ಕಾಸರಗೋಡು: ಜಿಲ್ಲೆಯಲ್ಲಿ ಡಿ.11ರಂದು ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿದೆ. ಅಬ್ಬರದ ಚುನಾವಣೆಯ ಪ್ರಚಾರಕ್ಕೆ ಮಂಗಳವಾರ ತೆರೆ ಬಿದ್ದಿದೆ. ಈ ನಿಟ್ಟಿನಲ್ಲಿ ಕೊನೆಯ ಕ್ಷಣದ ಪ್ರಚಾರದ ಮೆರವಣಿಗೆ ನಿಗದಿತ ಪ್ರದೇಶಗಳಲ್ಲಿ ನಡೆದವು.
ಜಿಲ್ಲಾ ಪಂಚಾಯಿತಿಯ 18 ವಿಭಾಗ, 38 ಗ್ರಾಮ ಪಂಚಾಯಿತಿಗಳು, ಮೂರು ನಗರಸಭೆಗಳಲ್ಲಿ ಚುನಾವಣೆ ನಡೆಯುತ್ತಿದೆ. ಐಕ್ಯರಂಗ, ಎಡರಂಗ ಮತ್ತು ಎನ್‌ಡಿಎ ಒಕ್ಕೂಟಗಳ ನಡುವೆ ಪ್ರಧಾನ ಸ್ಪರ್ಧೆ ನಡೆಯುತ್ತಿದೆ. ಒಟ್ಟು 2,855 ಮಂದಿ ಅಭ್ಯರ್ಥಿಗಳು ಈ ನಿಟ್ಟಿನಲ್ಲಿ ರಂಗದಲ್ಲಿದ್ದಾರೆ. ಇವರಲ್ಲಿ 1,342 ಮಹಿಳೆಯರು, 1,473 ಮಂದಿ ಪುರುಷರು ಇದ್ದಾರೆ.
ಸಿದ್ಧತೆ ಪೂರ್ಣ
ಚುನಾವಣೆ ಸಂಬಂಧ ಸಿದ್ಧತೆ ಪೂರ್ಣಗೊಂಡಿದೆ. ಒಟ್ಟು 1,370 ಮತಗಟ್ಟೆಗಳು ಈ ನಿಟ್ಟಿನಲ್ಲಿ ಸಜ್ಜುಗೊಂಡಿವೆ. ಜಿಲ್ಲೆಯಲ್ಲಿ ಒಟ್ಟು 11,12,190 ಮಂದಿ ಮತದಾರರಿದ್ದು, ಇವರಲ್ಲಿ 5,24,022 ಪುರುಷರು, 5,88,156 ಮಹಿಳೆಯರು, 12 ಮಂದಿ ಲೈಂಗಿಕ ಅಲ್ಪಸಂಖ್ಯಾತರು, 129 ಮಂದಿ ಅನಿವಾಸಿ ಭಾರತೀಯರು ಇದ್ದಾರೆ.
6,584 ಮಂದಿ ಸಿಬ್ಬಂದಿ ಚುನಾವಣೆಯ ಕರ್ತವ್ಯದಲ್ಲಿದ್ದಾರೆ. ಇವರಲ್ಲಿ 3,995 ಮಹಿಳೆಯರು, 2,589 ಪುರುಷರು. ಮಹಿಳೆಯರು ಮಾತ್ರ ಕರ್ತವ್ಯದಲ್ಲಿರುವ 179 ಮತಗಟ್ಟೆಗಳು ಜಿಲ್ಲೆಯಲ್ಲಿವೆ ಎಂದು ಜಿಲ್ಲಾಧಿಕಾರಿ ಕೆ.ಇನ್ಬಶೇಖರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಕಾನೂನು ಉಲ್ಲಂಘನೆ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ 436 ಮತಗಟ್ಟೆಗಳನ್ನು ಸೂಕ್ಷ್ಮ ಮತ್ತು 97 ಮತಗಟ್ಟೆಗಳನ್ನು ಅತಿ ಸೂಕ್ಷ್ಮ ಮತಗಟ್ಟೆಗಳೆಂದು ಪರಿಶೀಲಿಸಲಾಗುತ್ತಿದೆ. ಇಲ್ಲಿ ಹೆಚ್ಚುವರಿ ಭದ್ರತೆ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಭರತ್ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.
ಚುನಾವಣೆಯ ಕರ್ತವ್ಯಕ್ಕಾಗಿ ಒಟ್ಟು 2,793 ಮಂದಿ ಪೊಲೀಸ್ ಸಿಬ್ಬಂದಿ ಇದ್ದಾರೆ. ಈ ನಿಟ್ಟಿನಲ್ಲಿ 13 ಡಿವೈಎಸ್ಪಿಗಳು, 29 ಇನ್‌ಸ್ಪೆಕ್ಟರ್‌ಗಳು, 184 ಎಸ್ಐಗಳು, ಎಎಸ್ಐಗಳು, 2,100 ನಾಗರಿಕ ಪೊಲೀಸರು ಇದ್ದಾರೆ. ಗಡಿ ಪ್ರದೇಶಗಳಲ್ಲಿ ಕರ್ನಾಟಕ ಮತ್ತು ಕೇರಳ ಪೊಲೀಸರ ಭದ್ರತೆ ಇದೆ. ಜಿಲ್ಲೆಯಲ್ಲಿ ಭದ್ರತೆಯ ವ್ಯವಸ್ಥೆಯ ಮೇಲ್ನೋಟವನ್ನು ಕಣ್ಣೂರು ವಲಯ ಡಿಐಜಿ ಜಿ.ಎಸ್.ಯತೀಶ್ಚಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಭರತ್ ರೆಡ್ಡಿ, ಸಹಾಯಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎಂ.ನಂದಗೋಪಾಲನ್ ವಹಿಸಿಕೊಂಡಿದ್ದಾರೆ.
ನಗರದಲ್ಲಿ ಪೊಲೀಸರ ಮತ್ತು ಕ್ಷಿಪ್ರದಳದ ಪಥಸಂಚಲನ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.