ADVERTISEMENT

ವಾಕಿಂಗ್‌ ಬಂದವರಿಗೆ ಸಿಕ್ಕಿತು ಉಡುಗೊರೆ

ಪ್ರಜಾವಾಣಿ–ಡೆಕ್ಕನ್‌ ಹೆರಾಲ್ಡ್‌ನಿಂದ ವಿಶ್ವ ಪರಿಸರ ದಿನಾಚರಣೆ--: ಗಿಡ ವಿತರಣೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2018, 7:14 IST
Last Updated 6 ಜೂನ್ 2018, 7:14 IST
ಮಂಗಳೂರಿನ ಕದ್ರಿ ಉದ್ಯಾನದಲ್ಲಿ ‘ಪ್ರಜಾವಾಣಿ–ಡೆಕ್ಕನ್ ಹೆರಾಲ್ಡ್’ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಪಾಲಿಕೆ ಸದಸ್ಯೆ ರೂಪಾ ಡಿ. ಬಂಗೇರಾ ಸಸಿ ನೆಟ್ಟರು.  ಪ್ರಜಾವಾಣಿ ಚಿತ್ರ
ಮಂಗಳೂರಿನ ಕದ್ರಿ ಉದ್ಯಾನದಲ್ಲಿ ‘ಪ್ರಜಾವಾಣಿ–ಡೆಕ್ಕನ್ ಹೆರಾಲ್ಡ್’ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಪಾಲಿಕೆ ಸದಸ್ಯೆ ರೂಪಾ ಡಿ. ಬಂಗೇರಾ ಸಸಿ ನೆಟ್ಟರು. ಪ್ರಜಾವಾಣಿ ಚಿತ್ರ   

ಮಂಗಳೂರು: ನಗರದ ಕದ್ರಿ ಉದ್ಯಾ ನದಲ್ಲಿ ವಾಯು ವಿಹಾರಕ್ಕೆ ಬಂದವರಿಗೆ ಅಚ್ಚರಿಯ ಉಡುಗೊರೆಯೊಂದು ಕಾಯ್ದಿತ್ತು. ಬೆಳಿಗ್ಗೆ ಸ್ವಚ್ಛ ಗಾಳಿ ಸೇವಿಸಲು ಉದ್ಯಾನಕ್ಕೆ ಬಂದವರಿಗೆ ಮನೆಯ ಅಂಗಳದಲ್ಲಿಯೇ ನೆಡಲು ಸಸಿಗಳ ವಿತರಣೆ ಮಾಡಲಾಯಿತು. ಅದೂ ಕೂಡ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್’ ಪತ್ರಿಕೆಗಳೊಂದಿಗೆ.

‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ವತಿಯಿಂದ ಮಂಗಳವಾರ ನಗರದ ಕದ್ರಿ ಉದ್ಯಾನದಲ್ಲಿ ಆಯೋಜಿ ಸಿದ್ದ ವಿಶ್ವ ಪರಿಸರ ದಿನಾಚರಣೆಯ ಸಂಭ್ರಮವಿದು. ಸಾರ್ವಜನಿಕರಿಗೆ 500 ಕ್ಕೂ ಹೆಚ್ಚು ಸಸಿ ವಿತರಣೆ ಮಾಡುವ ಮೂಲಕ ಪರಿಸರ ಜಾಗೃತಿ ಮೂಡಿಸುವ ಕಾರ್ಯ ಕೈಗೊಳ್ಳಲಾಯಿತು.

ಕದ್ರಿ ಉದ್ಯಾನದಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ್‌ ಕಾಮತ್‌ ಮಾತನಾಡಿ, ಅವಕಾಶ ಇದ್ದ ಕಡೆ ಗಿಡಗಳನ್ನು ನೆಡುವುದರಿಂದ ಪರಿಸರದ ಉಳಿವಿಗೆ ಸೇವೆ ಸಲ್ಲಿಸಬಹುದು ಎಂದರು.

ADVERTISEMENT

ದಕ್ಷಿಣ ಕನ್ನಡ ಜಿಲ್ಲಾಡಳಿತ, ಮಂಗಳೂರು ಮಹಾನಗರ ಪಾಲಿಕೆ ಈಗಾಗಲೇ ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿವೆ. ಇದೀಗ ‘ಪ್ರಜಾವಾಣಿ’, ‘ಡೆಕ್ಕನ್‌ ಹೆರಾಲ್ಡ್‌’ ಬಳಗದಿಂದ ಇಂತಹ ಕಾರ್ಯಕ್ರಮ ನಡೆಯುತ್ತಿರುವುದು ಅರ್ಥಪೂರ್ಣವಾಗಿದೆ ಎಂದರು.

ಮಂಗಳೂರಿನ ಜನರು ಮರಗಿ ಡಗಳನ್ನು ಉಳಿಸಿ, ಬೆಳೆಸುವ ಮೂಲಕ ಮುಂದಿನ ಪೀಳಿಗೆಗೆ ಪರಿಸರವನ್ನು ಸುರಕ್ಷಿತವಾಗಿ ಹಸ್ತಾಂತರಿಸುವ ಕೆಲಸ ಮಾಡಬೇಕಿದೆ ಎಂದು ಶಾಸಕರು ತಿಳಿಸಿದರು.

ಮೇಯರ್ ಕೆ. ಭಾಸ್ಕರ್ ಮೊಯಿಲಿ ಮಾತನಾಡಿ, ಪರಿಸರ ದಿನವನ್ನು ಹಬ್ಬದಂತೆ ಆಚರಿಸಬೇಕಾಗಿದೆ. ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಿ ರುವ ಮಂಗಳೂರಿನಂತಹ ನಗರದ ಭವಿಷ್ಯಕ್ಕಾಗಿ ಹಸಿರೀಕರಣ ಅವಶ್ಯಕ ವಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಪ್ರಜೆ ಗಿಡ ನೆಡುವ ಮೂಲಕ ಸ್ವಚ್ಛ, ಸುಂದರ ಮಂಗಳೂರಿಗೆ ಕೊಡುಗೆ ನೀಡಬೇಕು ಎಂದು ಹೇಳಿದರು.

ಸ್ಥಳೀಯ ಪಾಲಿಕೆ ಸದಸ್ಯೆ ರೂಪಾ ಡಿ. ಬಂಗೇರಾ ಮಾತನಾಡಿ, ‘ನಮ್ಮ ಪೂರ್ವಜರು ಪರಿಸರವನ್ನು ಪೂಜಿಸಿದರು. ಆದರೆ ಇಂದು ಆಧುನೀಕರಣದ ಹೆಸರಿನಲ್ಲಿ ಪರಿಸರ ನಾಶವಾಗುತ್ತಿದೆ. ಇದರಿಂದಾಗಿ ಜಾಗತಿಕ ತಾಪಮಾನದಂತಹ ಹವಾಮಾನ ವೈಪರೀತ್ಯವನ್ನು ಎದುರಿಸಬೇಕಾಗಿದೆ. ನಗರ ಪ್ರದೇಶಗಳಲ್ಲಿ ನೆರಳಿಗಾಗಿ ಮರಗಳನ್ನು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ನಾವು ಹಸಿರು ಕಾಡಿನ ಬದಲು ಕಾಂಕ್ರೀಟ್‌ ಕಾಡನ್ನು ಬೆಳೆಸುತ್ತಿದ್ದೇವೆ’ ಎಂದು ಕಳವಳ ವ್ಯಕ್ತಪಡಿಸಿದರು.

ಗಿಡಗಳನ್ನು ನೆಡುವುದರ ಜತೆಗೆ ನವೀಕರಿಸಲಾಗದ ಇಂಧನ ಹಾಗೂ ಪ್ಲಾಸ್ಟಿಕ್‌ ಬಳಕೆಯನ್ನು ಕಡಿಮೆ ಮಾಡ ಬೇಕು. ಈ ಮೂಲಕ ಪರಿಸರ ಸಂರಕ್ಷಣೆ ಮಾಡಬಹುದಾಗಿದೆ. ಪರಿಸರ ದಿನ ಸಂಭ್ರಮ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತ ಆಗಬಾರದು ಎಂದು ಅಭಿಪ್ರಾಯಪಟ್ಟರು.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ರವಿ ಬಸರಿಹಳ್ಳಿ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಎಚ್‌.ಆರ್‌. ನಾಯ್ಕ್, ವಲಯ ಅರಣ್ಯಾಧಿಕಾರಿ ಪಿ. ಶ್ರೀಧರ್‌, ಪಾಲಿಕೆಯ ವಿರೋಧ ಪಕ್ಷದ ನಾಯಕ ಪ್ರೇಮಾನಂದ ಶೆಟ್ಟಿ, ಪ್ರಜಾವಾಣಿ ಮಂಗಳೂರು ಬ್ಯುರೋ ಮುಖ್ಯಸ್ಥ ಬಾಲಕೃಷ್ಣ ಎಂ.ಜಿ., ಡೆಕ್ಕನ್‌ ಹೆರಾಲ್ಡ್‌ ಬ್ಯುರೋ ಮುಖ್ಯಸ್ಥ ಡಾ.ರೊನಾಲ್ಡ್‌ ಅನಿಲ್‌ ಫರ್ನಾಂಡಿಸ್‌, ಪ್ರಸರಣ ವಿಭಾಗದ ವ್ಯವಸ್ಥಾಪಕ ಪ್ರಕಾಶ್‌ ನಾಯಕ್‌, ಪ್ರಜಾವಾಣಿ ಮತ್ತು ಡೆಕ್ಕನ್‌ ಹೆರಾಲ್ಡ್‌ ಉದ್ಯೋಗಿಗಳು ಪಾಲ್ಗೊಂಡಿದ್ದರು.

ಹಣ್ಣು, ಹೂಗಳ ಗಿಡ ವಿತರಣೆ

ಪ್ರಜಾವಾಣಿ ಮತ್ತು ಡೆಕ್ಕನ್‌ ಹೆರಾಲ್ಡ್‌ ವತಿಯಿಂದ ಆಯೋಜಿಸಿದ್ದ ಪರಿಸರ ದಿನಾಚರಣೆಯಲ್ಲಿ ಹೂವು, ಹಣ್ಣಿನ 500ಕ್ಕೂ ಅಧಿಕ ಸಸಿಗಳನ್ನು ಸಾರ್ವಜನಿಕರಿಗೆ ವಿತರಿಸಲಾಯಿತು.

ಜಾಂಬುಳ, ಬಿಲ್ವ, ಸಂಪಿಗೆ, ಮಂದಾರ ಪುಷ್ಪ, ಬಾದಾಮಿ, ಸಾಗುವಾನಿ, ಬೇವು ಸೇರಿದಂತೆ ವಿವಿಧ ಬಗೆಯ ಸಸಿಗಳನ್ನು ಸಾರ್ವಜನಿಕರು ಸಂತಸದಿಂದಲೇ ಸ್ವೀಕರಿಸಿದರು. ಮನೆಯ ಆವರಣದಲ್ಲಿ ಸಸಿ ನೆಟ್ಟು, ಪೋಷಿಸುವ ಭರವಸೆಯನ್ನು ನೀಡಿದರು. ಜತೆಗೆ ಪತ್ರಿಕೆಗಳ ಸಾಮಾಜಿಕ ಕಳಕಳಿಯನ್ನು ಶ್ಲಾಘಿಸಿದರು.

**
ಮಾಧ್ಯಮ ರಂಗದಲ್ಲಿ ವಿಶ್ವಾಸಾರ್ಹತೆಗೆ ಪಾತ್ರವಾ ಗಿರುವ ‘ಪ್ರಜಾವಾಣಿ’ ಮತ್ತು ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳು ಪರಿಸರ ರಕ್ಷಣೆಗೆ ಮುಂದಾಗಿರುವುದು ಶ್ಲಾಘನೀಯ
- ಡಿ.ವೇದವ್ಯಾಸ್‌ ಕಾಮತ್‌, ಶಾಸಕ 
**
ನಗರದಲ್ಲಿ ಸ್ವಚ್ಛ ವಾತಾವರಣ ನಿರ್ಮಾಣಕ್ಕೆ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಬಳಗದಿಂದ ಹಮ್ಮಿಕೊಂಡಿರುವ ಕಾರ್ಯಕ್ರಮ ಅರ್ಥಪೂರ್ಣವಾಗಿದೆ
- ಭಾಸ್ಕರ್‌ ಮೊಯಿಲಿ, ಮೇಯರ್‌ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.