ನೆಲ್ಯಾಡಿ(ಉಪ್ಪಿನಂಗಡಿ): ನೆಲ್ಯಾಡಿ ಪೇಟೆಯಲ್ಲಿ ಹೆಚ್ಚುವರಿಯಾಗಿ 3 ಅಂಡರ್‌ಪಾಸ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದಾಗಿ ನೆಲ್ಯಾಡಿ-ಕೌಕ್ರಾಡಿ ಪೇಟೆ ಉಳಿಸಿ ಹೋರಾಟ ಸಮಿತಿಗೆ ದ.ಕ. ಸಂಸದ ಬ್ರಿಜೇಶ್ ಚೌಟ ಭರವಸೆ ನೀಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 75ರ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು ನೆಲ್ಯಾಡಿ ಪೇಟೆಯಲ್ಲಿ ಎರಡು ಬದಿ ಸರ್ವೀಸ್ ರಸ್ತೆಯ ಪಕ್ಕ ತಡೆಗೋಡೆ ನಿರ್ಮಿಸಿ, ಎತ್ತರಿಸಿದ ರಸ್ತೆ ನಿರ್ಮಿಸಲಾಗುತ್ತಿದೆ. ಈ ರೀತಿ ರಸ್ತೆ ನಿರ್ಮಾಣ ಮಾಡುತ್ತಿರುವುದರಿಂದ ನೆಲ್ಯಾಡಿ ಪೇಟೆ ಇಬ್ಭಾಗವಾಗಲಿದೆ. ಇದರಿಂದ ವರ್ತಕರಿಗೆ, ಸಾರ್ವಜನಿಕರಿಗೆ ತೊಂದರೆಯಾಗಲಿದೆ. ಆದ್ದರಿಂದ ನೆಲ್ಯಾಡಿ ಪೇಟೆಯಲ್ಲಿ ಕಲ್ಲಡ್ಕ ಮಾದರಿಯಲ್ಲಿಯೇ ಮೇಲ್ಸೇತುವೆ ಹೆದ್ದಾರಿ ನಿರ್ಮಿಸಬೇಕೆಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿರುವುದರಿಂದ ನೆಲ್ಯಾಡಿ ಪೇಟೆಯಲ್ಲಿನ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದೆ.
ನೆಲ್ಯಾಡಿ-ಕೌಕ್ರಾಡಿ ಪೇಟೆ ಉಳಿಸಿ ಹೋರಾಟ ಸಮಿತಿಯವರು ಸಂಸದರನ್ನು ಭೇಟಿ ಮಾಡಿ, ನೆಲ್ಯಾಡಿಯಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು ಇಲ್ಲಿ ಈಗಾಗಲೇ 2 ಅಂಡರ್‌ಪಾಸ್ ಮಾಡಲಾಗಿದೆ. ಹೆದ್ದಾರಿ ನಿರ್ಮಾಣ ಕಾಮಗಾರಿಯೂ ಅರ್ಧದಷ್ಟು ಮುಗಿದಿದೆ. ಪೇಟೆಯಲ್ಲಿ ಹೆಚ್ಚುವರಿಯಾಗಿ ಮತ್ತೆ ಮೂರು ಅಂಡರ್ಪಾಸ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ನೆಲ್ಯಾಡಿ-ಕೌಕ್ರಾಡಿ ಪೇಟೆ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಎ.ಕೆ. ವರ್ಗೀಸ್, ನೆಲ್ಯಾಡಿ-ಕೌಕ್ರಾಡಿ ವರ್ತಕ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಸತೀಶ್, ಪದಾಧಿಕಾರಿಗಳಾದ ಸರ್ವೋತ್ತಮ ಗೌಡ, ಪಿ.ಪಿ. ವರ್ಗೀಸ್, ಉಷಾ ಅಂಚನ್, ನಾಝೀಂ ಸಾಹೇಬ್, ಕೆ.ಪಿ. ಥಾಮಸ್, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಣಜಾಲು, ಉಷಾ ಅಂಚನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.