ಮಂಗಳೂರು: ಆಳ ಸಮುದ್ರದಲ್ಲಿರುವ ಮೀನಿನ ಸಂಪನ್ಮೂಲಗಳನ್ನು ಹೆಚ್ಚು ನಿಖರವಾಗಿ ಅನ್ವೇಷಿಸುವ ಯಂತ್ರವನ್ನು ಮೇಕ್ ಇನ್ ಇಂಡಿಯಾ ಯೋಜನೆಯಡಿ ರಾಷ್ಟ್ರೀಯ ಸಾಗರ ತಂತ್ರಜ್ಞಾನ ಸಂಸ್ಥೆಯು ಅಭಿವೃದ್ಧಿಪಡಿಸುತ್ತಿದೆ ಎಂದು ಕೇಂದ್ರ ಸಮುದ್ರ ಮೀನುಗಾರಿಕಾ ಸಂಶೋಧನಾ ಸಂಸ್ಥೆ (ಸಿಎಂಎಫ್‌ಆರ್‌ಐ) ನಿರ್ದೇಶಕ ಗ್ರಿನ್‌ಸನ್ ಜಾರ್ಜ್ ಹೇಳಿದರು.
ಐಸಿಎಆರ್‌ನ ಮಂಗಳೂರು ಪ್ರಾದೇಶಿಕ ಕೇಂದ್ರ, ಸಿಎಂಎಫ್‌ಆರ್‌ಐ ಮತ್ತು ಮೀನುಗಾರಿಕೆ ಇಲಾಖೆ ಜಂಟಿಯಾಗಿ ಶನಿವಾರ ಇಲ್ಲಿ ಆಯೋಜಿಸಿದ್ದ ಆಳ ಸಮುದ್ರ ಸಂಪನ್ಮೂಲ ಪರಿಶೋಧನೆ ಮತ್ತು ಅಳಿವಿನಂಚಿನಲ್ಲಿರುವ ಸಂರಕ್ಷಿತ (ಇಟಿಪಿ) ಪ್ರಭೇದಗಳ ಸಂರಕ್ಷಣೆಯ ಜಾಗೃತಿ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಪ್ರಸ್ತುತ ಎಕೊ ಸೌಂಡರ್‌ಗಳ ಮೂಲಕ ಮೀನುಗಳ ನೆಲೆ ಗುರುತಿಸಲಾಗುತ್ತದೆ. ಆದರೆ, ಆಳ ಸಮುದ್ರ ಮೀನುಗಾರಿಕೆಯಲ್ಲಿ ಕೆಲವೊಮ್ಮೆ ಬಲೆಗಳು ನಿಖರವಾದ ಸ್ಥಳ ತಲುಪಲು ವಿಫಲವಾಗಬಹುದು. ಯಂತ್ರಗಳನ್ನು ಅಭಿವೃದ್ಧಿಪಡಿಸಿದರೆ ಆಳ ಸಮುದ್ರದ ಸಂಪನ್ಮೂಲ ಸದ್ಬಳಕೆ ಮಾಡಿಕೊಳ್ಳಬಹುದು. ಜೊತೆಗೆ ಇನ್ನೂ ಬಳಕೆಯಾಗದ ಆಳ ಸಮುದ್ರ ಸಂಪನ್ಮೂಲಗಳನ್ನು ಅನ್ವೇಷಿಸಲು ಆಧುನಿಕ ಸೌಲಭ್ಯ ಹೊಂದಿರುವ ಸುಧಾರಿತ ಹಡಗುಗಳು ಅಗತ್ಯ ಇವೆ. ಆಳ ಸಮುದ್ರ ಮೀನುಗಾರಿಕೆಯಲ್ಲಿ ಸುಸ್ಥಿರತೆಯೂ ಮಹತ್ವದ್ದಾಗಿದೆ ಎಂದರು.
ಸಾಂಪ್ರದಾಯಿಕ ಮೀನುಗಾರರಿಗೆ ಆಳ ಸಮುದ್ರ ಮೀನುಗಾರಿಕೆ ನಡೆಸಲು ಆಧುನಿಕ ತಂತ್ರಜ್ಞಾನ ಬಳಸಿಕೊಳ್ಳುವ ಸಂಬಂಧ ತರಬೇತಿ ಅವಶ್ಯ. ಇದು ಅವರ ಜೀವನ ಮಟ್ಟ ಸುಧಾರಣೆ ಮತ್ತು ಆದಾಯ ಗಳಿಕೆಯಲ್ಲಿ ಗಮನಾರ್ಹ ಬದಲಾವಣೆ ತರಲಿದೆ. ಆ ಮೂಲಕ ದೇಶದ ಆರ್ಥಿಕತೆಗೂ ಇದು ಸಹಕಾರಿಯಾಗಿದೆ ಎಂದು ಹೇಳಿದರು.
ಮೀನುಗಾರಿಕೆ ನಿರ್ದೇಶಕ ದಿನೇಶ್ ಕುಮಾರ್ ಕಳ್ಳೇರ್ ಕಾರ್ಯಾಗಾರ ಉದ್ಘಾಟಿಸಿದರು. ಆಳ ಸಮುದ್ರ ಮೀನುಗಾರಿಕೆಗೆ ಬಳಸುವ ಟ್ರಾಲ್ ಬೋಟ್‌ಗಳಲ್ಲಿ ಆಮೆ ಹೊರಗಿಡುವ ಸಾಧನ ಬಳಸುವುದನ್ನು ರಾಜ್ಯ ಸರ್ಕಾರ ಕಡ್ಡಾಯಗೊಳಿಸಿದೆ. ಇದು ವಿನಾಶದ ಅಂಚಿನಲ್ಲಿರುವ ಆಲಿವರ್ ರಿಡ್ಲೆ ಆಮೆಗಳ ಸಂತತಿ ಉಳಿಸಲು ಸಹಕಾರಿಯಾಗಲಿದೆ. ಕರ್ನಾಟಕ ಕರಾವಳಿಯಲ್ಲಿ ಸುಮಾರು 3,000 ಟ್ರಾಲ್ ದೋಣಿಗಳಿಗೆ ಈ ಸಾಧನವನ್ನು ಉಚಿತವಾಗಿ ಅಳವಡಿಸಲಾಗುವುದು ಎಂದು ಹೇಳಿದರು.
ಕೇಂದ್ರೀಯ ಸಾಗರ ಮೀನುಗಾರಿಕೆ ಸಂಶೋಧನಾ ಸಂಸ್ಥೆ ಕೊಚ್ಚಿ ಪ್ರಾದೇಶಿಕ ಕಚೇರಿಯ ಮುಖ್ಯಸ್ಥ ಸುಜಿತ್ ಥಾಮಸ್, ಮೀನುಗಾರಿಕಾ ಇಲಾಖೆ ಅಧಿಕಾರಿಗಳು ಮತ್ತು ವಿವಿಧ ಸಂಘಗಳ ಮೀನುಗಾರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.