ADVERTISEMENT

ಕಟೀಲು ಮೇಳ: ಬಂಡಾಯ ಸದ್ದಿಲ್ಲದೆ ಮಾಯ

ಕೋಡಿಬೆಟ್ಟು ರಾಜಲಕ್ಷ್ಮಿ
Published 15 ನವೆಂಬರ್ 2017, 5:42 IST
Last Updated 15 ನವೆಂಬರ್ 2017, 5:42 IST
ಕಟೀಲು ದೇವಳದಲ್ಲಿ ಸೋಮವಾರ ರಾತ್ರಿ ನಡೆದ ಸೇವೆಯಾಟವನ್ನು ಪ್ಷೇಕ್ಷಕರು ಕುತೂಹಲದಿಂದ ನೋಡಿದ ಪರಿ.
ಕಟೀಲು ದೇವಳದಲ್ಲಿ ಸೋಮವಾರ ರಾತ್ರಿ ನಡೆದ ಸೇವೆಯಾಟವನ್ನು ಪ್ಷೇಕ್ಷಕರು ಕುತೂಹಲದಿಂದ ನೋಡಿದ ಪರಿ.   

ಮಂಗಳೂರು: ದೀಪಾವಳಿ ಬಳಿಕ ಕರಾವಳಿಯಲ್ಲಿ ಯಕ್ಷಗಾನದ ಮೇಳಗಳು ತಿರುಗಾಟ ಆರಂಭಿಸಿದ್ದು, ಮಂಗಳವಾರ ತೆಂಕು ತಿಟ್ಟು ಶೈಲಿಯ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ಯಕ್ಷಗಾನ ಮಂಡಳಿಯ ಆರು ಮೇಳಗಳೂ ತಿರುಗಾಟ ಹೊರಟಿವೆ.

ಆರು ಮೇಳಗಳ ನಡುವೆ 5ನೇ ಮೇಳದ ಭಾಗವತರ ವರ್ಗಾವಣೆಯನ್ನು ಕಲಾವಿದರು ಈ ಬಾರಿ ವಿರೋಧಿಸಿ ಬಂಡಾಯ ಎದ್ದಿದ್ದರಿಂದ ತಿರುಗಾಟ ಆರಂಭದ ದಿನದವರೆಗೂ ಪ್ರೇಕ್ಷಕರಲ್ಲಿ ಕುತೂಹಲ ಮನಮಾಡಿತ್ತು. ಮಂಗಳವಾರ ಮುಂಜಾನೆ ಮೇಳಗಳು ತಿರುಗಾಟ ಹೊರಡುವುದರೊಂದಿಗೆ ಯಾವ ಮೇಳದಲ್ಲಿ ಯಾವ ಕಲಾವಿದರಿದ್ದಾರೆ, ಯಾರು ನೇತೃತ್ವ ವಹಿಸಲಿದ್ದಾರೆ ಎಂಬ ಸ್ಪಷ್ಟ ಚಿತ್ರಣ ದೊರೆತಂತಾಗಿದೆ.

ಬಂಡಾಯ ಕಲಾವಿದರ ಪೈಕಿ ಕ್ಷಮೆ ಕೇಳಿದ ಕಲಾವಿದರನ್ನು ಮೇಳಕ್ಕೆ ಮತ್ತೆ ಸೇರಿಸಿಕೊಳ್ಳಲಾಗಿದ್ದು, ಏಳು ಮಂದಿ ಕಲಾವಿದರನ್ನು ಕೈ ಬಿಡಲಾಗಿದೆ. ಆದರೆ ಮಂಗಳವಾರ ಈ ಏಳೂ ಕಲಾವಿದರು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿ ಬಹಿರಂಗ ಕ್ಷಮೆ ಯಾಚಿಸಿದ್ದಾರೆ. ಅಮ್ಮುಂಜೆ ಮೋಹನ್‌ ಕುಮಾರ್, ಮಾಧವ ಕೊಳ್ತಮಜಲು, ದಿವಾಣ ಶಿವಶಂಕರ್ ಭಟ್, ನಗ್ರಿ ಮಹಾಬಲ ರೈ, ಉಜಿರೆ ನಾರಾಯಣ ಹಾಸ್ಯಗಾರ, ಮದ್ದಲೆಗಾರರಾದ ಗುರುಪ್ರಸಾದ್ ಬೊಳಿಂಜಡ್ಕ, ಪ್ರಶಾಂತ್‌ ಶೆಟ್ಟಿ ವಗೆನಾಡು ಕ್ಷಮೆ ಯಾಚಿಸಿದವರು. ಬದಲಾವಣೆ ವಿರೋಧಿಸಿ ಕಲಾವಿದ ರಾಕೇಶ್‌ ರೈ ಅಡ್ಕ ಅವರನ್ನು ಮತ್ತೆ ಯಾವ ಕಾರಣಕ್ಕೂ ಮೇಳಕ್ಕೆ ಸೇರಿಸಿಕೊಳ್ಳುವ ಇರಾದೆ ಇದ್ದಂತಿಲ್ಲ.

ADVERTISEMENT

ಈ ವರ್ಷ ಭಾಗವತರಾದ ಪುರುಷೋತ್ತಮ ಪೂಂಜ(1), ಬಲಿಪ ಪ್ರಸಾದ್ ಭಾಗವತ(2), ಗೋಪಾಲಕೃಷ್ಣ ಮಯ್ಯ (3), ಪಟ್ಲ ಸತೀಶ್‌ ಶೆಟ್ಟಿ(4), ಪದ್ಯಾಣ ಗೋವಿಂದ ಭಟ್‌(5) ಮತ್ತು ಪುಂಡಿಕಾಯಿ ಗೋಪಾಲಕೃಷ್ಣ ಭಟ್‌(6) ನೇತೃತ್ವದಲ್ಲಿ ಮೇಳಗಳು ತಿರುಗಾಟ ನಡೆಸಲಿವೆ.

ಜಗತ್ತಿನಲ್ಲಿ ಅತೀ ದೀರ್ಘ ಹೊತ್ತು ರಂಗಪ್ರದರ್ಶನ ನೀಡುವ ಕಲೆ ಎಂಬ ಹಿರಿಮೆ ಹೊತ್ತ ಯಕ್ಷಗಾನ ಕರಾವಳಿಯ ಹೊಸ ರೂಪು ಪಡೆಯುತ್ತಲೇ ಇದೆ. ಯಕ್ಷಗಾನದ ಹಿಂದೆ ಇರುವ ದೈವೀ ಮನೋಭಾವವೇ ಪರಂಪರೆಯನ್ನೂ ಉಳಿಸಿ ಬೆಳೆಸುತ್ತಿದೆ. ಬಯಲಾಟ ಆಡಿಸುವ ಸ್ಥಳಕ್ಕೆ ಶ್ರೀದುರ್ಗಾಪರಮೇಶ್ವರಿ ದೇವಿಯೇ ಬಂದು ಪ್ರೇಕ್ಷಕಿಯಾಗಿ ಕುಳಿತುಕೊಳ್ಳುತ್ತಾಳೆ ಎಂಬ ನಂಬಿಕೆಯಿಂದ ಭಕ್ತರು ಹರಕೆ ಮಾದರಿಯಲ್ಲಿ ಈ ಮೇಳದ ಆಟ ಆಡಿಸುವುದು ಹೆಚ್ಚು.

ಆ ಪ್ರಕಾರ ಮುಂದಿನ 25 ವರ್ಷಗಳ ವರೆಗೆ ಕಾಯಂ ಯಕ್ಷಗಾನ ಬಯಲಾಟದ ಬುಕಿಂಗ್‌ ಆಗಿದೆ. ಅಂದರೆ ವರ್ಷದ ಆರು ತಿಂಗಳಲ್ಲಿ ಸುಮಾರು 1100 ಪ್ರದರ್ಶನಗಳ ಅವಕಾಶವಿದ್ದು, ಈ ಪೈಕಿ 504 ಪ್ರದರ್ಶನಗಳು ಬುಕ್‌ ಆಗಿವೆ.ಉಳಿದ ದಿನಗಳಲ್ಲಿ ಹೊಸಬರಿಗೆ ಅವಕಾಶ ಕಲ್ಪಿಸಲಾಗುವುದು. ತತ್ಕಾಲ್‌ ಬುಕಿಂಗ್‌ ವ್ಯವಸ್ಥೆಯೂ ಇದೆ ಎನ್ನುತ್ತಾರೆ ಕಟೀಲು ಮೇಳಗಳ ಮಾರ್ಗದರ್ಶಕ ಹಾಗೂ ದೇವಳದ ಅನುವಂಶಿಕ ಅರ್ಚಕರಾದ ಶ್ರೀಹರಿ ನಾರಾಯಣ ದಾಸ ಆಸ್ರಣ್ಣ.

ಅಗಲಿದ ಹಿರಿಯ ಭಾಗವತರಾದ ಕುಬಣೂರು ಶ್ರೀಧರ ರಾಯರು ನಡೆಸುತ್ತಿದ್ದ ‘ಯಕ್ಷಪ್ರಭಾ’ ಯಕ್ಷಗಾನ ಪತ್ರಿಕೆಯನ್ನು ದೇವಸ್ಥಾನದ ವತಿಯಿಂದಲೇ ನಡೆಸಲು ನಿರ್ಧರಿಸಿರುವುದು ಈ ವರ್ಷದ ಮತ್ತೊಂದು ಹೊಸ ಬೆಳವಣಿಗೆ.

ಆರೂ ಮೇಳಗಳ ಕಲಾಸಾಮಗ್ರಿಗಳ ಸಾಗಣೆಗೆ ಪ್ರತ್ಯೇಕ ಲಾರಿ, ಕಲಾವಿದರ ಪ್ರಯಾಣಕ್ಕೆ ಹೊಸ ಬಸ್ಸನ್ನು ವ್ಯವಸ್ಥೆ ಮಾಡಲಾಗಿದೆ. ಮೈಕ್‌ ವ್ಯವಸ್ಥೆಯನ್ನೂ ಮೇಳದ ವತಿಯಿಂದಲೇ ಮಾಡಲಾಗುತ್ತಿದೆ. ಕಾಯಂ ಪ್ರದರ್ಶನಕ್ಕೆ 32 ಸಾವಿರ ವೀಳ್ಯ ಹಾಗೂ ಹೊಸ ಬುಕಿಂಗ್‌ಗೆ 38 ಸಾವಿರ ‘ವೀಳ್ಯ ’ ನಿಗದಿ ಮಾಡಲಾಗಿದೆ. ಮೈಕ್‌, ರಂಗಸ್ಥಳದ ಅಲಂಕಾರ ಸೇರಿದಂತೆ ಇತರ ವ್ಯವಸ್ಥೆಯ ಖರ್ಚು ಪ್ರತ್ಯೇಕವಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.