ADVERTISEMENT

ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ 2 ಪ್ರವೇಶ

ನಿಲ್ದಾಣ ನೀಲನಕ್ಷೆ– ‘ಕ್ಲಾಕ್‌ ಟವರ್’ ಮಾದರಿಯ ವಿನ್ಯಾಸಕ್ಕೆ ಕ್ಯಾ.ಚೌಟ ಒಲವು

​ಪ್ರಜಾವಾಣಿ ವಾರ್ತೆ
Published 21 ಜುಲೈ 2024, 4:42 IST
Last Updated 21 ಜುಲೈ 2024, 4:42 IST
ಸಭೆಯಲ್ಲಿ ಶಾಸಕ ಡಿ.ವೇದವ್ಯಾಸ ಕಾಮತ್‌, ಮುಲ್ಲೈ ಮುಗಿಲನ್ ಎಂ.ಪಿ., ಕ್ಯಾ.ಬ್ರಿಜೇಶ್ ಚೌಟ, ಅರುಣ್ ಕುಮಾರ್‌ ಚತುರ್ವೇದಿ, ಮೇಯರ್‌ ಸುಧೀರ್ ಶೆಟ್ಟಿ ಕಣ್ಣೂರು, ವಿಜಯಾ ಭಾಗವಹಿಸಿದ್ದರು– ಪ್ರಜಾವಾಣಿ ಚಿತ್ರ
ಸಭೆಯಲ್ಲಿ ಶಾಸಕ ಡಿ.ವೇದವ್ಯಾಸ ಕಾಮತ್‌, ಮುಲ್ಲೈ ಮುಗಿಲನ್ ಎಂ.ಪಿ., ಕ್ಯಾ.ಬ್ರಿಜೇಶ್ ಚೌಟ, ಅರುಣ್ ಕುಮಾರ್‌ ಚತುರ್ವೇದಿ, ಮೇಯರ್‌ ಸುಧೀರ್ ಶೆಟ್ಟಿ ಕಣ್ಣೂರು, ವಿಜಯಾ ಭಾಗವಹಿಸಿದ್ದರು– ಪ್ರಜಾವಾಣಿ ಚಿತ್ರ    

ಮಂಗಳೂರು: ‘ಮಂಗಳೂರು ಸೆಂಟ್ರಲ್ ನಿಲ್ದಾಣವನ್ನು ₹ 310 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ. ಪಶ್ಚಿಮದ ಮುಖ್ಯ ದ್ವಾರದ ಜೊತೆ ಅತ್ತಾವರ ಕಡೆಯಿಂದ ಇನ್ನೊಂದು ಪ್ರವೇಶ ದ್ವಾರವನ್ನು ನಿರ್ಮಿಸಲಾಗುತ್ತದೆ’ ಎಂದು ದಕ್ಷಿಣ ರೈಲ್ವೆಯ ಪಾಲಕ್ಕಾಡ್‌ ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅರುಣ ಕುಮಾರ್‌ ಚತುರ್ವೇದಿ ತಿಳಿಸಿದರು.

ರೈಲ್ವೆ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿ ದಕ್ಷಿಣ ರೈಲ್ವೆ, ನೈರುತ್ಯ ರೈಲ್ವೆ ಹಾಗೂ ಕೊಂಕಣ ರೈಲ್ವೆ ಅಧಿಕಾರಿಗಳು ಮತ್ತು ಜಿಲ್ಲಾಡಳಿತದ ನಡುವೆ ಸಮನ್ವಯ ಸಾಧಿಸಲು ಸಂಸದ ಕ್ಯಾ.ಬ್ರಿಜೇಶ್ ಚೌಟ ನೇತೃತ್ವದಲ್ಲಿ ಶನಿವಾರ ಇಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

‘ರೈಲ್ವೆ ವಸತಿಗಳನ್ನು ಕೆಡವಿ, ಅಲ್ಲಿ 16,632 ಚ.ಮೀ ಜಾಗದಲ್ಲಿ 1200 ಕಾರುಗಳ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. 2ನೇ ಪ್ರವೇಶ ದ್ವಾರದಲ್ಲೂ ಟಿಕೆಟ್‌ ವಿತರಣೆ ಹಾಗೂ ತಪಾಸಣಾ ಸೌಲಭ್ಯವಿರಲಿದೆ. ಅಲ್ಲಿಂದ ಪ್ಲ್ಯಾಟ್‌ಫಾರಂಗಳಿಗೆ ಪಾದಚಾರಿ ಮೇಲ್ಸೇತುವೆ ನಿರ್ಮಿಸಲಾಗುತ್ತದೆ’ ಎಂದು ವಿವರಿಸಿದರು. 

ADVERTISEMENT

‘ಇಷ್ಟೆಲ್ಲ ವೆಚ್ಚ ಮಾಡಿ ಹೆಚ್ಚುವರಿ ಫ್ಲ್ಯಾಟ್‌ಫಾರಂ ನಿರ್ಮಿಸದಿದ್ದರೆ ಹೇಗೆ’ ಎಂದು ರೈಲ್ವೆ ಹೋರಾಟಗಾರ ಹನುಮಂತ ಕಾಮತ್‌ ಪ್ರಶ್ನಿಸಿದರು. ‘ಅದಕ್ಕೆ ಜಾಗ ಇಲ್ಲ’ ಎಂದು ಡಿಆರ್‌ಎಂ ಉತ್ತರಿಸಿದರು.

ನಿಲ್ದಾಣ ಅಭಿವೃದ್ಧಿಗೆ ಇಲಾಖೆ ನಾಲ್ಕು ಪ್ರತ್ಯೇಕ ವಿನ್ಯಾಸಗಳನ್ನು ರೂಪಿಸಿದೆ. ಅವುಗಳಲ್ಲಿ ನಗರದ ‘ಗಡಿಯಾರ ಗೋಪುರ’ವನ್ನು ಹೋಲುವ ನೀಲನಕ್ಷೆಯನ್ನು ಅಂತಿಮಗೊಳಿಸಬಹುದು ಎಂದು ಕ್ಯಾ.ಚೌಟ ಸಲಹೆ ನೀಡಿದರು.

‘ಪಾಂಡೇಶ್ವರ– ಸ್ಟೇಟ್‌ಬ್ಯಾಂಕ್‌ ನಡುವಿನ ಲೆವೆಲ್ ಕ್ರಾಸಿಂಗ್‌ನಲ್ಲಿ ಸಾರ್ವಜನಿಕ ವಾಹನಗಳ ಕಾಯುವ ಸಮಯ ಕಡಿತಗೊಳಿಸಲು ಕ್ರಮವಹಿಸುತ್ತೇವೆ. ನಗರದ 15 ಕಡೆ ರೈಲ್ವೆ ಆಸ್ತಿಗಳ ಬಳಿ ಪಾಲಿಕೆ ಕೈಗೆತ್ತಿಕೊಂಡಿರುವ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ತ್ವರಿತವಾಗಿ ಅನುಮತಿ ನೀಡುತ್ತೇವೆ’ ಎಂದು ಚತುರ್ವೇದಿ ಭರವಸೆ ನೀಡಿದರು. 

ಜಪ್ಪು– ಮಹಾಕಾಳಿ ಪಡ್ಪು ಕೆಳಸೇತುವೆ ನಿರ್ಮಾಣ ಸಂಕೀರ್ಣ ಕಾಮಗಾರಿ. ಇಲ್ಲಿ ನಾಳ್ಕು ಹಳಿಗಳು ಹಾದು ಹೋಗುತ್ತವೆ. ಕಾಂಕ್ರೀಟ್ ಬಾಕ್ಸ್ ರೂಪಿಸಲು ಪಾಲಿಕೆ ತಾತ್ಕಾಲಿಕವಾಗಿ 500 ಚ.ಮೀ ಜಾಗವನ್ನು ಒದಗಿಸಿದರೆ 2025ರ ಜನವರಿಯೊಳಗೆ ಕಾಮಗಾರಿ ಪೂರ್ಣಗೊಳಿಸುತ್ತೇವೆ ಎಂದರು. 

ಜಾಗ ಒದಗಿಸಲು  ಪಾಲಿಕೆ  ಕ್ರಮ ಕೈಗೊಳ್ಳಬೇಕು ಎಂದು ಸಂಸದರು ಸೂಚಿಸಿದರು.

‘ಸುಬ್ರಹ್ಮಣ್ಯ ರೋಡ್ ನಿಲ್ದಾಣದ ಸ್ಟೇಬಲಿಂಗ್ ಮಾರ್ಗದ ವಿದ್ಯುದೀಕರಣ ಪೂರ್ಣಗೊಂಡ ಬಳಿಕ ಸುಬ್ರಹ್ಮಣ್ಯ ರೋಡ್‌– ಮಂಗಳೂರು ನಡುವೆ ನೇರ ರೈಲು ಸೇವೆ ಆರಂಭಿಸುತ್ತೇವೆ’ ಎಂದು ನೈರುತ್ಯ ರೈಲ್ವೆಯ ಮೈಸೂರು ವಿಭಾಗದ ಅಧಿಕಾರಿ ವಿಜಯಾ ತಿಳಿಸಿದರು.

‘ಜಿಲ್ಲೆಯ ರೈಲ್ವೆ ಕಾಮಗಾರಿಗಳ ಸಮನ್ವಯಕ್ಕೆ ಮೂರೂ ವಲಯಗಳ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ಒಳಗಿಂಡ ಸಮಿತಿ ರಚಿಸಿದ್ದೇವೆ. ಈ ಸಮಿತಿ ಮೂರು ತಿಂಗಳಿಗೊಮ್ಮೆ‌ಸಭೆ ನಡೆಸಲಿದೆ’ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.