ಮಂಗಳೂರು: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಭಾರಿ ತೆರೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಹೀಗಾಗಿ ಉಳ್ಳಾಲದಲ್ಲಿ ಕಡಲ್ಕೊರೆತ ತೀವ್ರವಾಗಿದೆ. ಉಚ್ಚಿಲ ಬಟ್ಟಪ್ಪಾಡಿ ಭಾಗದಲ್ಲಿ 67 ಮನೆಗಳು ಅಪಾಯಕ್ಕೆ ಸಿಲುಕಿವೆ. ಸೋಮೇಶ್ವರ ಹಿಂದೂ ಸ್ಮಶಾನದ ತಡೆಗೋಡೆ ಸಮುದ್ರ ಪಾಲಾಗಿದೆ.
ಗಾಳಿ, ಮಳೆ ಹಾಗೂ ಕಡಲ್ಕೊರೆತ ಅಧಿಕವಾದಲ್ಲಿ ಸ್ಥಳೀಯರಿಗೆ ತುರ್ತಾಗಿ ತಂಗಲು ಉಳ್ಳಾಲದಲ್ಲಿ ಮೂರು ಹಾಗೂ ಸೋಮೇಶ್ವರದಲ್ಲಿ ಒಂದು ಕಾಳಜಿ ಕೇಂದ್ರ ತೆರೆಯಲಾಗಿದೆ.
‘ಉಳ್ಳಾಲ, ಸೋಮೇಶ್ವರ ಭಾಗದಲ್ಲಿ ಈಗಾಗಲೇ ಸಹಾಯವಾಣಿ ಆರಂಭಿಸಲಾಗಿದೆ. ಯಾವುದೇ ಪರಿಸ್ಥಿತಿ ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್ ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯ ಮರವಂತೆಯಲ್ಲೂ ಕಡಲ್ಕೊರೆತದಿಂದ ಮೂರು ದಿನಗಳಿಂದ ತೊಂದರೆಯಾಗಿದೆ. ಅಲೆಗಳ ಅಬ್ಬರದಿಂದ 100ಕ್ಕೂ ಅಧಿಕ ತೆಂಗಿನ ಮರಗಳು ಉರುಳಿವೆ. ರಸ್ತೆ ಕೊಚ್ಚಿ ಹೋದರೆ ಮೀನುಗಾರರ 25 ಮನೆಗಳಿಗೆ ಅಪಾಯವಾಗುವ ಸಾಧ್ಯತೆ ಇದೆ. ಕಾಪು ತಾಲ್ಲೂಕಿನ ಪಡುಬಿದ್ರಿ, ಹೆಜಮಾಡಿ, ಬಡಾ, ಮೂಳೂರು, ತೆಂಕದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದೆ.
ಮಳೆ: ಗುರುವಾರ ರಾತ್ರಿ ದಕ್ಷಿಣ ಕನ್ನಡ ಜಿಲ್ಲೆಯ ದಿಡುಪೆ, ಚಾರ್ಮಾಡಿ, ಮುಂಡಾಜೆ, ನೇತ್ರಾವತಿ ನದಿ ಪಾತ್ರದ ಪ್ರದೇಶಗಳಲ್ಲಿ ಜಡಿ ಮಳೆಯಾಗಿದೆ. ನದಿ, ತೊರೆಗಳು ತುಂಬಿ ಹರಿಯುತ್ತಿವೆ. ತೋಟಗಳಿಗೆ ನೀರು ನುಗ್ಗಿದ್ದು, ಕೃಷಿಗೆ ಹಾನಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.