ಪುತ್ತೂರು: ಬೈಕಿನಲ್ಲಿ ತೆರಳುತ್ತಿದ್ದ ಮೂವರ ಮೇಲೆ ರಿಕ್ಷಾದಲ್ಲಿ ಬಂದ ಅಪರಿಚಿತರಿಬ್ಬರು ಆಸಿಡ್ ಎರಚಿ ಪರಾರಿಯಾದ ಘಟನೆ ಶನಿವಾರ ರಾತ್ರಿ ತಾಲ್ಲೂಕಿನ ಆರ್ಯಾಪು ಗ್ರಾಮದ ಸಂಪ್ಯ ಸಮೀಪದ ವೆಂಕಟೇಶ್ವರ ಸಾ ಮಿಲ್ ಬಳಿ ಸಂಭವಿಸಿದೆ.
ಬಡಗನ್ನೂರು ಗ್ರಾಮದ ಪೆರಿಗೇರಿ ನಿವಾಸಿಯಾಗಿದ್ದು ಪುತ್ತೂರಿನ ಮಹಾ ಲಿಂಗೇಶ್ವರ ದೇವಾಲಯದ ಬಳಿ ಹಣ್ಣು ಕಾಯಿ ವ್ಯಾಪಾರ ನಡೆಸುತ್ತಿದ್ದ ಸೀತಾರಾಮ ಆಚಾರ್ಯ (62) , ಅವರ ಪುತ್ರರಾದ ಚಿನ್ನಾಭರಣ ತಯಾರಿಕೆಯ ಕುಶಲಕರ್ಮಿ ಗಳಾದ ಅಮೃತೇಶ್ (35) ಮತ್ತು ರಾಜ್‌ಕುಮಾರ್ (28) ಆಸಿಡ್ ದಾಳಿಗೆ ತುತ್ತಾದವರು.
ಮುಖದ ಭಾಗಕ್ಕೆ ಗಂಭೀರ ಗಾಯ ಗಳಾಗಿರುವ ಅಮೃತೇಶ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ. ದೇಹದ ಭಾಗದಲ್ಲಿ ಸುಟ್ಟ ಗಾಯಗಳಾಗಿರುವ ಸೀತಾರಾಮ ಆಚಾರ್ಯ ಮತ್ತು ರಾಜ್‌ಕುಮಾರ್ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಿನ್ನಾಭರಣ ತಯಾರಿಸುವ ವೃತ್ತಿ ನಡೆಸುತ್ತಿದ್ದ ಅಮೃತೇಶ್ ಕಳೆದ ಎರಡು ವರ್ಷದ ಹಿಂದೆಯಷ್ಟೇ ಸುಳ್ಯದ ಚೆನ್ನಕೇಶವ ದೇವಾಲಯದ ಬಳಿ ಚಿನ್ನಾಭರಣ ತಾಯಾರಿಕಾ ಅಂಗಡಿ ನಡೆಸುತ್ತಿದ್ದರು. ಅವರ ಸಹೋದರ ಪುತ್ತೂರಿನಲ್ಲಿ ಚಿನ್ನಾಭರಣ ತಯಾರಿಕಾ ವೃತ್ತಿ ನಡೆಸುತ್ತಿದ್ದು, ಪ್ರತಿ ದಿನ ಅಮೃತೇಶ್ ಅವರು ಸುಳ್ಯದಿಂದ ಪುತ್ತೂರಿಗೆ ಬಂದು ಬೈಕಿನಲ್ಲಿ ತನ್ನ ತಂದೆ ಮತ್ತು ಸಹೋದರನನ್ನು ಪೆರಿಗೇರಿಯಲ್ಲಿ ಮನೆಗೆ ಕರೆದೊಯ್ಯುತ್ತಿದ್ದರು.
ಎಂದಿನಂತೆ ಸುಳ್ಯದಿಂದ ಪುತ್ತೂರಿಗೆ ಬಂದಿದ್ದ ಅಮೃತೇಶ್ ಅವರು ಕೆಲಸ ಮುಗಿಸಿ ತನ್ನ ತಂದೆ ಮತ್ತು ಸಹೋದರನನ್ನು ಬೈಕಿನಲ್ಲಿ ಕರೆದೊಯ್ಯುತ್ತಿದ್ದ ವೇಳೆ ದರ್ಬೆ ತಲುಪುತ್ತಿದ್ದಂತೆಯೇ ಅವರ ಮೊಬೈಲಿಗೆ ಮೊಬೈಲ್ ನಂಬರೊಂದರಿಂದ ಅಪರಿಚಿತನೊಬ್ಬ ಫೋನ್ ಮಾಡಿ ನಮ್ಮಲ್ಲಿ ಹಳೆಯದಾದ ಚಿನ್ನವಿದ್ದು ತುರ್ತಾಗಿ ಚಿನ್ನಾಭರಣದ ಕೆಲಸ ಮಾಡಿಕೊಡಬೇಕಾಗಿದೆ ಎಂದಿದ್ದ. ಮಾತ್ರವಲ್ಲದೆ ನೀವು ಎಲ್ಲಿದ್ದೀರಿ. ಅಲ್ಲಿಗೆ ನಾವು ಬರುತ್ತೇವೆ ಅಂದಿದ್ದ. ಇದನ್ನು ಸತ್ಯವೆಂದು ನಂಬಿದ ಅಮೃತೇಶ್ ನಾವು ಸಂಪ್ಯ ಸಮೀಪದ ವೆಂಕಟೇಶ್ವರ ಸಾ ಮಿಲ್ ಬಳಿ ನಿಲ್ಲುತ್ತೇನೆ . ಅಲ್ಲಿಗೆ ಬನ್ನಿ ಅಂದಿದ್ದರು.
ಅಮೃತೇಶ್ ಅವರು ಬೈಕ್ ನಿಲ್ಲಿಸಿ ಅವರಿಗಾಗಿ ಕಾಯುತ್ತಿದ್ದ ವೇಳೆ ಅಲ್ಲಿಗೆ ರಿಕ್ಷಾವೊಂದರಲ್ಲಿ ಆಗಮಿಸಿದ ದುಷ್ಕರ್ಮಿಗಳಿಬ್ಬರು ಚಿನ್ನದ ವಿಚಾರದಲ್ಲಿ ತಮ್ಮಳಗೆ ವಾದಿಸಿಕೊಂಡು ಬಂದು ಏಕಾಏಕಿಯಾಗಿ ಮೂವರ ಮೇಲೆ ಆ್ಯಸಿಡ್ ಎರಚಿ ಅಲ್ಲಿಂದ ಪರಾರಿಯಾದರೆಂದು ತಿಳಿದು ಬಂದಿದೆ. ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸ್ದ್ದಿದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.