ADVERTISEMENT

ದಕ್ಷಿಣ ಕನ್ನಡ: ಹೈನುಗಾರಿಕೆಗೆ ಆ್ಯಪ್ ಬಲ

ಒಕ್ಕೂಟದಿಂದ ಡಿಜಿಟಲೈಸೇಷನ್‌, ಪ್ರತ್ಯೇಕ ಆ್ಯಪ್ ಅಭಿವೃದ್ಧಿ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2020, 4:47 IST
Last Updated 28 ಅಕ್ಟೋಬರ್ 2020, 4:47 IST
ಕೇಶವ ಸೂರ್ಡೇಲು ಹಾಗೂ ಶ್ರೀನಿಧಿ ಆರ್.ಎಸ್. ಅಭಿವೃದ್ಧಿ ಪಡಿಸಿದ ಆ್ಯಪ್
ಕೇಶವ ಸೂರ್ಡೇಲು ಹಾಗೂ ಶ್ರೀನಿಧಿ ಆರ್.ಎಸ್. ಅಭಿವೃದ್ಧಿ ಪಡಿಸಿದ ಆ್ಯಪ್   

ಮಂಗಳೂರು:ಹೈನುಗಾರಿಕೆಯ ಮೌಲ್ಯವರ್ಧನೆ ಹಾಗೂ ವ್ಯವಹಾರದಲ್ಲಿ ಪಾರದರ್ಶಕತೆಗಾಗಿ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು ಡಿಜಿಟೈಲೈಸೇಷನ್‌ ಹೆಜ್ಜೆ ಇಡುತ್ತಿದ್ದರೆ, ಒಕ್ಕೂಟದ ಸಾಫ್ಟ್‌ವೇರ್‌ ಸಮಾಲೋಚಕರು ಪ್ರತ್ಯೇಕವಾಗಿ ಸಾಫ್ಟ್‌ವೇರ್‌ ಒಂದನ್ನು ಅಭಿವೃದ್ಧಿ ಪಡಿಸಿದ್ದಾರೆ.

ಹೈನುಗಾರರಿಗೆ ತ್ವರಿತ ಮಾಹಿತಿ ಹಾಗೂ ಆಡಳಿತಾತ್ಮಕ ಪಾರದರ್ಶಕತೆಗಾಗಿ ಒಕ್ಕೂಟವು ತಂತ್ರಜ್ಞಾನಕ್ಕೆ ಮೊರೆ ಹೋಗುತ್ತಿದೆ. ಈಗಾಗಲೇ ಹಾಲು ಸಂಗ್ರಹ, ದಾಸ್ತಾನು ಮತ್ತಿತರ ಮಾಹಿತಿಗಾಗಿ ಸಾಫ್ಟ್‌ವೇರ್‌ ಅನ್ನು ಆಯ್ದ ಸಂಘಗಳಲ್ಲಿ ಅನುಷ್ಠಾನಗೊಳಿಸಿ ಪ್ರಾಯೋಗಿಕವಾಗಿ ಪರಿಶೀಲಿಸುತ್ತಿದೆ.

728 ಸೊಸೈಟಿ ಹಾಗೂ 129 ಬಲ್ಕ್ ಮಿಲ್ಕ್‌ ಕೂಲರ್‌ಗಳಲ್ಲಿ ದಾಸ್ತಾನಿನ ಮಾಹಿತಿ ಕ್ಷಣಾರ್ಧದಲ್ಲಿ ಸಿಗುವಂತೆ ತಂತ್ರಜ್ಞಾನ ಅಭಿವೃದ್ಧಿ ಪಡಿಸಲಾಗಿದೆ.

ADVERTISEMENT

ಇದೇ ವೇಳೆ ಒಕ್ಕೂಟದ ಸಾಫ್ಟ್‌ವೇರ್ ಸಮಾಲೋಚಕ ಕೇಶವ ಪ್ರಸಾದ್ ಸೂರ್ಡೇಲು ಅವರು ಪುತ್ತೂರಿನ ವಿವೇಕಾನಂದ ಕಾಲೇಜು ವಿದ್ಯಾರ್ಥಿ ಶ್ರೀನಿಧಿ ಆರ್‌.ಎಸ್. ಜೊತೆಗೂಡಿ ಮೈ ಎಂಪಿಸಿಎಸ್ (ಮಿಲ್ಕ್‌ ಪ್ರೊಡ್ಯೂಸರ್ಸ್‌ ಕೊ ಆಪರೇಟಿವ್ ಸೊಸೈಟಿ) ಪ್ರತ್ಯೇಕ ಆ್ಯಪ್ ಅಭಿವೃದ್ಧಿ ಪಡಿಸಿದ್ದಾರೆ. ಈ ಆ್ಯಪ್ ಮೂಲಕ ಹೈನುಗಾರರು ಸೊಸೈಟಿಗೆ ಹಾಕಿದ ಹಾಲಿನ ಪ್ರಮಾಣ, ಸಮಯ, ಕೊಬ್ಬಿನಾಂಶ, ಸಿಎಲ್‌ಆರ್, ಎಸ್ಎನ್‌ಎಫ್‌, ದರ, ಒಟ್ಟು ಮೊತ್ತ ಸಹಿತ ಒಂದು ವರ್ಷದ ಮಾಹಿತಿಯನ್ನು ಬೆರಳ ತುದಿಯಲ್ಲೇ ಪರಿಶೀಲಿಸಬಹುದಾಗಿದೆ. ಸಮಗ್ರ ಗುಣಾತ್ಮಕ ಹಾಗೂ ‍ಪರಿಮಾಣಾತ್ಮಕ ಮಾಹಿತಿಯನ್ನು ಪಡೆಬಹುದಾಗಿದೆ. ಇದನ್ನು ಈಗಾಗಲೇ ಸುಮಾರು 35 ಸೊಸೈಟಿಗಳ 3 ಸಾವಿರ ಮಂದಿ ಪ್ರಾಯೋಗಿಕವಾಗಿ ಬಳಸುತ್ತಿದ್ದಾರೆ. ಅಲ್ಲದೇ, ಹೈನುಗಾರರಿಗೆ ಬೇಕಾದ ಇತರ ಸಲಹೆ–ಸೂಚನೆಗಳನ್ನು ನೀಡಲೂ ಅವಕಾಶ ಇದೆ. ಹೆಚ್ಚಿನ ಮಾಹಿತಿಗೆ ಮೊ. 73534 07473 ಸಂಪರ್ಕಿಸಬಹುದು.

ಒಕ್ಕೂಟದಲ್ಲಿ ಸುಮಾರು 1.40 ಲಕ್ಷ ಸದಸ್ಯರಿದ್ದಾರೆ. ಈ ಪೈಕಿ 70ರಿಂದ 80 ಸಾವಿರ ಮಂದಿ ಹಾಲು ಹಾಕುತ್ತಿದ್ದಾರೆ. ಎಲ್ಲರಿಗೂ ಕ್ಷಣಾರ್ಧದಲ್ಲಿ ಮಾಹಿತಿ ದೊರೆಯುವಂತೆ ಮಾಡುವುದು ಹಾಗೂ ಎಲ್ಲ ಮಾಹಿತಿಯನ್ನು ಏಕಕಾಲಕ್ಕೆ ಎಲ್ಲರಿಗೂ ಲಭ್ಯವಾಗುವಂತೆ ಮಾಡುವ ಪ್ರಯತ್ನ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.