ADVERTISEMENT

ಮಂಗಳೂರಿನಲ್ಲಿ ಆಕ್ರಮವಾಗಿ ನೆಲೆಸಿದ್ದ ಶ್ರೀಲಂಕಾದ 38 ಜನರ ಬಂಧನ

​ಪ್ರಜಾವಾಣಿ ವಾರ್ತೆ
Published 11 ಜೂನ್ 2021, 11:23 IST
Last Updated 11 ಜೂನ್ 2021, 11:23 IST
ಬಂಧಿತ ಶ್ರೀಲಂಕಾ ಮೂಲದ ಪ್ರಜೆಗಳು
ಬಂಧಿತ ಶ್ರೀಲಂಕಾ ಮೂಲದ ಪ್ರಜೆಗಳು   

ಮಂಗಳೂರು: ತಮಿಳುನಾಡಿನಿಂದ ನಗರಕ್ಕೆ ಬಂದು ಆಕ್ರಮವಾಗಿ ನೆಲೆಸಿದ್ದ ಶ್ರೀಲಂಕಾದ 38 ಜನರನ್ನು ನಗರ ಪೊಲೀಸರು ಬಂಧಿಸಿದ್ದಾರೆ.

‘38 ಮಂದಿ ಶ್ರೀಲಂಕಾದ ಪ್ರಜೆಗಳು ಮಾರ್ಚ್‌ 17ಕ್ಕೆ ತಮಿಳುನಾಡಿಗೆ ಅಕ್ರಮವಾಗಿ ಪ್ರವೇಶಿಸಿದ್ದು, ಒಂದು ತಿಂಗಳ ಹಿಂದೆ ಮಂಗಳೂರಿಗೆ ಬಂದಿದ್ದರು. ಒಂದೂವರೆ ತಿಂಗಳಿನಿಂದ ನಗರದ ಎರಡು ಲಾಡ್ಜ್‌ಗಳು ಮತ್ತು ಎರಡು ಖಾಸಗಿ ಮನೆಗಳಲ್ಲಿ ತಂಗಿದ್ದು, ತಾವು ಕೂಲಿ ಕಾರ್ಮಿಕರು ಮತ್ತು ತಮಿಳುನಾಡಿನ ಮೀನುಗಾರರು ಎಂಬುದಾಗಿ ಹೇಳಿಕೊಳ್ಳುತ್ತಿದ್ದರು’ ಎಂದು ನಗರ ಪೊಲೀಸ್ ಕಮಿಷನರ್ ಎನ್‌. ಶಶಿಕುಮಾರ್ ತಿಳಿಸಿದ್ದಾರೆ.

ಶ್ರೀಲಂಕಾದ ಏಜೆಂಟ್‌ಗಳು ₹6 ರಿಂದ 10 ಲಕ್ಷ ಪಡೆದು, ಕೆನಡಾದಲ್ಲಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ ಮಾ. 17 ರಂದು ಶ್ರೀಲಂಕಾದಿಂದ ಹೊರಟ ಈ ಜನರು, ದೋಣಿ ಮೂಲಕ ತಮಿಳುನಾಡಿನ ತೂತುಕುಡಿ ತಲುಪಿದ್ದರು. ಬಳಿಕ ಹತ್ತಿರದ ಬಂದರನ್ನು ತಲುಪಿ ಖಾಸಗಿ ದೋಣಿಗಳು ಮತ್ತು ಸರಕು ಹಡಗುಗಳ ಮೂಲಕ ಕೆನಡಾಕ್ಕೆ ಪ್ರಯಾಣಿಸುವುದು ಅವರ ಯೋಜನೆಯಾಗಿತ್ತು.

ತಮಿಳುನಾಡಿನಲ್ಲಿ ಚುನಾವಣೆ ಮತ್ತು ಪೊಲೀಸರ ಬಂದೋಬಸ್ತ್‌ ಹೆಚ್ಚಾಗಿದ್ದರಿಂದ, ಈ ಜನರನ್ನು ಸ್ವಲ್ಪ ಸಮಯದವರೆಗೆ ಮಂಗಳೂರಿಗೆ ಸ್ಥಳಾಂತರಿಸಲಾಯಿತು. ತಮಿಳುನಾಡಿನಿಂದ ಖಾಸಗಿ ಬಸ್‌ಗಳಲ್ಲಿ ಬೆಂಗಳೂರಿಗೆ ಬಂದು, ಬೆಂಗಳೂರಿನ ಏಜೆಂಟರ ಮೂಲಕ ಅಲ್ಲಿಂದ ಮಂಗಳೂರು ತಲುಪಿದ್ದಾರೆ ಎಂದು ಮಾಹಿತಿ ನೀಡಿದರು.

‘ಶ್ರೀಲಂಕಾದ 39 ಮಂದಿ ಇದ್ದು, ಅದರಲ್ಲಿ 38 ಜನರನ್ನು ಬಂಧಿಸಲಾಗಿದೆ. ಸುಮಾರು 65-70 ವರ್ಷ ವಯಸ್ಸಿನ ಒಬ್ಬ ವ್ಯಕ್ತಿ ಕೆಲವು ವಾರಗಳ ಹಿಂದೆ ಮರಳಿದ್ದಾನೆ. ನಾವು ಅವನನ್ನು ಪತ್ತೆ ಮಾಡುತ್ತೇವೆ. ಮಾನವ ಕಳ್ಳಸಾಗಣೆ, ಮೋಸ, ಪಾಸ್‌ಪೋರ್ಟ್ ಕಾಯ್ದೆ 1967, ವಿದೇಶಿಯರ ಕಾಯ್ದೆ 1945ಯಡಿ ಪ್ರಕರಣ ದಾಖಲಿಸಲಾಗಿದೆ. ಏಜೆಂಟರನ್ನು ಪತ್ತೆಹಚ್ಚಲಾಗುವುದು. ಈ ಪ್ರಕರಣವನ್ನು ಆಳವಾಗಿ ತನಿಖೆ ಮಾಡಲಾಗುವುದು’ ಎಂದು ಶಶಿಕುಮಾರ್ ತಿಳಿಸಿದರು.

ಬಂಧಿತ ಶ್ರೀಲಂಕಾ ಮೂಲದ ಪ್ರಜೆಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.