ADVERTISEMENT

ಮಂಗಳೂರು | ಮತ್ತೊಂದು ಕೋವಿಡ್–19 ಪ್ರಯೋಗಾಲಯ

24 ಗಂಟೆಯಲ್ಲಿ ವರದಿ ನೀಡಲು ಸಹಕಾರಿ

​ಪ್ರಜಾವಾಣಿ ವಾರ್ತೆ
Published 23 ಮೇ 2020, 16:18 IST
Last Updated 23 ಮೇ 2020, 16:18 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಂಗಳೂರು: ಗಂಟಲು ದ್ರವದ ಮಾದರಿಯ ಪರೀಕ್ಷಾ ವರದಿಯನ್ನು 24 ಗಂಟೆಯಲ್ಲಿ ನೀಡಬೇಕಾಗಿದ್ದು, ನಗರದಲ್ಲಿ ಇದೀಗ ಮತ್ತೊಂದು ಪ್ರಯೋಗಾಲಯಕ್ಕೆ ಐಸಿಎಂಆರ್ ಅನುಮೋದನೆ ನೀಡಿದೆ.

ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾಲಯದ ಜಸ್ಟೀಸ್ ಕೆ.ಎಸ್. ಹೆಗ್ಡೆ ಚಾರಿಟಬಲ್ ಆಸ್ಪತ್ರೆಯ ಪ್ರಯೋಗಾಲಯವು ಗಂಟಲು ದ್ರವದ ಮಾದರಿ ಪರೀಕ್ಷೆ ಸೌಲಭ್ಯ ಹೊಂದಿದ್ದು, ಈ ಸೌಲಭ್ಯಕ್ಕೆ ಎನ್‌ಎಬಿಎಲ್ ಮಾನ್ಯತೆ ಹಾಗೂ ಐಸಿಎಂಆರ್ ಅನುಮೋದನೆ ಪಡೆದಿದೆ.

ಈ ಪ್ರಯೋಗಾಲಯದ ಸಿಬ್ಬಂದಿ, ಬೆಂಗಳೂರಿನ ರಾಜ್ಯ ಮಾರ್ಗದರ್ಶಿ ಸಂಸ್ಥೆಯಾದ ನಿಮ್ಹಾನ್ಸ್‌ನಲ್ಲಿ ವಿಶೇಷ ತರಬೇತಿ ಪಡೆದಿದ್ದು, ಮೈಕ್ರೋ ಬಯೋಲಾಜಿ ವಿಭಾಗದ ಪ್ರಾಧ್ಯಾಪಕ ಡಾ. ಅಮಿತ್ ಕೆಲ್ಗಿ ಅವರನ್ನು ಈ ಪರೀಕ್ಷಾ ಸೌಲಭ್ಯದ ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ತಿಳಿಸಿದ್ದಾರೆ.

ADVERTISEMENT

ಪ್ರಯೋಗಾಲಯದ ನುರಿತ ತಜ್ಞರು ಎಸ್‌ಎಆರ್‌ಎಸ್‌ ಸಿಒವಿ–2 ಆರ್‌ಎನ್‌ಎ ಗುಣಾತ್ಮಕ ಪರೀಕ್ಷೆಯನ್ನು ಆರ್‌ಟಿಪಿಸಿಆರ್‌ ವಿಧಾನದಿಂದ ನಡೆಸಲಿದ್ದು, ಅದೇ ದಿನ ವರದಿಯನ್ನು ನೀಡಲಿದ್ದಾರೆ. ರೋಗಿಯ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸುವ ಸಲುವಾಗಿ ಬೇಕಾಗಿರುವ ವೈರಸ್ ಟ್ರಾನ್ಸ್‌ಪರಂಟ್‌ ಮೀಡಿಯಂ ಅನ್ನು ಅನುಮೋದನೆ ಪಡೆದ ಎಲ್ಲ ಆರೋಗ್ಯ ಕೇಂದ್ರಗಳಿಗೆ ಉಚಿತವಾಗಿ ನೀಡಲಾಗುವುದು. ಸರ್ಕಾರದ ನಿಯಮಾನುಸಾರವಾಗಿ, ಕೈಗೆಟುಕುವ ದರದಲ್ಲಿ ಪರೀಕ್ಷೆಯನ್ನು ಮಾಡಲಾಗುವುದೆಂದು ಹೇಳಿದ್ದಾರೆ.

ಪರೀಕ್ಷೆಗಾಗಿ ಮಾದರಿಗಳನ್ನು ಕಳುಹಿಸುವ ಸಂಬಂಧ ಫಿವರ್ ಕ್ಲಿನಿಕ್ (93539 04855) ಹಾಗೂ ತಾಂತ್ರಿಕ ಮಾಹಿತಿಗಾಗಿ ನೋಡಲ್ ಅಧಿಕಾರಿ ಡಾ. ಅಮಿತ್ ಕೆಲ್ಗಿ (94491 04181) ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಈಗಾಗಲೇ ನಗರದ ವೆನ್ಲಾಕ್‌ ಆಸ್ಪತ್ರೆ, ಯೇನೆಪೋಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಫಾದರ್‌ ಮುಲ್ಲರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಪ್ರಯೋಗಾಲಯ ಆರಂಭವಾಗಿವೆ. ಜಿಲ್ಲಾಡಳಿತದ ವತಿಯಿಂದ ಗಂಟಲು ದ್ರವದ ಮಾದರಿಗಳನ್ನು ಈ ಕೇಂದ್ರಗಳಿಗೆ ಕಳುಹಿಸುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ನಗರದ ಕೆಎಂಸಿ ಆಸ್ಪತ್ರೆಯಲ್ಲಿ ಮತ್ತೊಂದು ಪ್ರಯೋಗಾಲಯ ಆರಂಭವಾಗಲಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.