ADVERTISEMENT

ಸುನಾಮಿ: ಸುಳ್ಯ ಮೂಲದವರು ಸುರಕ್ಷಿತ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2011, 8:45 IST
Last Updated 15 ಮಾರ್ಚ್ 2011, 8:45 IST

ಸುಳ್ಯ: ಭೀಕರ ಭೂಕಂಪ ಮತ್ತು ಜಲಪ್ರಳಯಕ್ಕೆ ತುತ್ತಾದ ಜಪಾನ್‌ನಲ್ಲಿರುವ ಸುಳ್ಯ ತಾಲ್ಲೂಕಿನವರು ಸುರಕ್ಷಿತರಾಗಿದ್ದಾರೆ.ಚೆಂಬು ಗ್ರಾಮದ ಅಡ್ಕಾರು ಪುರುಷೋತ್ತಮ ಗೌಡ ಅವರ ಪುತ್ರ, ವಿಜ್ಞಾನಿ ಚರಿತ್‌ರಾಜ್, ಪತ್ನಿ ಸಹನಾ ಅವರೊಂದಿಗೆ ಜಪಾನ್‌ನ ಹಿರೋಸಾಕಿಯಲ್ಲಿದ್ದು ಅವರು ಇರುವ ಪ್ರದೇಶದಲ್ಲಿ ಭೂಕಂಪ ಸಂಭವಿಸಿದೆ. ಚರಿತ್‌ರಾಜ್ ಹೀರೋಸಾಕಿ ಯುನಿವರ್ಸಿಟಿಯಲ್ಲಿ ವಿಜ್ಞಾನಿಯಾಗಿದ್ದಾರೆ.

ಪೇರಡ್ಕದ ತೆಕ್ಕಿಲ್ ಅಬ್ದುಲ್ಲ ಅವರ ಮೊಮ್ಮಗ (ಪುತ್ರಿಯ ಮಗ) ಮುಜಮಿಲ್, ಪತ್ನಿ ಶಬಾನ ಮತ್ತು ಚಿಕ್ಕ ಮಗುವಿನ ಜೊತೆ ಟೋಕಿಯೊ ಬಳಿಯ ಕವಂತ ಎಂಬಲ್ಲಿದ್ದಾರೆ. ಸೋನಿಕ್ ಕಂಪೆನಿಯಲ್ಲಿ ಎಂಜಿನಿಯರ್ ಆಗಿರುವ ಅವರು ಸುರಕ್ಷಿತರಾಗಿದ್ದಾರೆ. ಸುಳ್ಯ ಹಳೆಗೇಟಿನ ಓಡಬಾ ರಾಘವ ನಾಯಕ್ ಅವರ ಪುತ್ರಿ ಪಲ್ಲವಿ, ಅಳಿಯ ವಿಕ್ರಂ, ಮಗು ವಿದಿತಾ  ಟೋಕಿಯೋದಲ್ಲಿದ್ದಾರೆ. ಟೆಸ್ಕೊ ಕಂಪೆನಿಯಲ್ಲಿ ಎಂಜಿನಿಯರ್ ಆಗಿರುವ ಅವರಿಗೆ ಜಲಪ್ರಳಯದ ಅನುಭವ ಆಗಿಲ್ಲ.

ಕಳಂಜ ಗ್ರಾಮದ ಕಾವಿನಮೂಲೆ ನಾರಾಯಣ ವಕೀಲ ಅವರ ಪುತ್ರಿ ಸೌಜನ್ಯಾ ಮತ್ತು ಅಳಿಯ ಮನೋಹರ ಸಂಪತ್ತಿಲ ಮಗುವಿನ ಜೊತೆ ಟೋಕಿಯೋದಲ್ಲಿದ್ದು ಸುರಕ್ಷಿತರಾಗಿದ್ದಾರೆ. ಮನೋಹರ ಸಂಪತ್ತಲ ಟೋಕಿಯೊದಲ್ಲಿ ಮಹೀಂದ್ರ ಸತ್ಯಂ ಕಂಪೆನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದಾರೆ. ಬಾಳಿಲದ ಸೂರಂಬೈಲು ಪುರುಷೋತ್ತಮ ಭಟ್ ಎಂಬವರ ಪುತ್ರಿ ಮತ್ತು ಅಳಿಯ ಕೂಡಾ ಜಪಾನ್‌ನಲ್ಲಿದ್ದು, ಸುರಕ್ಷಿತರಾಗಿದ್ದಾರೆ.

ಕಾಲುದಾರಿ ನಿರ್ಮಾಣಕ್ಕೆ ಮನವಿ
ವಿಟ್ಲ:
ವಿಟ್ಲ ಬಸ್ ನಿಲ್ದಾಣದಿಂದ ಉಪ ನೋಂದಣಿ ಕಚೇರಿಯವರೆಗೆ ಡಾಂಬರು ರಸ್ತೆ ಅತ್ಯಂತ ಕಿರಿದಾಗಿದ್ದು, ಈ ರಸ್ತೆಯ ಎರಡೂ ಬದಿಗಳಲ್ಲಿ ಫುಟ್‌ಪಾತ್ ನಿರ್ಮಿಸಬೇಕು ಎಂದು ವಿಠಲಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.ಮನವಿಯನ್ನು ದ.ಕ. ಜಿಲ್ಲಾಧಿಕಾರಿ, ಸಂಬಂಧಿತ ಇಲಾಖೆ ಹಾಗೂ ಜನಪ್ರತಿನಿಧಿಗಳಿಗೆ ಸಲ್ಲಿಸಲಾಗಿದೆ.

ಈ ವ್ಯಾಪ್ತಿಯಲ್ಲಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಜೇಸೀಸ್ ಆಂಗ್ಲ ಮಾಧ್ಯಮ ಶಾಲೆ, ಸೇಂಟ್ ರೀಟಾ ಪ್ರಾಥಮಿಕ ಹಾಗೂ ಪ್ರೌಢಶಾಲೆ, ವಿಠಲ ಪದವಿ ಪೂರ್ವ ವಿದ್ಯಾ ಸಂಸ್ಥೆ ಹೀಗೆ ವಿವಿಧ ಶಾಲೆಗಳ ಸುಮಾರು 4000ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ಮನೆಯಿಂದ ಶಾಲೆಗೆ ಹಾಗೂ ಶಾಲೆಯಿಂದ ಮನೆಗೆ ತೆರಳುವ ವೇಳೆ ತೊಂದರೆ ಎದುರಿಸಬೇಕಾಗಿದೆ. ವಾಹನ ದಟ್ಟಣೆಯಿಂದ ಪುಟ್ಟ ವಿದ್ಯಾರ್ಥಿಗಳು ಅಪಾಯದ ಸನ್ನಿವೇಶ ಎದುರಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಎರಡೂ ಬದಿಗಳಲ್ಲಿ ‘ಕಾಲುದಾರಿ’ ನಿರ್ಮಿಸುವ ಅಗತ್ಯವಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.