ಬೆಳ್ತಂಗಡಿ: ಅಂಬೇಡ್ಕರ್ ಭವನ ನಿರ್ಮಾಣ ಕುರಿತು ಶಾಸಕ ಹರೀಶ್ ಪೂಂಜ ಅಧ್ಯಕ್ಷತೆಯಲ್ಲಿ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಸಂಘ ಸಂಸ್ಥೆಗಳ ಮುಖಂಡರ ಸಭೆ ಮಂಗಳವಾರ ನಡೆಯಿತು.
‘ಬೆಳ್ತಂಗಡಿಯಲ್ಲಿ ಸುಮಾರು ₹ 7 ಕೋಟಿ ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು, ನೀಲಿ ನಕಾಶೆ ಸಿದ್ಧಗೊಂಡಿದೆ. ಸದ್ಯದಲ್ಲೇ ಶಿಲಾನ್ಯಾಸ ನೆರವೇರುವ ನಿರೀಕ್ಷೆ ಇದೆ’ ಎದು ಹರೀಶ್ ಪೂಂಜ ಹೇಳಿದರು.
ಬೆಳ್ತಂಗಡಿಯ ಕೆಲ್ಲಗುತ್ತಿನಲ್ಲಿ 10 ಎಕರೆಯಲ್ಲಿ ತಾಲ್ಲೂಕು ಕ್ರೀಡಾಂಗಣ ನಿರ್ಮಾಣವಾಗಲಿದೆ. ಈಗ ಇರುವ ತಾಲ್ಲೂಕು ಕ್ರೀಡಾಂಗಣದ 2.48 ಎಕರೆಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣವಾಗಲಿದೆ. ಈ ಜಾಗವು ಯುವಜನ ಕ್ರೀಡಾ ಇಲಾಖೆಯಿಂದ ಸಮಾಜ ಕಲ್ಯಾಣ ಇಲಾಖೆಗೆ ವರ್ಗಾವಣೆಗೊಂಡು ಕಾಮಗಾರಿ ಆರಂಭವಾಗಲಿದೆ. ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ₹ 3 ಕೋಟಿ ಅನುದಾನ ಘೋಷಿಸಿದ್ದಾರೆ. ₹ 60 ಲಕ್ಷ ಹೆಚ್ಚುವರಿ ಅನುದಾನ ದೊರಕಲಿದೆ ಎಂದರು.
ಅಂಬೇಡ್ಕರ್ ಭವನದ ಕಟ್ಟಡದ ಒಂದು ಭಾಗದಲ್ಲಿ ಸಮಾಜ ಕಲ್ಯಾಣ ಇಲಾಖೆ,ಇನ್ನೊಂದು ಭಾಗದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಾರ್ಯನಿರ್ವಹಿಸಲಿದೆ. ಅಂಬೇಡ್ಕರ್ ಭವನವನ್ನು ವರ್ಷದುದ್ದಕ್ಕೂ ಸಕ್ರಿಯವಾಗಿಡುವ ಯೋಚನೆ ಇದೆ. ಬೆಳ್ತಂಗಡಿಯಲ್ಲಿ ಈಗಿರುವ ಅಂಬೇಡ್ಕರ್ ಭವನ ಚಿಕ್ಕದಾಗಿದ್ದು ಅಲ್ಲಿ ಕೆಲವು ಸಮಸ್ಯೆಗಳಿದ್ದು, ಸುಸಜ್ಜಿತ ಅಂಬೇಡ್ಕರ್ ಭವನ ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
₹ 3.60 ಕೋಟಿ ಅನುದಾನ ಈಗಾಗಲೇ ಮಂಜೂರುಗೊಂಡಿದೆ. ಆದರೆ, ಈ ಅಂಬೇಡ್ಕರ್ ಭವನವನ್ನು ₹ 7 ಕೋಟಿ ವೆಚ್ಚದಲ್ಲಿ ನಿರ್ಮಿಸಲು ರೂಪರೇಷೆ ಸಿದ್ಧಗೊಂಡಿದೆ. ಉಳಿದ ಅನುದಾನವನ್ನು ಸಂಸದ ಕ್ಯಾ.ಬ್ರಿಜೇಶ್ ಚೌಟ, ಕಂಪನಿಗಳ ಸಿಎಸ್ಆರ್ ಅನುದಾನ ನೀಡುವಂತೆ ಮನವಿ ಸಲ್ಲಿಸಲಾಗುವುದು. ಹೆಚ್ಚುವರಿ ಅನುದಾನಕ್ಕೆ ಸರ್ಕಾರಕ್ಕೂ ಬೇಡಿಕೆ ಸಲ್ಲಿಸಲಾಗುವುದು. ವಿಧಾನಸಭಾ ಕ್ಷೇತ್ರಕ್ಕೆ ಸರ್ಕಾರದಿಂದ ಸಿಗಲಿರುವ ₹ 25 ಕೋಟಿಯ ಅಭಿವೃದ್ಧಿ ಅನುದಾನದಲ್ಲೂ ಸ್ವಲ್ಪ ಪಾಲನ್ನು ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಮೀಸಲಿಡಲಾಗುವುದು. 500 ಜನರು ಕುಳಿತುಕೊಳ್ಳಬಹುದಾದ ಸಭಾಭವನ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಚೇರಿ, ಕಾಂಪೌಂಡ್, ಪಾರ್ಕಿಂಗ್, ಅಂಬೇಡ್ಕರ್ ಅವರ ಜೀವನಕ್ಕೆ ಪೂರಕವಾದ ಗ್ರಂಥಾಲಯ, ಉದ್ಯಾನ, ನಡಿಗೆ ಪಥ, ಅಗತ್ಯ ಸೌಲಭ್ಯಗಳಿಗೆ ಆದ್ಯತೆ ನೀಡಿ ನಿರ್ಮಿಸಲಾಗುತ್ತದೆ. ಇಲ್ಲಿ ಕಾರ್ಯಕ್ರಮಗಳನ್ನು ನಡೆಸಿ ಆದಾಯ ಗಳಿಸುವ ಯೋಚನೆಯೂ ಇದೆ ಎಂದು ತಿಳಿಸಿದರು.
ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಶೇಖರ್ ಕುಕ್ಕೇಡಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯಾನಂದ ಗೌಡ, ಉಪಾಧ್ಯಕ್ಷೆ ಗೌರಿ, ಸದಸ್ಯ ಅಂಬರೀಶ್, ತಾಪಂ ಇಒ ಭವಾನಿ ಶಂಕರ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಧನಂಜಯ, ಮುಖಂಡರಾದ ನೇಮಿರಾಜ, ಚಂದ್ರಕಲಾ, ನವೀನ್ ನೆರಿಯ, ಸಂಜೀವ ಆರ್., ರಾಜೇಶ ಕಳೆಂಜ, ಬಿ.ಕೆ.ವಸಂತ, ಪ್ರಭಾಕರ ಶಾಂತಿಗೋಡು, ರಾಘವ ಕಲ್ಮಂಜ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.