ADVERTISEMENT

ಶಿಶಿಲ: ತುಂಬಿ ಹರಿದ ಕಪಿಲಾ-ದೇಗುಲ ಜಲಾವೃತ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2013, 12:37 IST
Last Updated 2 ಆಗಸ್ಟ್ 2013, 12:37 IST

ಕೊಕ್ಕಡ (ಉಪ್ಪಿನಂಗಡಿ): ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದಿಂದ ಹರಿದು ಬಂದ ಪ್ರವಾಹದಿಂದಾಗಿ ಶಿಶಿಲದಲ್ಲಿ ಹರಿಯುವ ಕಪಿಲಾ ನದಿ ಗುರುವಾರ ಸಂಜೆ ತುಂಬಿ ಹರಿಯಲಾರಂಭಿಸಿದ್ದು, ಜೊತೆಗೆ ಕಾಡು ಪ್ರದೇಶದಿಂದ ಪ್ರವಾಹದಲ್ಲಿ ಕೊಚ್ಚಿ ಬಂದ ಮರವೊಂದು ಶಿಶಿಲದ ಕಿಂಡಿ ಅಣೆಕಟ್ಟೆಗೆ ಸಿಲುಕಿ ನೀರು ಸರಾಗವಾಗಿ ಹರಿಯಲಾರದೆ ಕೃತಕ ನೆರೆ ಬಾಧಿಸಿದೆ.

ಶಿಶಿಲದ ಶಿಶಿಲೇಶ್ವರ ದೇವಳದ ಸನಿಹದಲ್ಲೇ ಹರಿಯುವ ಕಪಿಲಾ ನದಿ ನೀರು ದೇವಳದ ಒಳಗೆ ಪ್ರವೇಶಿಸಿದೆ. ದೇವಳದ ಸಮೀಪದಲ್ಲೇ ಕಿಂಡಿ ಅಣೆಕಟ್ಟು ನಿರ್ಮಿಸಲಾಗಿದ್ದು, ನೀರಿನ ಪ್ರವಾಹದಿಂದಾಗಿ ನದಿ ತುಂಬಿ ಹರಿಯಲಾರಂಭಿಸಿತ್ತು. ನೀರಿನ ಜೊತೆ ಬಂದ ಬೃಹತ್ ಮರ ಮಟ್ಟುಗಳು ಕಿಂಡಿ ಅಣೆಕಟ್ಟೆಯಲ್ಲಿ ಸಿಲುಕಿ ನೆರೆ ನೀರನ್ನು ತಡೆ ಹಿಡಿದಿದೆ. ನದಿ ನೀರು ಸರಾಗವಾಗಿ ಹರಿಯಲಾದರೆ ಕೃತಕ ನೆರೆ ಉಂಟಾಗಿ ದೇವಳ ಸುತ್ತು ಹರಿದು ಆವರಿಸಿ ದೇವಳದ ಒಳ ಪ್ರವೇಶಿಸಿತು. ದೇವಳದ ಉಗ್ರಾಣ, ಜನರೇಟರ್ ಮತ್ತು ಸೇವಾ ಕೌಂಟರ್ ನೆರೆ ನೀರಿನಲ್ಲಿ ಮುಳುಗಿದೆ. ನದಿಯ ದಡದ ಸುಮಾರು ಇಪ್ಪತ್ತು ಎಕರೆ ಪ್ರದೇಶದಲ್ಲಿ ಅಡಿಕೆ ತೋಟಕ್ಕೂ ನೀರು ನುಗ್ಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.