ADVERTISEMENT

ದುಬೈನಲ್ಲಿ ಸಿಲುಕಿದ್ದ ಭಟ್ಕಳದ ಜನರನ್ನು ಕರೆತಂದ ಬಾಡಿಗೆ ವಿಮಾನ

​ಪ್ರಜಾವಾಣಿ ವಾರ್ತೆ
Published 13 ಜೂನ್ 2020, 16:20 IST
Last Updated 13 ಜೂನ್ 2020, 16:20 IST
ಬಾಡಿಗೆ ವಿಮಾನದ ಮೂಲಕ ಮಂಗಳೂರಿಗೆ ಬಂದ ಜನರನ್ನು ಬಸ್‌ಗಳ ಮೂಲಕ ಭಟ್ಕಳಕ್ಕೆ ಕಳುಹಿಸಲಾಯಿತು.
ಬಾಡಿಗೆ ವಿಮಾನದ ಮೂಲಕ ಮಂಗಳೂರಿಗೆ ಬಂದ ಜನರನ್ನು ಬಸ್‌ಗಳ ಮೂಲಕ ಭಟ್ಕಳಕ್ಕೆ ಕಳುಹಿಸಲಾಯಿತು.   

ಮಂಗಳೂರು: ಲಾಕ್‌ಡೌನ್‌ನಿಂದಾಗಿ ದುಬೈನಲ್ಲಿ ಸಿಲುಕಿದ್ದ ಭಟ್ಕಳ ಮತ್ತು ಸುತ್ತಮುತ್ತಲಿನ ಕನ್ನಡಿಗರ ಪೈಕಿ 184 ಮಂದಿ ಶನಿವಾರ ಬಾಡಿಗೆ ವಿಮಾನದ ಮೂಲಕ ಮಂಗಳೂರಿಗೆ ಬಂದಿದ್ದು, ಅಲ್ಲಿಂದ 4 ಖಾಸಗಿ ಬಸ್‌ಗಳಲ್ಲಿ ಭಟ್ಕಳ ತಲುಪಿದರು.

ದುಬೈಯ ನೂಹಾ ಜನರಲ್ ಟ್ರೆಡಿಂಗ್ಸ್ ಮಾಲೀಕ, ಭಟ್ಕಳದ ತಂಝೀಮ್ ಸಂಸ್ಥೆಯ ಉಪಾಧ್ಯಕ್ಷ ಅತಿಕುರ್ರಹ್ಮಾನ್ ಮುನಿರಿ ಮುಂದಾಳತ್ವದಲ್ಲಿ ದುಬೈಯಲ್ಲಿ ಸಂಕಷ್ಟಕ್ಕೆ ಸಿಲುಕಿದ ಜನರು ಭಟ್ಕಳ ಸೇರಿದ್ದಾರೆ.

ಶುಕ್ರವಾರ ರಾತ್ರಿ 11.20ಕ್ಕೆ ರಾಸ್ ಅಲ್ ಖೈಮಾ ವಿಮಾನ ನಿಲ್ದಾಣದಿಂದ ಹಾರಾಟ ನಡೆಸಿದ ಬಾಡಿಗೆ ವಿಮಾನವು, ಶನಿವಾರ ಬೆಳಿಗ್ಗೆ 4.20 ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಿತು. ಮೊದಲೇನಿರ್ಧರಿಸಿದಂತೆ ನಗರದ ವಿಮಾನ ನಿಲ್ದಾಣದಲ್ಲಿ ಭಟ್ಕಳ ಮುಸ್ಲಿಮ್ ಜಮಾಅತ್ ಮಂಗಳೂರು ಹಾಗೂ ತಂಝೀಮ್ ಸಂಸ್ಥೆಯ ಉಸ್ತುವಾರಿಯಲ್ಲಿ 4 ಖಾಸಗಿ ಬಸ್‌ಗಳ ಮೂಲಕ 184 ಮಂದಿಯನ್ನು ಸುರಕ್ಷಿತವಾಗಿ ಭಟ್ಕಳ ಕಳುಹಿಸಲಾಯಿತು. ಇದರಲ್ಲಿ ಗರ್ಭಿಣಿಯರು ಸೇರಿದಂತೆ ಮಕ್ಕಳು, ವಯೋವೃದ್ಧರು ಇದ್ದರು.

ADVERTISEMENT

ಶುಕ್ರವಾರ ರಾಸ್ ಅಲ್ –ಖೈಮಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅತಿಕುರ್ರಹ್ಮಾನ್ ಮುನಿರಿ, ಮೊದಲಿಗೆ ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸಿ, ಈ ಕಾರ್ಯಕ್ಕಾಗಿ ಸಹಕರಿಸಿದ ಭಾರತೀಯ ರಾಯಭಾರಿ ಕಚೇರಿ ಹಾಗೂ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲಾಧಿಕಾರಿ ಹಾಗೂ ಇತರರನ್ನು ಅಭಿನಂದಿಸಿದ್ದಾರೆ. ಭಟ್ಕಳಕ್ಕೆ ಬಂದಿಳಿದ ಎಲ್ಲ ಪ್ರಯಾಣಿಕರನ್ನು ನೇರವಾಗಿ ಕ್ವಾರೈಂಟೈನ್ ಕೇಂದ್ರಗಳಿಗೆ ತಲುಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.