ADVERTISEMENT

ತುಸು ತಗ್ಗಿದ ಸೋಂಕಿತರ ಸಂಖ್ಯೆ

ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿತರ ಸಾವಿನ ಸಂಖ್ಯೆ 24ಕ್ಕೇರಿಕೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2020, 17:13 IST
Last Updated 6 ಜುಲೈ 2020, 17:13 IST
   

ಮಂಗಳೂರು: ಕೆಲವು ದಿನಗಳ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್‌–19 ಸೋಂಕಿನ ಹೊಸ ಪ್ರಕರಣಗಳಲ್ಲಿ ತುಸು ಇಳಿಕೆಯಾಗಿದೆ. 200 ಜನರ ಗಂಟಲಿನ ದ್ರವದ ಮಾದರಿಗಳ ವರದಿಗಳು ಸೋಮವಾರ ಲಭಿಸಿದ್ದು, 34 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

ವಿಷಮ ಶೀತ ಜ್ವರದಿಂದ (ಐಎಲ್‌ಐ) ಆಸ್ಪತ್ರೆಗೆ ದಾಖಲಾಗಿದ್ದ ಒಂಭತ್ತು ಜನರು, ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಒಬ್ಬರು, ಶಸ್ತ್ರಚಿಕಿತ್ಸೆಗೂ ಮುನ್ನ ಗಂಟಲಿನ ದ್ರವ ನೀಡಿದ್ದ ಆರು ಮಂದಿ, ಸೋಂಕಿತರ ಪ್ರಾಥಮಿಕ ಸಂಪರ್ಕಿತರ ಪಟ್ಟಿಯಲ್ಲಿದ್ದ 17 ಮಂದಿ ಹಾಗೂ ರ‍್ಯಾಂಡಮ್‌ ಪರೀಕ್ಷೆ ವೇಳೆ ಮಾದರಿ ನೀಡಿದ್ದ ಒಬ್ಬರಲ್ಲಿ ಕೋವಿಡ್‌ ಸೋಂಕು ಇರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ತಿಳಿಸಿದ್ದಾರೆ.

ಸೋಂಕಿತರಲ್ಲಿ ಐದು ವರ್ಷದ ಬಾಲಕಿಯಿಂದ 68 ವರ್ಷ ವಯಸ್ಸಿನ ವೃದ್ಧೆಯವರೆಗೂ ಇದ್ದಾರೆ. ಸೋಮವಾರ ಸೋಂಕು ದೃಢಪಟ್ಟವರಲ್ಲಿ 21 ಮಂದಿ ಪುರುಷರಿದ್ದು, 13 ಮಹಿಳೆಯರಿದ್ದಾರೆ.

ADVERTISEMENT

ಜಿಲ್ಲೆಯಲ್ಲಿ ಒಟ್ಟು ಸೋಂಕಿತರಾದವರ ಸಂಖ್ಯೆ 1,276ಕ್ಕೆ ತಲುಪಿದೆ. 584 ಮಂದಿ ಚಿಕಿತ್ಸೆಯ ಬಳಿಕ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಸದ್ಯ 664 ಸಕ್ರಿಯ ಪ್ರಕರಣಗಳಿದ್ದು, ಎಲ್ಲರಿಗೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

30 ಮಂದಿ ಗುಣಮುಖ: ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 30 ಮಂದಿ ಕೋವಿಡ್‌ ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಅವರನ್ನು ಸೋಮವಾರ ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ.

ಗುಣಮುಖರಾದವರಲ್ಲಿ 21ರಿಂದ 70 ವರ್ಷ ವಯಸ್ಸಿನವರಿದ್ದಾರೆ. 70, 68, 57 ವಯಸ್ಸಿನ ತಲಾ ಒಬ್ಬರು ಹಾಗೂ 63 ಮತ್ತು 50 ವರ್ಷ ವಯಸ್ಸಿನ ತಲಾ ಇಬ್ಬರು ಇದ್ದಾರೆ.

ಆರು ಮಂದಿ ಐಸಿಯುನಿಂದ ಸ್ಥಳಾಂತರ:ಹೃದ್ರೋಗ, ನ್ಯುಮೋನಿಯಾ, ಅಧಿಕ ರಕ್ತದೊತ್ತಡ, ಮಧುಮೇಹ ಸೇರಿದಂತೆ ಗಂಭೀರ ಸ್ವರೂಪದ ಕಾಯಿಲೆಗಳಿಂದ ಬಳಲುತ್ತಿದ್ದ ಆರು ಮಂದಿ ಕೋವಿಡ್‌ ಸೋಂಕಿತರ ಆರೋಗ್ಯ ಸ್ಥಿತಿ ಬಿಗಡಾಯಿಸಿತ್ತು. ಕೆಲವು ದಿನಗಳಿಂದ ಅವರನ್ನು ತೀವ್ರ ನಿಗಾ ಘಟದಲ್ಲಿರಿಸಿ, ಚಿಕಿತ್ಸೆ ನೀಡಲಾಗುತ್ತಿತ್ತು. ಈ ಎಲ್ಲರೂ ಚೇತರಿಸಿಕೊಂಡಿದ್ದು, ಅವರನ್ನು ಸೋಮವಾರ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

ಸದ್ಯ ತೀವ್ರ ನಿಗಾ ಘಟಕದಲ್ಲಿ ಮೂವರು ರೋಗಿಗಳಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಯಕೃತ್ತಿನ ಸಮಸ್ಯೆ, ಮಧುಮೇಹ, ಹೃದ್ರೋಗ ಮತ್ತು ನ್ಯುಮೋನಿಯಾದಿಂದ ಬಳಲುತ್ತಿರುವ 57 ವರ್ಷದ ಮಹಿಳೆ ಮತ್ತು ಮೆಟಾಬೋಲಿಕ್‌ ಎನ್ಸೆಫಲೋಪತಿ, ನ್ಯುಮೋನಿಯಾದಿಂದ ಬಳಲುತ್ತಿರುವ 50 ವರ್ಷದ ಮಹಿಳೆಗೆ ವೆಂಟಿಲೇಟರ್‌ ಅಳವಡಿಸಲಾಗಿದೆ. ಶ್ವಾಸಕೋಶ ಮತ್ತು ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿರುವ 75 ವರ್ಷದ ಪುರುಷನಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಕೋವಿಡ್‌ನಿಂದ ಇಬ್ಬರು ಸಾವು

ಕೋವಿಡ್‌ಗೆ ಸೋಂಕು ತಗುಲಿ ಚಿಕಿತ್ಸೆಗೆ ದಾಖಲಾಗಿದ್ದ ಕುತ್ತಾರು ಮತ್ತು ಉಳ್ಳಾಲದ ನಿವಾಸಿಗಳಿಬ್ಬರು ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ಮೃತಪಟ್ಟಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಕ್ಯೆ 24ಕ್ಕೇರಿದೆ.

ಕುತ್ತಾರು ನಿವಾಸಿಯಾಗಿದ್ದ 52 ವರ್ಷದ ವ್ಯಕ್ತಿ ಕೋವಿಡ್‌ ಚಿಕಿತ್ಸೆಗಾಗಿ ಜುಲೈ 2ರಂದು ವೆನ್ಲಾಕ್‌ ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದರು. ಅಧಿಕ ರಕ್ತದೊತ್ತಡ, ಮಧುಮೇಹ, ಹೃದ್ರೋಗ ಮತ್ತು ನ್ಯುಮೋನಿಯಾದಿಂದ ಬಳಲುತ್ತಿದ್ದ ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು. ಸೋಮವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ.

ಉಳ್ಳಾಲ ನಿವಾಸಿಯಾಗಿದ್ದ 62 ವರ್ಷ ವಯಸ್ಸಿನ ಪುರುಷ ಕೋವಿಡ್‌ ಚಿಕಿತ್ಸೆಗಾಗಿ ಜುಲೈ 27ರಂದು ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಗೆ ದಾಖಲಾಗಿದ್ದರು. ಇವರು ಕೂಡ ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಚಿಕಿತ್ಸೆ ನಿರಾಕರಿಸಿದ್ದ ಆಸ್ಪತ್ರೆ

ಭಾನುವಾರ ಬೆಳಿಗ್ಗೆ ನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಲು ಬಂದಿದ್ದ ಗರ್ಭಿಣಿಗೆ ಕೋವಿಡ್‌ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಇದನ್ನು ತಿಳಿದ ಆಸ್ಪತ್ರೆ ಸಿಬ್ಬಂದಿ ಗರ್ಭಿಣಿಯನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ್ದರು.

ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಶಾಸಕ ಯು.ಟಿ.ಖಾದರ್‌, ಸರ್ಕಾರದ ಆದೇಶದಂತೆ ಮಹಿಳೆಗೆ ಚಿಕಿತ್ಸೆ ನೀಡಲೇಬೇಕಿರುವುದನ್ನು ಆಸ್ಪತ್ರೆ ಸಿಬ್ಬಂದಿಗೆ ಮನವರಿಕೆ ಮಾಡಿದರು. ವಿಷಯವನ್ನು ಜಿಲ್ಲಾಧಿಕಾರಿ ಗಮನಕ್ಕೂ ತಂದರು. ಬಳಿಕ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.