ADVERTISEMENT

ದಕ್ಷಿಣ ಕನ್ನಡ: 139 ಜನರಲ್ಲಿ ಸೋಂಕು ದೃಢ, ಆರು ಮಂದಿ ಸಾವು

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2020, 16:08 IST
Last Updated 1 ಆಗಸ್ಟ್ 2020, 16:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 139 ಜನರಿಗೆ ಕೋವಿಡ್‌–19 ಸೋಂಕು ತಗುಲಿರುವುದು ಶನಿವಾರ ದೃಢಪಟ್ಟಿದೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,852ಕ್ಕೇರಿದೆ.

‘ಮಂಗಳೂರು ತಾಲ್ಲೂಕಿನ 91, ಬಂಟ್ವಾಳ ತಾಲ್ಲೂಕಿನ 19, ಬೆಳ್ತಂಗಡಿ ತಾಲ್ಲೂಕಿನ 14 ಮತ್ತು ಪುತ್ತೂರು ತಾಲ್ಲೂಕಿನ ಒಂಭತ್ತು ಜನರಿಗೆ ಕೋವಿಡ್‌ ಸೋಂಕು ತಗುಲಿರುವುದು ಶನಿವಾರ ಲಭಿಸಿದ ವರದಿಗಳಿಂದ ಖಚಿತವಾಗಿದೆ. ಜಿಲ್ಲೆಯಲ್ಲಿ ಪರೀಕ್ಷೆಗೊಳಗಾದ ಇತರ ಜಿಲ್ಲೆಗಳ ಆರು ಮಂದಿಗೂ ಸೋಂಕು ತಗುಲಿರುವುದು ದೃಢಪಟ್ಟಿದೆ’ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ.

54 ಮಂದಿ ಗುಣಮುಖ: ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರು ಮತ್ತು ಹೋಂ ಐಸೋಲೇಷನ್‌ನಲ್ಲಿ ಇದ್ದ 54 ಮಂದಿ ಕೋವಿಡ್‌ ಸೋಂಕಿನಿಂದ ಗುಣಮುಖರಾಗಿರುವುದು ಶನಿವಾರ ಖಚಿತಪಟ್ಟಿದೆ. ಆಸ್ಪತ್ರೆಗಳಲ್ಲಿದ್ದು, ಗುಣಮುಖರಾದವರನ್ನು ಮನೆಗಳಿಗೆ ಕಳುಹಿಸಲಾಗಿದೆ.

ADVERTISEMENT

ಜಿಲ್ಲೆಯಲ್ಲಿ ಸೋಂಕಿತರ ಪೈಕಿ ಈವರೆಗೆ ಒಟ್ಟು 2,685 ಮಂದಿ ಗುಣಮುಖರಾಗಿದ್ದಾರೆ. ಸದ್ಯ 3,008 ಸಕ್ರಿಯ ಪ್ರಕರಣಗಳಿವೆ. ಸೋಂಕಿನ ಲಕ್ಷಣಗಳಿರುವವರು ಮತ್ತು ಗಂಭೀರ ಸ್ವರೂಪದ ಅನ್ಯ ಕಾಯಿಲೆಗಳಿಂದ ಬಳಲುತ್ತಿರುವವರನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಉಳಿದವರನ್ನು ಹೋಂ ಐಸೋಲೇಷನ್‌ ಮತ್ತು ಆರೈಕೆ ಕೇಂದ್ರಗಳಲ್ಲಿ ಐಸೋಲೇಷನ್‌ನಲ್ಲಿ ಇಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಆರು ಮಂದಿ ಸಾವು: ಗಂಭೀರ ಸ್ವರೂಪದ ಅನ್ಯ ಕಾಯಿಲೆಗಳಿಂದ ಬಳಲುತ್ತಿದ್ದು, ಕೋವಿಡ್‌ ಸೋಂಕಿತರಾದ ಬಳಿಕ ಚಿಕಿತ್ಸೆಗೆ ಸ್ಪಂದಿಸದೇ ಆರು ಮಂದಿ ಮೃತಪಟ್ಟಿರುವುದನ್ನು ಜಿಲ್ಲಾಡಳಿತ ಶನಿವಾರ ಅಧಿಕೃತವಾಗಿ ಪ್ರಕಟಿಸಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 159ಕ್ಕೇರಿದೆ.

ಮೂಡುಬಿದಿರೆಯಲ್ಲಿ ಕ್ವಾರಂಟೈನ್‌ ಕೇಂದ್ರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿ ಸೇರಿದಂತೆ ಇಬ್ಬರ ಸಾವು ಅನ್ಯ ಕಾರಣಗಳಿಂದ ಸಂಭವಿಸಿದೆ. ಸೋಂಕಿನ ಯಾವುದೇ ಲಕ್ಷಣಗಳಿಲ್ಲದೇ ಇದ್ದ ಈ ಇಬ್ಬರಲ್ಲಿ ಸಾವಿನ ಬಳಿಕ ನಡೆಸಿದ ಪರೀಕ್ಷೆಯಲ್ಲಿ ಕೋವಿಡ್‌ ಸೋಂಕು ಪತ್ತೆಯಾಗಿತ್ತು.

ಆಸ್ಪತ್ರೆಗಳಿಗೆ ಭೇಟಿ: ನಗರದ ಹೊರವಲಯದ ದೇರಳಕಟ್ಟೆಯ ಕೆ.ಎಸ್‌.ಹೆಗ್ಡೆ ವೈದ್ಯಕೀಯ ಕಾಲೇಜು ಮತ್ತು ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಿಗೆ ಶನಿವಾರ ಭೇಟಿ ನೀಡಿದ ನೂತನ ಜಿಲ್ಲಾಧಿಕಾರಿ, ಕೋವಿಡ್‌ ಸೋಂಕಿತರ ಚಿಕಿತ್ಸೆಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್‌ ಕುಮಾರ್‌ ಕಟೀಲ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ.ಆರ್‌.ಸೆಲ್ವಮಣಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ ಅವರೊಂದಿಗೆ ಜಿಲ್ಲಾಧಿಕಾರಿ ಈ ಆಸ್ಪತ್ರೆಗಳಿಗೆ ಭೇಟಿ ನೀಡಿದರು. ಆಯುಷ್ಮಾನ್‌ ಭಾರತ್‌– ಆರೋಗ್ಯ ಕರ್ನಾಟಕ ಯೋಜನೆಯ ಫಲಾನುಭವಿಗಳು ಹಾಗೂ ಇತರ ಸಾರ್ವಜನಿಕರಿಗೆ ಕೋವಿಡ್‌ ಚಿಕಿತ್ಸೆಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಪಾಲಿಸುತ್ತಿರುವ ಕುರಿತು ಆಸ್ಪತ್ರೆಗಳ ಪ್ರಮುಖರಿಂದ ಮಾಹಿತಿ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.