ಕೃಷ್ಣವೇಣಿ, ಮಧು, ಪ್ರದೀಪ್
ಮಂಗಳೂರು: ಮನೆ ನಿರ್ಮಿಸುವ ಸಲುವಾಗಿ ಜಾಗದಲ್ಲಿದ್ದ ಕಟ್ಟಡದ ಕಲ್ಲು ತೆಗೆದು ಸಮತಟ್ಟು ಮಾಡಲು ಅನುಮತಿ ನೀಡಲು ಚಾಲಕನ ಮೂಲಕ ₹50 ಸಾವಿರ ಲಂಚ ಪಡೆದ ಆರೋಪದ ಮೇಲೆ ಇಲ್ಲಿನ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಪ್ರಭಾರ ಉಪನಿರ್ದೇಶಕಿ ಕೃಷ್ಣವೇಣಿ, ಕಚೇರಿ ಸಿಬ್ಬಂದಿ ಪ್ರದೀಪ್ ಹಾಗೂ ಚಾಲಕ ಮಧು ಎಂಬುವರನ್ನು ಲೋಕಾಯುಕ್ತ ಪೊಲೀಸರು ಬುಧವಾರ ಬಂಧಿಸಿದ್ದಾರೆ.
‘ಉಳ್ಳಾಲ ತಾಲೂಕು ಇರಾ ಗ್ರಾಮದ 1ಎಕರೆ 39 ಸೆಂಟ್ಸ್ ವಿಸ್ತೀರ್ಣದ ಖಾಸಗಿ ಜಮೀನು ಇದ್ದು, ಅದರಲ್ಲಿ 35 ಸೆಂಟ್ಸ್ ಜಾಗದಲ್ಲಿ ಮನೆ ನಿರ್ಮಿಸಲು ಆ ಜಾಗದ ಜಿಪಿಎ ಹಕ್ಕುದಾರರು ಬಯಸಿದ್ದರು. ಅಲ್ಲಿ ಕಟ್ಟಡ ನಿರ್ಮಿಸುವ ಮುನ್ನ ಅಲ್ಲಿದ್ದ ಕಲ್ಲು ತೆರವುಗೊಳಿಸಿ ಜಾಗವನ್ನು ಸಮತಟ್ಟುಗೊಳಿಸಬೇಕಿತ್ತು. ಇದಕ್ಕಾಗಿ ಅನುಮತಿ ಪಡೆಯಲು ನಗರದ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ 2024ರ ಅ.28ರಂದು ಅರ್ಜಿ ಸಲ್ಲಿಸಿದ್ದರು. ಜಮೀನಿನಲ್ಲಿದ್ದ ಕಲ್ಲು ತೆರವುಗೊಳಿಸಿ ಜಾಗವನ್ನು ಸಮತಟ್ಟು ಮಾಡಲು ಪ್ರಮಾಣಪತ್ರ ನೀಡಬಹುದು ಎಂಬುದಾಗಿ ಉಳ್ಳಾಲ ತಾಲ್ಲೂಕಿನ ತಹಶೀಲ್ದಾರ್ ಅವರು 2025ರ ಮಾರ್ಚ್ 21ರಂದು ವರದಿ ಸಲ್ಲಿಸಿದ್ದರು. ಆದರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಅನುಮತಿ ನೀಡಿರಲಿಲ್ಲ’ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಅರ್ಜಿಯ ಬಗ್ಗೆ ವಿಚಾರಿಸಲು ಅರ್ಜಿದಾರರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಚೇರಿಗೆ ತೆರಳಿದ್ದಾಗ ‘ಈ ಕಡತಕ್ಕೆ ₹50ಸಾವಿರ ಪಡೆದುಕೊಳ್ಳಿ. ನಂತರ ಸಹಿ ಹಾಕುವ’ ಎಂದು ಕೃಷ್ಣವೇಣಿ ಅವರು ಸಿಬ್ಬಂದಿ ಪ್ರದೀಪ್ ಎಂಬವರನ್ನು ಕರೆಸಿ, ಅವರ ಸಮ್ಮುಖದಲ್ಲಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅರ್ಜಿದಾರರು ಈ ಬಗ್ಗೆ ಇಲ್ಲಿನ ಲೋಕಾಯುಕ್ತ ಪೊಲೀಸ್ ಠಾಣೆಗೆ ಕೃಷ್ಣವೇಣಿ ಮತ್ತು ಸಿಬ್ಬಂದಿ ಪ್ರದೀಪ್ ವಿರುದ್ಧ ದೂರು ನೀಡಿದ್ದು, ಪ್ರಕರಣ ದಾಖಲಾಗಿತ್ತುಎಂದು ಅವರು ಮಾಹಿತಿ ನೀಡಿದ್ದಾರೆ.
‘ಕೃಷ್ಣವೇಣಿ ಅವರು ಚಾಲಕ ಮಧು ಅವರ ಮೂಲಕ ಬುಧವಾರ ₹ 50 ಸಾವಿರ ಲಂಚದ ಹಣ ಪಡೆದಿದ್ದಾರೆ. ಆ ಬಳಿಕ ಕೃಷ್ಣವೇಣಿ, ಪ್ರದೀಪ್ ಹಾಗೂ ಮಧು ಎಂಬುವರನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ’ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ಮಂಗಳೂರು ವಿಭಾಗದ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಮಾರ್ಗದರ್ಶನದಲ್ಲಿ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಉಪಅಧೀಕ್ಷಕರಾದ ಡಾ.ಗಾನ ಪಿ ಕುಮಾರ್, ಸುರೇಶ್ ಕುಮಾರ್.ಪಿ, ಪೊಲೀಸ್ ಇನ್‌ಸ್ಪೆಕ್ಟರ್‌ಗಳಾದ ಭಾರತಿ ಜಿ., ಚಂದ್ರಶೇಖರ್ ಕೆ.ಎನ್, ಉಡುಪಿ ಲೋಕಾಯುಕ್ತ ಪೊಲೀಸ್ ಠಾಣಿಯ ಪೊಲೀಸ್ ಇನ್‌ಸ್ಪೆಕ್ಟರ್ ಮಂಜುನಾಥ, ರಾಜೇಂದ್ರ ನಾಯ್ಕ ಅವರು ಸಿಬ್ಬಂದಿ ಜೊತೆ ಸೇರಿ ಈ ಕಾರ್ಯಾಚರಣೆ ಕೈಗೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.