ಮಂಗಳೂರು: ತಾಲ್ಲೂಕಿನ ಪೆರ್ಮುದೆ ಗ್ರಾಮದ ಪ್ರವೀಣ್ ಪಿಂಟೊ ಅವರ ಮನೆಯೊಂದರ ಲಾಕರ್‌ನಲ್ಲಿದ್ದ ಸುಮಾರು 1 ಕೆ.ಜಿ ತೂಕದ ಚಿನ್ನಾಭರಣಗಳು ಮಾರ್ಚ್ 31 ಹಾಗೂ ಏಪ್ರಿಲ್1 ನಡುವೆ ಕಳವಾಗಿದ್ದು, ಈ ಬಗ್ಗೆ ಬಜಪೆ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
‘ಮನೆಯ ಮಾಲೀಕ ಪ್ರವೀಣ್ ಪಿಂಟೊ ಅವರು ತಮ್ಮ ತಾಯಿಯ ಜೊತೆ ಕುವೈತ್‌ನಲ್ಲಿ ನೆಲೆಸಿದ್ದಾರೆ. ಅವರು ಊರಿಗೆ ಬಂದಾಗ ಈ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದರು. ಅವರ ಮನೆಯನ್ನು ಕೆಲಸದವರೇ ನೋಡಿಕೊಳ್ಳುತ್ತಿದ್ದರು. ಮನೆಯ ಸಿಸಿಟಿವಿ ಕ್ಯಾಮೆರಾದ ದೃಶ್ಯಗಳನ್ನು ಪ್ರವೀಣ್ ಅವರ ತಾಯಿ ಮೊಬೈಲ್‌ನಲ್ಲಿ ಆಗಾಗ ವೀಕ್ಷಿಸುತ್ತಿದ್ದರು. ಮನೆಯ ಕೆಲವು ಸಿಸಿಟಿವಿ ಕ್ಯಾಮೆರಾಗಳು ಅಸ್ತವ್ಯಸ್ತವಾಗಿರುವುದು ಮಂಗಳವಾರ ಕಂಡು ಬಂದಿತ್ತು. ಮನೆಯನ್ನು ನೋಡಿಕೊಳ್ಳುತ್ತಿದ್ದ ಕಾರ್ಮಿಕರಿಗೆ ಈ ಬಗ್ಗೆ ತಿಳಿಸಿ, ಪರಿಶೀಲಿಸಿದಾಗ ಲಾಕರ್‌ನಲ್ಲಿದ್ದ ಚಿನ್ನಾಭರಣಗಳು ಕಳುವಾಗಿರುವುದು ಗೊತ್ತಾಗಿತ್ತು. ಬಳಿಕ ಸ್ನೇಹಿತರ ಮೂಲಕ ದೂರು ನೀಡಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಮನೆಯ ಒಳಗಡೆ ಒಂದು ಸಿಸಿಟಿವಿ ಕ್ಯಾಮೆರಾ ಸೇರಿ ಒಟ್ಟು 12 ಸಿಸಿಟಿವಿ ಕ್ಯಾಮೆರಾಗಳನ್ನು ಮನೆಯ ಪರಿಸರದಲ್ಲಿ ಅಳವಡಿಸಲಾಗಿತ್ತು. ಮನೆಯನ್ನು ಕಾವಲು ಕಾಯಲು 6 ನಾಯಿಗಳನ್ನು ಸಾಕಿದ್ದರು. ಮನೆಯ ಬಲಭಾಗದ ಕೆಲವು ಪ್ರದೇಶಕ್ಕೆ ಸಿಸಿಟಿವಿ ಕಣ್ಗಾವಲು ಇರಲಿಲ್ಲ. ಕಳ್ಳರು ಅಲ್ಲೇ ಮನೆಯೊಳಗೆ ಪ್ರವೇಶಿಸಿದ್ದಾರೆ. ಮನೆಯೊಳಗಿದ್ದ ಸಿಸಿಟಿವಿ ಕ್ಯಾಮೆರವಾವನ್ನು ತಿರುಗಿಸಿ, ಅದರಲ್ಲಿ ಕೃತ್ಯದ ದೃಶ್ಯಗಳು ದಾಖಲಾಗದಂತೆ ನೋಡಿಕೊಂಡಿದ್ದಾರೆ. ಇದೆಲ್ಲ ಗಮನಿಸಿದರೆ ಮನೆಯ ಬಗ್ಗೆ ಸಾಕಷ್ಟು ಗೊತ್ತಿದ್ದವರೇ ಈ ಕೃತ್ಯ ನಡೆಸಿರುವ ಶಂಕೆ ಇದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಅನುಮಾನ ವ್ಯಕ್ತಪಡಿಸಿದ್ದಾರೆ.
‘ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಿಗ್ಗೆ ನಡುವೆ ಕಳವು ನಡೆದಿದೆ. ಈ ಕೃತ್ಯ ನಡೆಯುವಾಗ ನಾಯಿಗಳು ಗೂಡಿನಲ್ಲಿದ್ದವು. ಈ ಬಗ್ಗೆ ತನಿಖೆ ಪ್ರಗತಿಯಲ್ಲಿದೆ’ ಎಂದು ಅವರು ಮಾಹಿತಿ ನೀಡಿದರು.
ಪ್ರವೀಣ್ ಪಿಂಟೊ ಅವರು ಕುವೈತ್‌ನಿಂದ ಬುಧವಾರ ಊರಿಗೆ ಮರಳಿದ್ದಾರೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಹಾಗೂ ವಿಧಿವಿಜ್ಞಾನ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.