯಲ್ಲಿ ಧ್ವಜಾರೋಹಣ ನಡೆಸಿದ ಬಳಿಕ ವಿದ್ಯಾರ್ಥಿ ಸಮುದಾಯವನ್ನುದ್ದೇಶಿಸಿ ಮಾತನಾಡಿದ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ `1947ರಲ್ಲಿ ಭಾರತ ಸೇರಿದಂತೆ ಅನೇಕ ನೆರೆ ರಾಷ್ಟ್ರಗಳು ಸ್ವಾತಂತ್ರ್ಯವನ್ನು ಪಡೆದಿದ್ದರೂ ಸಶಕ್ತ ಪ್ರಜಾಫ್ರಭುತ್ವವನ್ನು ಮುನ್ನಡೆಸಿಕೊಂಡು ಬಂದದ್ದು ನಮ್ಮ ರಾಷ್ಟ್ರ ಮಾತ್ರ.
ಸ್ವಾತಂತ್ರ್ಯ ವೇಳೆ ಹಿರಿಯರ ಇಟ್ಟುಕೊಂಡ ಬಯಕೆಗಳನ್ನು ಈಡೇರಿಸಲು ಪ್ರತಿಯೊಬ್ಬರು ಪಣತೊಡಬೇಕು ಆಶಾದಾಯಕ ರಾಷ್ಟ್ರ ಕಟ್ಟಲು ಯುವ ಸಮುದಾಯ ಮುಂದೆ ಬರಬೇಕು~ ಎಂದರು. ಸಂಸ್ಥೆಯ ಅಧ್ಯಕ್ಷ ಮೋಹನ್ ಆಳ್ವ, ಮಾಜಿ ಸಚಿವ ಅಮರನಾಥ ಶೆಟ್ಟಿ, ಟ್ರಸ್ಟಿ ವಿವೇಕ ಆಳ್ವ, ಆಡಳಿತವರ್ಗ, ಪ್ರಾಚಾರ್ಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.