ಕಾರ್ಯಕ್ರಮದಲ್ಲಿ ಪಿ.ಯು. ಕಾಲೇಜೊಂದರ ವಿದ್ಯಾರ್ಥಿನಿಯರು ಕೋಲಾಟ ನೃತ್ಯ ಪ್ರದರ್ಶಿಸಿದರು
ಪ್ರಜಾವಾಣಿ ಚಿತ್ರ
ಮಂಗಳೂರು: ಯಂತ್ರ ಜಗತ್ತು ತಂದೊಡ್ಡಿರುವ ಸವಾಲನ್ನು ಭಾಷಿಕ ನೆಲೆಯಲ್ಲಿ ಎದುರಿಸವುದು ಹೇಗೆ? ಜ್ಞಾನವನ್ನು ಮಾತೃಭಾಷೆಯಲ್ಲೇ ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು ಹೇಗೆ? ಕೃತಕ ಬುದ್ಧಿಮತ್ತೆಯನ್ನು ಬಳಸಿ ಕನ್ನಡವನ್ನು ಅನ್ನದ ಭಾಷೆಯನ್ನಾಗಿಸುವುದು ಹೇಗೆ? ಇಂತಹ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನಕ್ಕೆ ‘ಪೊಸ ಒಸರ್’ (ಹೊಸ ಒರತೆ) ಅಂತರರಾಜ್ಯ ಸಾಂಸ್ಕೃತಿಕ ಸಮಾವೇಶ ವೇದಿಕೆ ಕಲ್ಪಿಸಿತು.
ಸೇಂಟ್ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಕನ್ನಡ ವಿಭಾಗವು ಪಿ.ಯು. ಕಾಲೇಜು ಕಲಾ ವಿದ್ಯಾರ್ಥಿಗಳಿಗಾಗಿ ಮಂಗಳವಾರ ಏರ್ಪಡಿಸಿದ್ದ ಈ ಸಮಾವೇಶವು, ಜನಜೀವನದಲ್ಲಿ ಯಂತ್ರ ಜಗತ್ತು ಆವರಿಸಿಕೊಳ್ಳುತ್ತಿರುವ ಪರಿಯನ್ನು ಪರಿಚಯಿಸಿತು.
‘ಶಿಕ್ಷಣ ತಂತ್ರಜ್ಞಾನ: ಕೃತಕ ಬುದ್ಧಿಮತ್ತೆ ಜೊತೆ ಕನ್ನಡದ ಬೆಸುಗೆ’ ಕುರಿತು ವಿಚಾರ ಮಂಡಿಸಿದ ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯದ ಕಂಪ್ಯೂಟರ್ ವಿಜ್ಞಾನ ವಿಭಾಗದ ಮುಖ್ಯಸ್ಥ ವಿನಯ್ ಎಂ., ವಿದ್ಯಾರ್ಥಿಗಳು ಕಲಿಕೆಗೆ ಯಾವೆಲ್ಲ ಎಐ ಪರಿಕರಗಳನ್ನು ಬಳಸಬಹುದು ಎಂದು ವಿವರಿಸಿದರು.
ಯಾಂತ್ರಿಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಆಗಿರುವ ಈಚಿನ ಬೆಳವಣಿಗೆಗಳ ಕುರಿತು ಬೆಳಕು ಚೆಲ್ಲಿದ ಅವರು, ‘ಎ.ಐ ತಂತ್ರಜ್ಞಾನದಿಂದಾಗಿ ಭಾಷೆಗಳ ನಡುವಿನ ಅಂತರ ಕಡಿಮೆಯಾಗಿದೆ. ಎ.ಐ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಅಗತ್ಯವಿರುವ ಶೇ 60 ರಷ್ಟು ದತ್ತಾಂಶ ಕನ್ನಡದಲ್ಲೇ ಈಗ ಲಭ್ಯ. ಎಐ ಮೂಲಕ ಇಂಗ್ಲಿಷ್ ಭಾಷೆಯಲ್ಲಿ ಏನೆಲ್ಲ ಸಾಧ್ಯವಾಗುತ್ತಿದೆಯೋ ಅವುಗಳನ್ನು ಇನ್ನೊಂದು ವರ್ಷದೊಳಗೆ ಕನ್ನಡದಲ್ಲೂ ದಕ್ಕಿಸಿಕೊಳ್ಳಬಹುದು. ಈ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ನಮ್ಮ ನೆಲದ ಭಾಷೆಯನ್ನು ಉಳಿಸಿ ಬೆಳೆಸಬೇಕು’ ಎಂದರು.
‘ಮಕ್ಕಳಿಗೆ ಸುಲಭವಾಗಿ ಅರ್ಥವಾಗುವ ತಾಯ್ನುಡಿಯಲ್ಲೇ ಪರಿಣಾಮಕಾರಿಯಾಗಿ ಕಲಿಸುವುದಕ್ಕೆ ಎಐ ನೆರವಾಗಲಿದೆ. ಇಂಗ್ಲಿಷ್‌ನಲ್ಲಿ ಸಿಗುವ ಜ್ಞಾನವನ್ನು ಕನ್ನಡದ ಮೂಲಕ ಮಕ್ಕಳಿಗೆ ಚೆನ್ನಾಗಿ ಅರ್ಥ ಮಾಡಿಸುವುದಕ್ಕೆ ಶಿಕ್ಷಕರು ಎಐ ಅನ್ನು ದುಡಿಸಿಕೊಳ್ಳಬೇಕು. ಈ ಬಗ್ಗೆ ಜಾಗೃತಿ ಮೂಡಿಸುವ ಹಾಗೂ ತರಬೇತಿ ನೀಡುವ ಅಗತ್ಯವಿದೆ’ ಎಂದರು.
ಸಮಾವೇಶವನ್ನು ಉದ್ಘಾಟಿಸಿದ ‘ಸು ಫ್ರಂ ಸೋ’ ಸಿನಿಮಾದ ನಟ ಪುಷ್ಪರಾಜ ಬೊಳ್ಳಾರ್, ‘ಪ್ರತಿಯೊಬ್ಬರಲ್ಲೂ ಕಲೆ ಅಡಕವಾಗಿರುತ್ತದೆ. ಸೂಕ್ತ ಬೆಂಬಲ ಸಿಕ್ಕರೆ ಮಾತ್ರ ಉತ್ತಮ ಕಲಾವಿದರು ರೂಪುಗೊಳ್ಳಬಹುದು. ಕಲೆಯ ಕುರಿತ ಅದಮ್ಯ ಪ್ರೀತಿಯನ್ನು ಯಾವತ್ತೂ ಕಳೆದುಕೊಳ್ಳದಿರಿ’ ಎಂದರು.
‘ಸು ಫ್ರಂ ಸೋ’ ಸಿನಿಮಾದಲ್ಲಿ ನಟಿಸಿರುವ ಸಂಸ್ಥೆಯ ವಿದ್ಯಾರ್ಥಿನಿ ಪ್ರಕೃತಿ ಅಮೀನ್ ಹಾಗೂ ಪುಷ್ಪರಾಜ ಬೊಳ್ಳಾರ್ ಅವರನ್ನು ಅಭಿನಂದಿಸಲಾಯಿತು.
ಸೇಂಟ್ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿ ಪ್ರವೀಣ್ ಮಾರ್ಟಿಸ್, ‘ನಮ್ಮ ವಿಶ್ವವಿದ್ಯಾಲಯದಲ್ಲಿ ಕನ್ನಡ ಜೊತೆ ತುಳುವಿಗೂ ಆದ್ಯತೆ ನೀಡುತ್ತಿದ್ದೇವೆ. ತುಳು ಕಲಿಕೆಯನ್ನು ಆರಂಭಿಸಿದ್ದೇವೆ’ ಎಂದರು.
ಜಪಾನ್ ಟೊಕಿಯೊದ ಸೋಫಿಯೊ ವಿಶ್ವವಿದ್ಯಾಲಯ ಸಹಾಯಕ ಪ್ರಾಧ್ಯಾಪಕ ಅರುಣ್ ಪ್ರಕಾಶ್ ದಿಕ್ಸೂಚಿ ಭಾಷಣ ಮಾಡಿದರು. ಕುಲಸಚಿವ ಅಲ್ವಿನ್ ಡೆಸಾ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ರೊನಾಲ್ಡ್ ನಜೆರತ್, ರೆಕ್ಟರ್ ಮೆಲ್ವಿನ್ ಜೋಸೆಫ್ ಪಿಂಟೊ, ಕನ್ನಡ ವಿಭಾಗದ ಮುಖ್ಯಸ್ಥ ಕೆ.ಮಹಾಲಿಂಗ ಭಟ್, ಕ್ರಿಸ್ಟೊಫರ್ ನೀನಾಸಂ ಭಾಗವಹಿಸಿದ್ದರು.
ದಿನೇಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಗುಳ್ಳೆಗಳನ್ನು ಹಾರಿ ಬಿಡುವ ಮೂಲಕ ಕಾರ್ಯಕ್ರಮವನ್ನು ಗಣ್ಯರು ವಿನೂತನವಾಗಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಪಿ.ಯು. ಕಾಲೇಜೊಂದರ ವಿದ್ಯಾರ್ಥಿನಿಯರು ಕಂಸಾಳೆ ನೃತ್ಯ ಪ್ರದರ್ಶಿಸಿದರು
ಕಳೆಗಟ್ಟಿದ ಸಾಂಸ್ಕೃತಿಕ ಲೋಕ:
ಪದವಿ ಪೂರ್ವ ಕಾಲೇಜುಗಳ ಕಲಾ ವಿದ್ಯಾರ್ಥಿಗಳಿಗಾಗಿ ಸಮೂಹ ಗಾನ ಸಮೂಹ ನೃತ್ಯ ಫ್ಯಾಷನ್ ಶೋ ಸ್ಪರ್ಧೆಗಳಿಂದಾಗಿ ಸಮಾವೇಶದಲ್ಲಿ ಸಾಂಸ್ಕೃತಿಕ ಲೋಕ ಮೇಳೈಸಿತು. ಸಮೂಹ ನೃತ್ಯಗಳು ಒಂದಕ್ಕಿಂತ ಇನ್ನೊಂದು ಸೊಗಸಾಗಿ ಮೂಡಿಬಂದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.