ADVERTISEMENT

ದ.ಕ. ಜಿಲ್ಲೆ: ಎಸ್‌ಡಿಪಿಐನಿಂದ 7 ಅಭ್ಯರ್ಥಿಗಳು ಕಣಕ್ಕೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2013, 9:39 IST
Last Updated 14 ಏಪ್ರಿಲ್ 2013, 9:39 IST

ಮಂಗಳೂರು: ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ), ದಕ್ಷಿಣ ಕನ್ನಡ ಜಿಲ್ಲೆಯಿಂದ ಏಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದು, ಬೆಳ್ತಂಗಡಿಯಲ್ಲಿ ಮಿತ್ರಪಕ್ಷ ಬಿಎಸ್‌ಪಿ ಜತೆ ಮಾತುಕತೆ ಅಂತಿಮ ಹಂತದಲ್ಲಿದೆ ಎಂದು ಪಕ್ಷದ ಮುಖಂಡ ಅಕ್ರಮ್ ಹಸನ್ ತಿಳಿಸಿದರು.

ಪಕ್ಷವು ರಾಜ್ಯದಲ್ಲಿ ಬಿಎಸ್‌ಪಿ ಜತೆ ಚುನಾವಣಾ ಹೊಂದಾಣಿಕೆ ಮಾಡಿಕೊಂಡಿದೆ. ಅಬೂಬಕ್ಕರ್ ಕುಳಾಯಿ (ಮಂಗಳೂರು ಉತ್ತರ), ವಕೀಲ ಅಬ್ದುಲ್ ಮಜೀದ್ ಖಾನ್ (ಬಂಟ್ವಾಳ), ಪತ್ರಕರ್ತ ಅಕ್ರಮ್ ಹಸನ್ (ಮಂಗಳೂರು), ಅಬ್ದುಲ್ ಜಲೀಲ್ ಕೆ. (ಮಂಗಳೂರು ದಕ್ಷಿಣ), ಇಸ್ಮಾಯಿಲ್ ಇಂಜಿನಿಯರ್ (ಮೂಲ್ಕಿ ಮೂಡುಬಿದಿರೆ), ಕೂಸಪ್ಪ (ಸುಳ್ಯ) ಮತ್ತು ಕೆ.ಎ.ಸಿದ್ಧೀಕ್ (ಪುತ್ತೂರು) ಅಭ್ಯರ್ಥಿಗಳಾಗಿದ್ದಾರೆ.

ಬೆಳ್ತಂಗಡಿ ಕ್ಷೇತ್ರದಿಂದ ಬಹುತೇಕ ಬಿಎಸ್‌ಪಿ ಪಕ್ಷದ ಅಭ್ಯರ್ಥಿ ಸ್ಪರ್ಧಿಸುವುದು ಖಚಿತ ಎಂದು ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಅಭ್ಯರ್ಥಿಗಳ ಹಿನ್ನೆಲೆ ನೋಡಿ ಆರು ಹಂತಗಳಲ್ಲಿ ಆಯ್ಕೆ ಮಾಡಲಾಯಿತು ಎಂದರು.

ಪಕ್ಷದ ಅಭ್ಯರ್ಥಿಗಳು ಆಟೊರಿಕ್ಷಾ ಚಿಹ್ನೆಯಡಿ ಸ್ಪರ್ಧಿಸಲಿದ್ದಾರೆ. ಬಂಟ್ವಾಳ ಮತ್ತು ಪುತ್ತೂರು ಕ್ಷೇತ್ರಗಳ ಅಭ್ಯರ್ಥಿಗಳು ಶುಕ್ರವಾರ ನಾಮಪತ್ರ ಸಲ್ಲಿಸುವರು ಎಂದು ಅವರು ತಿಳಿಸಿದರು.

`ಎಸ್‌ಡಿಪಿಐ ಅಲ್ಪಾವಧಿಯಲ್ಲಿ ಉತ್ತಮ ಸಾಧನೆ ತೋರುತ್ತ ಬಂದಿದೆ. ಇತ್ತೀಚಿನ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಎಸ್‌ಡಿಪಿಐ ದ.ಕ. ಜಿಲ್ಲೆಯ ನಾಲ್ಕು ಪುರಸಭೆ ಕ್ಷೇತ್ರಗಳಲ್ಲಿ, ಒಂದು ನಗರ ಪಂಚಾಯಿತಿ ಕ್ಷೇತ್ರದಲ್ಲಿ ಮತ್ತು ಮಂಗಳೂರು ಮಹಾನಗರಪಾಲಿಕೆಯ ಒಂದು ವಾರ್ಡ್‌ನಲ್ಲಿ ಜಯಗಳಿಸಿದೆ. ರಾಜ್ಯದಲ್ಲಿ 17 ಕಡೆ ಜಯಗಳಿಸಿದ್ದು, 18 ಕಡೆ ಎರಡನೇ ಸ್ಥಾನ ಗಳಿಸಿದೆ. ಮೈಸೂರು ಮಹಾನಗರಪಾಲಿಕೆಯಲ್ಲಿ ನಾಲ್ಕು ಸ್ಥಾನಗಳನ್ನು ಗಳಿಸಿದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.