ADVERTISEMENT

ಹೆಚ್ಚುತ್ತಿಲ್ಲ ಅಡಿಕೆ ಧಾರಣೆ: ಬೆಳೆಗಾರರಲ್ಲಿ ನಿರಾಸೆ

ಪ್ರವೀಣ ಕುಮಾರ್‌ ಪಿ ವಿ
Published 5 ಡಿಸೆಂಬರ್ 2023, 5:55 IST
Last Updated 5 ಡಿಸೆಂಬರ್ 2023, 5:55 IST
ಚಾಲಿ ಅಡಿಕೆ
ಚಾಲಿ ಅಡಿಕೆ   

ಮಂಗಳೂರು: ಕೇಂದ್ರ ಸರ್ಕಾರ ಅಡಿಕೆಯ ಕನಿಷ್ಠ ಆಮದು ದರವನ್ನು ಪ್ರತಿ ಕೆ.ಜಿ.ಗೆ ₹ 100ರಷ್ಟು ಹೆಚ್ಚಳ ಮಾಡಿದ್ದರಿಂದ ಅಡಿಕೆ ಧಾರಣೆ ಜಾಸ್ತಿ ಆಗಬಹುದು ಎಂಬ ಬೆಳೆಗಾರರ ನಿರೀಕ್ಷೆ ಹುಸಿಯಾಗಿದೆ. ಕಳೆದ ವರ್ಷದ ಈ ಅವಧಿಗೆ ಹೋಲಿಸಿದರೆ ಈ ವರ್ಷ ಪ್ರತಿ ಕೆ.ಜಿ. ಹಳೆ ಅಡಿಕೆ ದರ ಸುಮಾರು ₹ 100ರಷ್ಟು ಕಡಿಮೆ ಇದೆ.

ಅಡಿಕೆ ಆಮದಿನ ಕನಿಷ್ಠ ದರವನ್ನು ಪ್ರತಿ ಕೆ.ಜಿ.ಗೆ ₹251ರಿಂದ ₹351ಕ್ಕೆ ಹೆಚ್ಚಳ ಮಾಡಿ ಕೇಂದ್ರ ಸರ್ಕಾರ 2023ರ ಫೆಬ್ರುವರಿಯಲ್ಲಿ ಅಧಿಸೂಚನೆ ಹೊರಡಿಸಿತ್ತು. ಈ ನಿರ್ಧಾರವನ್ನು ಸ್ವಾಗತಿಸಿದ್ದ ಕೇಂದ್ರೀಯ ಅಡಿಕೆ ಮತ್ತು ಕೊಕ್ಕೊ ಮಾರುಕಟ್ಟೆ ಮತ್ತು ಸಂಸ್ಕರಣಾ ಸಹಕಾರಿ ಸಂಸ್ಥೆಯ (ಕ್ಯಾಂಪ್ಕೊ) ಪ್ರಮುಖರು ಇದರಿಂದ ಅಡಿಕೆ ಧಾರಣೆಯಲ್ಲಿ ಸುಧಾರಣೆಯಾಗಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದ್ದರು. 

2022ರ ನವೆಂಬರ್‌ ವೇಳೆಗೆ ಹಳೆ ಅಡಿಕೆ ದರವು ಪ್ರತಿ ಕೆ.ಜಿ.ಗೆ ₹540ರವರೆಗೂ ತಲುಪಿತ್ತು. ಪ್ರಸ್ತುತ ವರ್ತಕರು ಹಳೆ ಅಡಿಕೆಯನ್ನು ಪ್ರತಿ ಕೆ.ಜಿಗೆ ₹430ರಿಂದ ₹440ಕ್ಕೆ ಖರೀದಿಸುತ್ತಿದ್ದಾರೆ. ಹೊಸ ಅಡಿಕೆ ₹ 360ಕ್ಕೆ ಮಾರಾಟ ಆದರೆ ಹೆಚ್ಚು ಎಂಬ ಸ್ಥಿತಿ ಇದೆ. ಮೂರು ತಿಂಗಳಿಂದ ಹೆಚ್ಚೂ ಕಡಿಮೆ ಇದೇ ದರ ಇದೆ.

ADVERTISEMENT

‘ಪ್ರತಿ ವರ್ಷವೂ ದೀಪಾವಳಿ ವೇಳೆಗೆ ಅಡಿಕೆ ಧಾರಣೆಗೆ ಸ್ವಲ್ಪವಾದರೂ ಹೆಚ್ಚಾಗುತ್ತಿತ್ತು. ಈ ಸಲ ದೀಪಾವಳಿ ಕಳೆದ ಬಳಿಕವೂ ದರ ಹೆಚ್ಚಾಗಿಲ್ಲ. ಕಳೆದ ವರ್ಷದ ಅಡಿಕೆಯನ್ನು ಇಟ್ಟುಕೊಂಡು ಧಾರಣೆ ಹೆಚ್ಚಾಗಬಹುದು ಎಂಬ ನಿರೀಕ್ಷೆಯಲ್ಲಿ ನಾವಿದ್ದೇವೆ. ಕಳೆದ ವರ್ಷದಷ್ಟು ಅಲ್ಲದಿದ್ದರೂ ಪ್ರತಿ ಕೆ.ಜಿ.ಗೆ ₹500ರವರೆಗೆ ತಲುಪಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಈಗಿನ ಸ್ಥಿತಿ ನೋಡಿದರೆ ದರ ಹೆಚ್ಚಾಗುವ ಲಕ್ಷಣಗಳು ಕಾಣಿಸುತ್ತಿಲ್ಲ’ ಎನ್ನುತ್ತಾರೆ ಅಡಿಕೆ ಬೆಳೆಗಾರರಾದ ಪುತ್ತೂರಿನ ನಾರಾಯಣ ಭಟ್‌.

‘ಮಳೆ ಕಡಿಮೆ ಇದ್ದುದರಿಂದ ಈ ಸಲ ಕೊಳೆ ರೋಗದ ಕಾಟ ಕಡಿಮೆ ಇತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಫಸಲು ಜಾಸ್ತಿ ಏನೂ ಇಲ್ಲ. ಆದರೂ ಧಾರಣೆ ಹೆಚ್ಚಾಗಿಲ್ಲ’ ಎಂದರು.

‘ಕೋವಿಡ್‌ ಸಂದರ್ಭದಲ್ಲಿ ಕಳ್ಳಸಾಗಣೆಗೆ ಸಂಪೂರ್ಣ ಕಡಿವಾಣ ಬಿದ್ದ ಕಾರಣ ಅಡಿಕೆ ಧಾರಣೆ ಹೆಚ್ಚಳವಾಗಿತ್ತು. ಈಗ ಮತ್ತೆ ವಿದೇಶಗಳಿಂದ ಅಡಿಕೆ ಕಳ್ಳ ದಾರಿ ಮೂಲಕ ನಮ್ಮ ದೇಶದ ಮಾರುಕಟ್ಟೆಯನ್ನು ತಲುಪುತ್ತಿದೆ. ಹಾಗಾಗಿ ಧಾರಣೆ ಹೆಚ್ಚಾಗುತ್ತಿಲ್ಲ’ ಎನ್ನುತ್ತಾರೆ ಪಡ್ರೆಯ ಬೆಳೆಗಾರ ಶಿವಪ್ರಸಾದ್‌.  

‘ಕೇಂದ್ರ ಸರ್ಕಾರ ಅಡಿಕೆಯ ಕನಿಷ್ಠ ಆಮದು ದರವನ್ನು ಹೆಚ್ಚಳ ಮಾಡಿದಾಗ ಧಾರಣೆ ಹೆಚ್ಚಾಗುವ ಭರವಸೆ ಮೂಡಿತ್ತು. ಆದರೆ, ಅಡಿಕೆಯ ಕಳ್ಳಸಾಗಣೆಗೆ ಕಡಿವಾಣ ಬೀಳದ ಪರಿಣಾಮ ಬೆಳೆಗಾರರಿಗೆ ಇದರ ಪ್ರಯೋಜನ ಸಿಕ್ಕಿಲ್ಲ. ಬರ್ಮಾ, ನೇಪಾಳದಂತಹ ದೇಶಗಳಿಂದ ನಮ್ಮ ದೇಶದೊಳಗೆ ಅಡಿಕೆ ಅವ್ಯಾಹತವಾಗಿ ಕಳ್ಳಸಾಗಣೆ ಆಗುತ್ತಿದೆ. ಇದನ್ನು ತಡೆಗಟ್ಟಲು ಸರ್ಕಾರ ಕಟ್ಟುನಿಟ್ಟಿನ ಕ್ರಮವಹಿಸಬೇಕು’ ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಕಾರ್ಯದರ್ಶಿ ಮಹೇಶ ಪುಚ್ಚಪಾಡಿ ಒತ್ತಾಯಿಸಿದರು.

ಮೂರು ತಿಂಗಳುಗಳಿಂದ ಅಡಿಕೆ ಧಾರಣೆ ಸ್ಥಿರವಾಗಿದೆ. ಪ್ರತಿ ಕೆ.ಜಿಗೆ ₹ 5ರಿಂದ ₹ 10ರಷ್ಟು ಮಾತ್ರ ದರ ವ್ಯತ್ಯಯವಾಗುತ್ತಿದೆ. ಸದ್ಯಕ್ಕೆ ಧಾರಣೆ ಹೆಚ್ಚಳವಾಗುವ ಲಕ್ಷಣ ಇಲ್ಲ
ಎಚ್‌.ಎಂ.ಕೃಷ್ಣಕುಮಾರ್‌ ಕ್ಯಾಂಪ್ಕೊ ವ್ಯವಸ್ಥಾಪಕ ನಿರ್ದೇಶಕ
‘ಕ್ಷೇತ್ರ ವಿಸ್ತರಣೆ– ಧಾರಣೆಗೆ ಹೊಡೆತ’
‘ಇನ್ನು ಅಡಿಕೆ ಧಾರಣೆ ಹೆಚ್ಚಾಗುವುದು ಕಷ್ಟಸಾಧ್ಯ. ಕೋವಿಡ್‌ ಸಂದರ್ಭದಲ್ಲಿ ಅನೇಕ ಬೆಳೆಗಾರರು ಲಭ್ಯವಿದ್ದ ಜಮೀನಿನಲ್ಲಿ ಅಡಿಕೆ ಸಸಿಗಳನ್ನು ನೆಟ್ಟಿದ್ದಾರೆ. ಅಡಿಕೆ ಬೆಳೆಯುವ ಕ್ಷೇತ್ರ ಮತ್ತಷ್ಟು ವಿಸ್ತಾರವಾಗಿದೆ. ನೆಟ್ಟ ನಾಲ್ಕು ವರ್ಷಗಳಲ್ಲಿ ಅಡಿಕೆ ಫಸಲು ಬರುತ್ತದೆ. ಮುಂದಿನ ವರ್ಷದಿಂದ ಹೊಸ ಗಿಡಗಳ ಫಸಲು ಬರಲಾರಂಭಿಸಿದರೆ ಅಡಿಕೆ ದರ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆ ಹೆಚ್ಚು’ ಎಂದು ಬೆಟ್ಟಂಪಾಡಿಯ ರಮೇಶ್‌ ಗೌಡ ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.