ADVERTISEMENT

‘ವೇದವ್ಯಾಸ ಕಾಮತ್‌ರಿಂದ ನೀಚ ರಾಜಕಾರಣ’

ಮಂಗಳೂರು ದಕ್ಷಿಣ ಕ್ಷೇತ್ರದ ಮಾಜಿ ಶಾಸಕ ಜೆ.ಆರ್‌.ಲೋಬೋ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2019, 16:05 IST
Last Updated 27 ಫೆಬ್ರುವರಿ 2019, 16:05 IST

ಮಂಗಳೂರು: ತಾವು ಶಾಸಕರಾಗಿದ್ದ ಅವಧಿಯಲ್ಲಿ ಬಡವರಿಗೆ ಸೂರು ಕಲ್ಪಿಸಲು ರೂಪಿಸಿದ ಶಕ್ತಿನಗರ ಬಹುಮಹಡಿ ವಸತಿ ಯೋಜನೆ ವಿಷಯದಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದ ಹಾಲಿ ಶಾಸಕ ಡಿ.ವೇದವ್ಯಾಸ ಕಾಮತ್‌ ನೀಚತನದ ರಾಜಕಾರಣ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಜೆ.ಆರ್‌.ಲೋಬೊ ವಾಗ್ದಾಳಿ ನಡೆಸಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನನ್ನ ಸತತ ಪ್ರಯತ್ನದಿಂದಾಗಿ ಶಕ್ತಿನಗರದಲ್ಲಿ ನೆಲ ಅಂತಸ್ತು ಮತ್ತು ಮೂರು ಮಹಡಿಯಲ್ಲಿ 930 ಮನೆಗಳುಳ್ಳ ವಸತಿ ಸಂಕೀರ್ಣ ನಿರ್ಮಿಸಲು ಒಪ್ಪಿಗೆ ದೊರಕಿತ್ತು. 9 ಎಕರೆ ಜಮೀನು ಮತ್ತು ₹ 61.50 ಕೋಟಿ ಅನುದಾನ ಒದಗಿಸಲಾಗಿತ್ತು. ಅರಣ್ಯ ಇಲಾಖೆ ಒಮ್ಮೆ ಅನುಮತಿ ಕೊಟ್ಟು, ಈಗ ಹಿಂದಕ್ಕೆ ಪಡೆದಿದೆ. ಇದಕ್ಕೆ ಹಾಲಿ ಶಾಸಕರೇ ಕಾರಣ’ ಎಂದು ಆರೋಪಿಸಿದರು.

ಶಕ್ತಿನಗರ ವಸತಿ ಯೋಜನೆ ಅನುಷ್ಠಾನಕ್ಕೆ ಬಾರದಿರಲು ಮಾಜಿ ಶಾಸಕ ಲೋಬೊ ಕಾರಣ ಎಂದು ಅವರು ಇತ್ತೀಚೆಗೆ ಎರಡು ಸಭೆಗಳಲ್ಲಿ ಆಪಾದಿಸಿದ್ದಾರೆ. ವಿಧಾನಸಭೆ ಚುನಾವಣೆ ಸಮಯದಲ್ಲೇ ‘ಈ ಯೋಜನೆ ಅನುಷ್ಠಾನ ಆಗುವುದಿಲ್ಲ’ ಎಂದು ಜನರ ದಿಕ್ಕು ತಪ್ಪಿಸಲು ಯತ್ನಿಸಿದ್ದರು. ಈ ಯೋಜನೆ ಬಡವರಿಗಾಗಿ ರೂಪಿಸಿದ್ದು ಎಂಬ ಕಾರಣದಿಂದ ತೆರೆಮರೆಯಲ್ಲಿ ಅಡ್ಡಿಪಡಿಸುತ್ತಿದ್ದಾರೆ. ಜನರನ್ನು ದಿಕ್ಕು ತಪ್ಪಿಸಲು ತಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ದೂರಿದರು.

ADVERTISEMENT

ಪರಿಸರವಾದಿಯೊಬ್ಬರ ದೂರು ಆಧರಿಸಿ ಅರಣ್ಯ ಇಲಾಖೆ ಒಪ್ಪಿಗೆ ಹಿಂದಕ್ಕೆ ಪಡೆದಿದೆ. ಶಾಸಕರ ಸ್ಥಾನದಲ್ಲಿರುವವರು ಈ ಸಮಸ್ಯೆಯನ್ನು ಬಗೆಹರಿಸಲು ಕ್ರಮ ವಹಿಸಬೇಕಿತ್ತು. ಆದರೆ, ಅವರು ಯಾವ ಕೆಲಸವನ್ನೂ ಮಾಡಿಲ್ಲ. ಎಲ್ಲವನ್ನೂ ಗಮನಿಸಿದರೆ ಅವರೇ ಹಿಂದಿನಿಂದ ಅಡ್ಡಿಪಡಿಸುತ್ತಿರುವ ಅನುಮಾನವಿದೆ ಎಂದರು.

‘ಮಾಡಿ ತೋರಿಸುತ್ತೇನೆ’:

‘ಇದು ಬಡವರಿಗೆ ಸೂರು ಒದಗಿಸುವ ಯೋಜನೆ. ಹಣ ಮಂಜೂರಾತಿ, ಫಲಾನುಭವಿಗಳ ಆಯ್ಕೆ ಎಲ್ಲವೂ ಮುಗಿದಿದೆ. ಈಗ ಹಿಂದಿನಿಂದ ಕುತಂತ್ರ ಮಾಡಿ ಯೋಜನೆ ನಿಲ್ಲಿಸಲು ಯತ್ನಿಸಬೇಡಿ. ನಿಮಗೆ ಸಾಮರ್ಥ್ಯ ಇದ್ದರೆ ಯೋಜನೆಯನ್ನು ಪೂರ್ಣಗೊಳಿಸಿ. ಇಲ್ಲವಾದರೆ ನಾನು ಮಾಡಿ ತೋರಿಸುತ್ತೇನೆ. ಹೇಗೆ ಯೋಜನೆ ಪೂರ್ಣಗೊಳಿಸಬೇಕು ಎಂಬುದು ನನಗೆ ಗೊತ್ತಿದೆ’ ಎಂದು ವೇದವ್ಯಾಸ ಕಾಮತ್‌ ಅವರನ್ನುದ್ದೇಶಿಸಿ ಹೇಳಿದರು.

‘ಯಾರೂ ಇಲ್ಲಿ ಕಾಯಂ ಶಾಸಕರಾಗಿರಲು ಸಾಧ್ಯವಿಲ್ಲ. ಒಬ್ಬರ ಅವಧಿಯಲ್ಲಿ ಆರಂಭಿಸಿದ ಜನಪರ ಯೋಜನೆಗಳನ್ನು ಮತ್ತೊಬ್ಬರು ಮುಂದುವರಿಸುವುದು ಸಹಜ. ಬಡವರ ಪರ ಯೋಜನೆಗೆ ಅಡ್ಡಗಾಲು ಹಾಕುವ ನೀಚ ರಾಜಕಾರಣ ಮಾಡಬೇಡಿ. ಕೆಲಸ ಮಾಡಲಾಗದಿದ್ದರೆ ರಾಜೀನಾಮೆ ಕೊಟ್ಟು ಹೋಗಿ’ ಎಂದು ಲೋಬೊ ಆಗ್ರಹಿಸಿದರು.

ಸಾಧನೆ ಶೂನ್ಯ: ಹೊಸ ಶಾಸಕರ ಆಯ್ಕೆಯಾಗಿ ಒಂಬತ್ತು ತಿಂಗಳು ಕಳೆಯಿತು. ಮಂಗಳೂರಿನ ಅಭಿವೃದ್ಧಿಗೆ ನಯಾಪೈಸೆಯಷ್ಟು ವಿಶೇಷ ಅನುದಾನ ತರಲು ಇವರಿಗೆ ಸಾಧ್ಯವಾಗಿಲ್ಲ. ತಮ್ಮ ಅವಧಿಯಲ್ಲಿ ಅನುದಾನ ತಂದ ಕಾಮಗಾರಿಗಳ ಶಂಕುಸ್ಥಾಪನೆ, ರಿಬ್ಬನ್‌ ಕತ್ತರಿಸುವುದರಲ್ಲೇ ಸಂಭ್ರಮಿಸುತ್ತಿದ್ದಾರೆ ಎಂದು ಟೀಕಿಸಿದರು.

ಕದ್ರಿ ಸಂಗೀತ ಕಾರಂಜಿಯ ನಿರ್ವಹಣೆ ಕೆಲಸ ಮಾಡುವ ಯೋಗ್ಯತೆಯೂ ಈ ಶಾಸಕರಿಗೆ ಇಲ್ಲ. ಲಕ್ಷದ್ವೀಪಕ್ಕಾಗಿ ಜೆಟ್ಟಿ ನಿರ್ಮಾಣ, ನದಿ ತೀರದ ಅಭಿವೃದ್ಧಿ, ಮೂರನೇ ಹಂತದ ಮೀನುಗಾರಿಕಾ ಬಂದರು ಅಭಿವೃದ್ಧಿ ಸೇರಿದಂತೆ ಎಲ್ಲ ಯೋಜನೆಗಳೂ ನನೆಗುದಿಗೆ ಬಿದ್ದಿವೆ. ಶಾಸಕರು ಸುಳ್ಳು ಆರೋಪ ಮಾಡುವುದರಲ್ಲೇ ಕಾಲಹರಣ ಮಾಡುತ್ತಿದ್ದಾರೆ ಎಂದರು.

ಮೇಯರ್‌ ಭಾಸ್ಕರ್‌ ಕೆ., ಕೆಪಿಸಿಸಿ ಕಾರ್ಯದರ್ಶಿ ಕಳ್ಳಿಗೆ ತಾರಾನಾಥ ಶೆಟ್ಟಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಸಲೀಂ, ವಿಶ್ವಾಸ್‌ಕುಮಾರ್‌ ದಾಸ್‌, ಮಹಾನಗರ ಪಾಲಿಕೆ ಸದಸ್ಯ ಪ್ರಕಾಶ್ ಸಾಲಿಯಾನ್‌ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.