ADVERTISEMENT

ವಿವೇಕ ಪಾಲನೆಯಿಂದ ಮಾತ್ರ ರಾಷ್ಟ್ರಕ್ಕೆ ಭವಿಷ್ಯ: ಮುಖ್ಯಮಂತ್ರಿ

​ಪ್ರಜಾವಾಣಿ ವಾರ್ತೆ
Published 13 ಜನವರಿ 2012, 6:25 IST
Last Updated 13 ಜನವರಿ 2012, 6:25 IST

ಮಂಗಳೂರು: ಸ್ವಾಮಿ ವಿವೇಕಾನಂದ ಅವರು ಈ ರಾಷ್ಟ್ರ ಕಂಡ ಮಹಾನ್ ದಾರ್ಶನಿಕರು, ಯುವಶಕ್ತಿಯಲ್ಲಿ ಅವರು ಅಪಾರ ನಂಬಿಕೆ ಇಟ್ಟವರಾಗಿದ್ದರು. ಯುವಕರು ಅವರ ಆದರ್ಶಗಳನ್ನು ಪಾಲಿಸಿದರೆ ಮಾತ್ರ ರಾಷ್ಟ್ರಕ್ಕೆ ಉಜ್ವಲ ಭವಿಷ್ಯ ಇದೆ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹೇಳಿದರು.

ನಗರದ ಮಂಗಳ ಕ್ರೀಡಾಂಗಣದಲ್ಲಿ ಗುರುವಾರ ಸಂಜೆ 17ನೇ ರಾಷ್ಟ್ರೀಯ ಯುವಜನೋತ್ಸವ ಉದ್ಘಾಟಿಸಿದ ಅವರು, ವಿವಿಧತೆಯಲ್ಲಿ ಏಕತೆ ಕಂಡ ಹಾಗೂ ಯುವ ಶಕ್ತಿಯಲ್ಲಿ ಬಹಳ ದೊಡ್ಡ ವಿಶ್ವಾಸ ಇಟ್ಟ ವಿವೇಕಾನಂದರು ಯುವಜನತೆಗೆ ಸದಾ ಸ್ಪೂರ್ತಿಯ ಸೆಲೆಯಾಗಿದ್ದರು ಎಂದರು.

ಕರ್ನಾಟಕ ಜ್ಞಾನ ಆಯೋಗ ಇತ್ತೀಚೆಗೆ ನೀಡಿದ ಸಮೀಕ್ಷಾ ವರದಿಯಿಂದ ಬಹಳ ದೊಡ್ಡ ಅಂಶಗಳು ಹೊರಬಿದ್ದಿವೆ. ರಾಜ್ಯದ ಯುವಕರು ಕುಟುಂಬ ಜೀವನಕ್ಕೆ ಹೆಚ್ಚು ಒತ್ತು ನೀಡುವವರು ಮತ್ತು ಉನ್ನತ ಶಿಕ್ಷಣಕ್ಕೆ ಆದ್ಯತೆ ನೀಡುವವರು ಎಂಬುದು ಈ ವರದಿಯಿಂದ ಗೊತ್ತಾಗಿದೆ. ಇದು ನಾವು ಹೆಮ್ಮೆಪಡಬೇಕಾದ ಸಂಗತಿಯಾಗಿದೆ ಎಂದರು.

ಮುಂಬರುವ ಕರ್ನಾಟಕ ಮಾನವ ಅಭಿವೃದ್ಧಿ ಕಾರ್ಯಸೂಚಿಯಲ್ಲಿ ಯುವಜನರ ಬಗೆಗೆ ವಿಶೇಷ ಕಾಳಜಿ ವಹಿಸಲಾಗುವುದು. 2013ರ ವಿವೇಕಾನಂದರ ಜಯಂತಿ ವೇಳೆಗೆ ರಾಜ್ಯ ಯುವ ನೀತಿ ಜಾರಿಗೆ ತರಲಾಗುವುದು ಎಂದು ಅವರು ತಿಳಿಸಿದರು.

ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಯುವಕರ ಪಾಲು ಶೇ. 41ರಷ್ಟಿದ್ದು, ಅವರ ಒಳಿತಿಗಾಗಿ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಹಾಕಿಕೊಳ್ಳಳಿದೆ. ಪ್ರತ್ಯೇಕ ಯುವ ಬಜೆಟ್ ಮಂಡಿಸುವ ವಿಚಾರ ಇದೆ ಎಂದರು.

ರಾಜ್ಯ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯನ್ನು ಬಲಪಡಿಸಲಾಗುವುದು. ಪ್ರತಿ ತಾಲ್ಲೂಕಿನಲ್ಲೂ ಅಗತ್ಯ ಸಿಬ್ಬಂದಿಯನ್ನು ನೇಮಿಸಲಾಗುವುದು. ಯುವಕರಿಗೆ ಎಲ್ಲಾ ರೀತಿಯ ಸೌಲಭ್ಯ ಒದಗಿಸಿಕೊಡಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ನುಡಿದರು.

ಗೋಪಾಲಕೃಷ್ಣ ಅಡಿಗರ `ಕಟ್ಟುವೆವು ನಾವು ಹೊಸ ನಾಡೊಂದನು...~ ಕವನದ ಸಾಲುಗಳನ್ನು ಉಲ್ಲೇಖಿಸಿದ ಅವರು, ಸ್ವಾಮಿ ವಿವೇಕಾನಂದರು ಮೈಸೂರಿನ ಮಹಾರಾಜರಿಗೆ ಬರೆದ ಪತ್ರವನ್ನೂ ಉಲ್ಲೇಖಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.