ADVERTISEMENT

ತೇಜಸ್ವಿ ಪ್ರತಿಷ್ಠಾನದ ಅಧ್ಯಕ್ಷ ಸ್ಥಾನ ‌ನಿರಾಕರಿಸಿದ ನರೇಂದ್ರ ರೈ ದೇರ್ಲ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2022, 7:46 IST
Last Updated 25 ಆಗಸ್ಟ್ 2022, 7:46 IST
 ಬರಹಗಾರ ನರೇಂದ್ರ ರೈ ದೇರ್ಲ
ಬರಹಗಾರ ನರೇಂದ್ರ ರೈ ದೇರ್ಲ   

ಮಂಗಳೂರು: ಕೆ.ಪಿ.‌ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಅಧ್ಯಕ್ಷ ಸ್ಥಾನವನ್ನು ಬರಹಗಾರ ನರೇಂದ್ರ ರೈ ದೇರ್ಲ ಅವರು ನಯವಾಗಿ ನಿರಾಕರಿಸಿದ್ದಾರೆ.

ಈ ಕುರಿತು ಫೇಸ್‌ಬುಕ್ ವಾಲ್‌ನಲ್ಲಿ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

'ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ 'ಕೆ.ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ'ದ ಅಧ್ಯಕ್ಷನನ್ನಾಗಿ ನನ್ನನ್ನು ನೇಮಕ ಮಾಡಿದ ಸುದ್ದಿ ಮಾಧ್ಯಮಗಳ ಮೂಲಕ ನನಗೆ ತಿಳಿಯಿತು. ತೇಜಸ್ವಿ ಅವರ ಒಡನಾಟ ಮತ್ತು ಅವರ ಕುರಿತು ಒಂದಷ್ಟು ಬರವಣಿಗೆ ಅವರ ಪತ್ರಗಳ ಸಂಪಾದನೆಯನ್ನು ನಾನು ಮಾಡಿರುವುದು ನಿಜ.

ADVERTISEMENT

ಈ ಕಾರಣಕ್ಕಾಗಿಯೇ ಸರಕಾರ ನನ್ನನ್ನು ಆಯ್ಕೆ ಮಾಡಿದೆ ಎಂದು ಅನೇಕ ಸ್ನೇಹಿತರು, ಬಂಧುಗಳು, ತೇಜಸ್ವಿ ಓದುಗರು ಅಭಿನಂದಿಸಿ ನನಗೆ ಸಂದೇಶ ಕಳಿಸಿದ್ದಾರೆ. ಈ ಕುರಿತು ಘನ ಸರಕಾರಕ್ಕೂ ನನ್ನ ಧನ್ಯವಾದಗಳು .ಆದರೆ ವೈಯಕ್ತಿಕ ಕಾರಣಗಳಿಂದಾಗಿ ಸಂಬಂಧಿಸಿದ ಜವಾಬ್ದಾರಿಯನ್ನು ನಾನು ಸ್ವೀಕರಿಸುವುದಿಲ್ಲ.

ಈ ಕುರಿತು ಸಂಬಂಧಿಸಿದ ಯಾವುದೇ ಇಲಾಖೆಯ ವ್ಯಕ್ತಿಗಳು, ಅಧಿಕಾರಿಗಳು ನನ್ನನ್ನು ಈವರೆಗೆ ಸಂಪರ್ಕಿಸಿಯೂ ಇಲ್ಲ .ಅಂತಹ ಪತ್ರ- ಆದೇಶ ನನಗೆ ಬಂದಿಲ್ಲ. ಒಂದು ವೇಳೆ ಅದು ಬಂದಾಗಲೂ ನನ್ನ ಈ ಅಭಿಪ್ರಾಯ ಬದಲಾಗುವುದಿಲ್ಲ. ದಯವಿಟ್ಟ ಯಾರೂ ಕೂಡಾ ಇದನ್ನು ನನ್ನ ಅಹಂ, ಉದ್ಧಟತನವೆಂದು ಭಾವಿಸಬಾರದು.

ಇಂಥ ಸರಳ ಸೌಜನ್ಯ- ನಿರಾಕರಣೆಗೆ ನನಗೆ ತೇಜಸ್ವಿ ಅವರೇ ಸ್ಪೂರ್ತಿ. ಸರಕಾರ ಮುಂದೆ ಯಾರನ್ನೇ ಬೇಕಾದರೂ ಆಯ್ಕೆ ಮಾಡಲಿ, ತೇಜಸ್ವಿಯ ವಿಚಾರದಲ್ಲಿ ಅವರಿಗೆ ನನ್ನ ಸಹಾಯ ಇದ್ದೇ ಇದೆ.

ಆದರೆ ಇಂಥ ಪ್ರತಿಷ್ಠಾನ ಪ್ರಾಧಿಕಾರ ಅಕಾಡೆಮಿಗಳಿಗೆ ನೇಮಕ ಮಾಡುವಾಗ ಸೌಜನ್ಯಕ್ಕಾದರೂ ಅವರನ್ನು ಸಂಪರ್ಕಿಸಿ ಪೂರ್ವಾನುಮತಿಯನ್ನು ಪಡೆಯುವುದು ಹೆಚ್ಚು ಸೂಕ್ತ. ಆಗ ಇಂತಹ ಅನಪೇಕ್ಷಿತ ಮುಜುಗರವೂ ತಪ್ಪುತ್ತದೆ.

ದಯವಿಟ್ಟು ಸಂಸ್ಕೃತಿ ಇಲಾಖೆ ಇದನ್ನು ಗಮನಿಸಬೇಕೆಂದು ವಿನಮ್ರ ಕೋರಿಕೆ' ಎಂದು ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.