ADVERTISEMENT

ಮೂಡುಬಿದಿರೆ: ಅಡಿಕೆ ನಿಷೇಧ ವಿರೋಧಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2014, 10:01 IST
Last Updated 1 ಜನವರಿ 2014, 10:01 IST
ಅಡಿಕೆ ನಿಷೇಧ ವಿರೋಧಿಸಿ ಮೂಡುಬಿದಿರೆ ವಲಯ ರೈತರು ಮಂಗಳವಾರ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು. (ಮೂಡುಬಿದಿರೆ ಚಿತ್ರ)
ಅಡಿಕೆ ನಿಷೇಧ ವಿರೋಧಿಸಿ ಮೂಡುಬಿದಿರೆ ವಲಯ ರೈತರು ಮಂಗಳವಾರ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು. (ಮೂಡುಬಿದಿರೆ ಚಿತ್ರ)   

ಮೂಡುಬಿದಿರೆ: ಕೇಂದ್ರ ಸರ್ಕಾರದ ಅಡಿಕೆ ನಿಷೇಧ ಪ್ರಸ್ತಾಪವನ್ನು ವಿರೋಧಿಸಿ ಮೂಡು­ಬಿದಿರೆ ವಲಯ ಅಡಿಕೆ ಬೆಳೆಗಾರರು ಮಂಗಳ­ವಾರ ಇಲ್ಲಿನ ತಹಶೀಲ್ದಾರ್ ಕಛೇರಿ ಎದುರು ಪ್ರತಿಭಟನೆ ನಡೆಸಿದರು. ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಂಚಿ ಶ್ರೀನಿವಾಸ ಆಚಾರ್ ದೇಶದಲ್ಲಿ ವರ್ಷಕ್ಕೆ 6 ಲಕ್ಷ ಟನ್ ಅಡಿಕೆ ಉತ್ಪಾದನೆ­ಯಾಗುತ್ತಿದ್ದು 20 ಕೋಟಿ ಜನ ಅಡಿಕೆ ತಿನ್ನುತ್ತಾರೆ.

ವರ್ಷಕ್ಕೆ 20 ಲಕ್ಷ ಹೊಸ ಗ್ರಾಹಕರು ಸೇರ್ಪಡೆಯಾಗುತ್ತಿದ್ದಾರೆ. ಆದರೆ ಇವ­ರ್ಯಾ­ರು ಅಡಿಕೆ ಹಾನಿಕಾರಕ ಎಂದು ಹೇಳಿಲ್ಲ. ಯಾರದ್ದೊ ಲಾಬಿಗೆ ಮಣಿದು ವಿಜ್ಞಾನಿಗಳು ಅಡಿಕೆ ನಿಷೇಧಿಸುವಂತೆ ವರದಿ ನೀಡಿದ್ದಾರೆ. ಇದನ್ನು ಸರ್ಕಾರ ತಿರಸ್ಕರಿಸಬೇಕು ಎಂದು ಆಗ್ರಹಿಸಿದರು.
ಭತ್ತದ ಕೃಷಿಯಿಂದ ನಷ್ಟ ಅನುಭವಿಸಿದ ನಂತರ ರೈತರು ಪರ್ಯಾಯ ಬೆಳೆ ಅಡಿಕೆಯನ್ನು ಅವಲಂಬಿಸಿದರು. ಒಂದು ಎಕ್ರೆಗೆ ಒಂದು ಲಕ್ಷ ಆದಾಯ ಕೊಡುವ ಅಡಿಕೆ ರೈತರ ಜೀವನಾ­ಧಾರವಾಗಿದ್ದು ಯಾವುದೇ ಕಾರಣಕ್ಕೆ ಇದನ್ನು ನಿಷೇಧಿಸಬಾರದು.

ಕೇಂದ್ರ ಸರ್ಕಾರ ಅಡಿಕೆ ನಿಷೇಧವನ್ನು ಹಿಂತೆಗೆದುಕೊಳ್ಳುವ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸುವ ತನಕ ರೈತರ ಹೋರಾಟ ನಿಲ್ಲಬಾರದು ಎಂದರು. ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಮಂಗಳೂರು ತಾಲ್ಲೂಕು ಅಧ್ಯಕ್ಷ ಕೆ. ಕೃಷ್ಣರಾಜ ಹೆಗ್ಡೆ ಮಾತನಾಡಿ ದೇಶದ ಅಭಿವೃದ್ಧಿಯಲ್ಲಿ ರೈತರ ಕೊಡುಗೆ ದೊಡ್ಡದಾಗಿದೆ. ಅಡಿಕೆಯನ್ನು ನಿಷೇಧಿಸಿದರೆ ರೈತರು ಬೀದಿಪಾಲಾಗಲಿದ್ದಾರೆ. ರೈತರನ್ನು ನೆಮ್ಮದಿ­ಯಿಂದ ಬದುಕುಲು ಬಿಡಿ.

ADVERTISEMENT

ಅಡಿಕೆಯನ್ನು ನಿಷೇಧಿಸುವ ಮೊದಲು ತಂಬಾಕು, ಮದ್ಯ ಹಾಗೂ ಸಿಗರೇಟನ್ನು ಸರಕಾರ ನಿಷೇಧಿಸಲಿ ಎಂದು ಅವರು ಹೇಳಿದರು. ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಭಾಸ್ಕರ್ ಕೋಟ್ಯಾನ್, ಕೆಎಂಎಫ್ ನಿರ್ದೇೇಶಕ ಕೆ.ಪಿ ಸುಚರಿತ ಶೆಟ್ಟಿ, ಕೆ.ಆರ್ ಪಂಡಿತ್, ವಕೀಲ ಶಾಂತಿಪ್ರಸಾದ್ ಹೆಗ್ಡೆ, ಎಪಿಎಂಸಿಯ ರತ್ನಾಕರ ಪೂಜಾರಿ, ಜೊಸ್ಸಿಂತಾ ಡಿಸೋಜಾ, ಪಾಲಡ್ಕ ಸೀತಾರಾಮ ಶೆಟ್ಟಿ ಮತ್ತಿತರ­ರು ಇದ್ದರು. ಇದಕ್ಕೂ ಮೊದಲು ಸಾವಿರಕಂಬ ಬಸದಿ ಆವರಣದಿಂದ ತಹಶಿಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆ­ಯಿತು. ಬಳಿಕ ಉಪತಹಶಿಲ್ದಾರ್ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಇಲ್ಲಿನ ಅಡಿಕೆ ವರ್ತಕರು ಸ್ವಲ್ಪ ಹೊತ್ತು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.