ADVERTISEMENT

ಮಂಗಳೂರು ವಿವಿಗೆ ಮಹಾಲಸಾ ಕಾಲೇಜು

ಪಿಯುಸಿ ನಂತರವಷ್ಟೇ ವಿಷುವಲ್‌ ಆರ್ಟ್ ಪದವಿಗೆ ಪ್ರವೇಶ

ಕೋಡಿಬೆಟ್ಟು ರಾಜಲಕ್ಷ್ಮಿ
Published 9 ಜೂನ್ 2018, 6:34 IST
Last Updated 9 ಜೂನ್ 2018, 6:34 IST
ಮಂಗಳೂರಿನ ಅಳಕೆ ಭಗವತಿ ಲೇನ್‌ನಲ್ಲಿರುವ ಮಹಾಲಸಾ ಕಲಾ ಕಾಲೇಜು.
ಮಂಗಳೂರಿನ ಅಳಕೆ ಭಗವತಿ ಲೇನ್‌ನಲ್ಲಿರುವ ಮಹಾಲಸಾ ಕಲಾ ಕಾಲೇಜು.   

ಮಂಗಳೂರು: ಚಿತ್ರಕಲಾ ಶಿಕ್ಷಣ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವ ಕರಾವಳಿಯ ವಿದ್ಯಾರ್ಥಿಗಳಿಗೆ ಒಳ್ಳೆಯ ಸುದ್ದಿ ಇಲ್ಲಿದೆ. ನಗರದಲ್ಲಿರುವ ಮಹಾ ಲಸಾ ಕಾಲೇಜ್‌ ಆಫ್‌ ವಿಶುವಲ್‌ ಆರ್ಟ್‌ ಇನ್ನು ಮುಂದೆ ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಗೆ ಬರಲಿದೆ.

ಈವರೆಗೆ ಹಂಪಿಯ ಕನ್ನಡ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಕಾರ್ಯನಿ ರ್ವಹಿಸುತ್ತಿದ್ದ ಕಾಲೇಜು ಇನ್ನು ಮುಂದೆ ಮಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರಲಿದ್ದು, ಈ ವರ್ಷ ಪಿಯುಸಿ ಪಾಸಾದವರಿಗೆ ಅಥವಾ ತತ್ಸಮಾನ ಕೋರ್ಸ್‌ ಕಲಿತ ವಿದ್ಯಾರ್ಥಿಗಳಿಗಷ್ಟೇ ಪ್ರವೇಶಾವಕಾಶ ಲಭ್ಯವಾಗಲಿದೆ.

ದೇಶದಲ್ಲಿರುವ ಎಲ್ಲ ಕಾಲೇಜು ಗಳು ಪಿಯುಸಿ ನಂತರವಷ್ಟೇ ಪದವಿಗೆ ಪ್ರವೇಶ ನೀಡಬೇಕು ಎಂಬುದಾಗಿ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ) ವಿಶ್ವವಿ ದ್ಯಾಲಯಗಳಿಗೆ ಸೂಚನೆ ನೀಡಿತ್ತು. ಆದರೆ ಹೆಚ್ಚಿನ ವಿಶ್ವವಿದ್ಯಾಲಯಗಳು ತಮ್ಮ ವ್ಯಾಪ್ತಿಯಲ್ಲಿರುವ ಕಲಾ ಕಾಲೇಜುಗಳಿಗೆ ಈ ಸೂಚನೆಯನ್ನು ದಾಟಿಸದೇ ಇರುವುದರಿಂದ 2017ರ ಲ್ಲಿಯೂ ಎಸ್‌ಎಸ್‌ಎಲ್‌ಸಿ ಪಾಸಾದ ವಿದ್ಯಾರ್ಥಿಗಳಿಗೆ ಪದವಿ ಕಲಿಯುವ ಅವಕಾಶ ಕಲ್ಪಿಸಲಾಗಿತ್ತು. ಈ ರೀತಿ ಪದವಿ ಕಲಿತ ವಿದ್ಯಾರ್ಥಿಗಳು ರಾಜ್ಯದ ಹೊರಭಾಗದಲ್ಲಿರುವ ಇತರ ವಿಶ್ವವಿ ದ್ಯಾಲಯಗಳಲ್ಲಿ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯುವುದು ಸಾಧ್ಯವಾಗುತ್ತಿರಲಿಲ್ಲ. ಉನ್ನತ ಶಿಕ್ಷಣ ಬಯಸಿ ಹೊರರಾಜ್ಯಗಳತ್ತ ಹೊರಟ ವಿದ್ಯಾರ್ಥಿಗಳು ಈ ಸಮಸ್ಯೆ ಎದುರಿಸಿರುವ ಬಗ್ಗೆ 2017ರಲ್ಲಿ ವ್ಯಾಪಕ ಚರ್ಚೆ ನಡೆದಿತ್ತು.

ADVERTISEMENT

ಮೈಸೂರಿನ ಚಾಮರಾಜೇಂದ್ರ ದೃಶ್ಯಕಲಾ ಸರ್ಕಾರಿ ಕಾಲೇಜು, ದಾವಣ ಗೆರೆ ವಿವಿ ವ್ಯಾಪ್ತಿಯ ಕಲಾಕಾಲೇಜು, ತುಮಕೂರು ವಿವಿ ಮತ್ತು ಧಾರವಾಡ ಕರ್ನಾಟಕ ವಿವಿ, ಹಂಪಿಯ ಕನ್ನಡ ವಿವಿ ವ್ಯಾಪ್ತಿಯ ಕಾಲೇಜುಗಳು ಯುಜಿಸಿಯ ಹೊಸ ಆದೇಶವನ್ನು ಪರಿಗಣಿಸದೇ ಇರುವ ಬಗ್ಗೆ ಚಿತ್ರಕಲಾ ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು.  ಎಸ್ಸೆಸ್ಸೆಲ್ಸಿ ನಂತರ ಕಲಾವಿದ್ಯಾರ್ಥಿಗಳು ಪಡೆಯುವ ಈ ಕೋರ್ಸನ್ನು ಹೊರ ರಾಜ್ಯದ ವಿಶ್ವವಿದ್ಯಾಲಯಗಳು ಪಿಯುಸಿಗೆ ತತ್ಸಮಾನ ಎಂದು ಪರಿಗಣಿಸಿದ್ದರಿಂದ ಸ್ನಾತಕೋತ್ತರ ಅಧ್ಯಯನಕ್ಕೆ ಪ್ರವೇಶ ಪಡೆಯುವುದು ಕಷ್ಟವಾಗಿತ್ತು. ಮಹಾಲಸಾ ಕಲಾ ಕಾಲೇಜು ಹಂಪಿ ಕನ್ನಡ ವಿವಿ ವ್ಯಾಪ್ತಿಗೆ ಸೇರಿದ್ದರಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲಾಗಿತ್ತು.

ಆದರೆ ಇದೀಗ ಮಂಗಳೂರಿನ ಮಹಾಲಸಾ ಕಲಾ ಕಾಲೇಜು ಮಂಗ ಳೂರು ವಿಶ್ವವಿದ್ಯಾಲಯ ವ್ಯಾಪ್ತಿಗೆ ಬರಲಿದ್ದು, ಈ ಬಾರಿ ಪಿಯುಸಿ ಓದಿದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗಿದೆ.  ‘ಮಹಾಲಸಾ ಕಲಾಕಾಲೇಜು ಮಂಗಳೂ ರು ವಿಶ್ವವಿದ್ಯಾಲಯ ವ್ಯಾಪ್ತಿಗೆ ಬರಲಿದೆ. ಅದಕ್ಕೆ ಪೂರಕವಾದ ಪ್ರಕ್ರಿಯೆಗಳು ನಡೆಯುತ್ತಿದ್ದು ಈ ಬಾರಿ ಪಿಯುಸಿ ಓದಿದ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲು ಸೂಚಿಸಲಾಗಿದೆ’ ಎಂದು ಇತ್ತೀಚೆಗೆ ನಡೆದ ಶೈಕ್ಷಣಿಕ ಮಂಡಳಿಯ ಸಭೆಯ ಸಂದರ್ಭದಲ್ಲಿ ಕುಲಪತಿಗಳಾಗಿದ್ದ ಪ್ರೊ.ಕೆ.ಭೈರಪ್ಪ ತಿಳಿಸಿದ್ದರು.

‘ಕಾಲೇಜಿನಲ್ಲಿ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ. ಬ್ಯಾಚುಲರ್‌ ಆಫ್‌ ವಿಶುವಲ್‌ ಆರ್ಟ್‌ (ಚಿತ್ರಕಲೆ) ಮತ್ತು ಬ್ಯಾಚುಲರ್‌ ಆಫ್‌ ವಿಶುವಲ್‌ ಆರ್ಟ್‌ (ಆನ್ವಯಿಕ ಚಿತ್ರಕಲೆ)ವಿಭಾಗದಲ್ಲಿ ಪ್ರವೇಶ ಪಡೆಯಲು ಅವಕಾಶವಿದೆ. ಇದೇ 30ರವರೆಗೆ ಅರ್ಜಿ ಸಲ್ಲಿಸಲು ಅವಕಾ ಶವಿದೆ. ಪಿಯುಸಿ ಪಾಸಾದ ಅಥವಾ ಪಿಯುಸಿ ತತ್ಸಮಾನ ವಿದ್ಯಾರ್ಹತೆ ಪಡೆದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು’  ಎಂದು ಕಾಲೇಜಿನ ಪ್ರಾಂಶುಪಾಲ
ಕೆ. ಪುರುಷೋತ್ತಮ ನಾಯಕ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.