ADVERTISEMENT

ಮಂಗಳೂರು: ಪರಿಶಿಷ್ಟರ ಶೋಷಣೆ ಈಗಲೂ ನಿಂತಿಲ್ಲ

ಬಾಬು ಜಗಜೀವನ್ ರಾಂ ಜಯಂತಿ ಆಚರಣೆಯಲ್ಲಿ ಸಚಿವ ದಿನೇಶ್‌ ಗುಂಡೂರಾವ್‌ ಬೇಸರ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2025, 7:37 IST
Last Updated 6 ಏಪ್ರಿಲ್ 2025, 7:37 IST
ಕಾರ್ಯಕ್ರಮದಲ್ಲಿ ದಿನೇಶ್ ಗುಂಡೂರಾವ್‌ ಮಾತನಾಡಿದರು. ಬಿ.ಎಸ್.ಹೇಮಲತಾ, ಭರತ ಮುಂಡೋಡಿ, ಶಿವಕುಮಾರ್ ಮಗದ, ಮಂಜುನಾಥ ಭಂಡಾರಿ, ಮುಲ್ಲೈ ಮುಗಿಲನ್ ಎಂ.ಪಿ. ಅನುಪಮ್ ಅಗ್ರವಾಲ್ ಭಾಗವಹಿಸಿದ್ದರು
ಕಾರ್ಯಕ್ರಮದಲ್ಲಿ ದಿನೇಶ್ ಗುಂಡೂರಾವ್‌ ಮಾತನಾಡಿದರು. ಬಿ.ಎಸ್.ಹೇಮಲತಾ, ಭರತ ಮುಂಡೋಡಿ, ಶಿವಕುಮಾರ್ ಮಗದ, ಮಂಜುನಾಥ ಭಂಡಾರಿ, ಮುಲ್ಲೈ ಮುಗಿಲನ್ ಎಂ.ಪಿ. ಅನುಪಮ್ ಅಗ್ರವಾಲ್ ಭಾಗವಹಿಸಿದ್ದರು   

ಮಂಗಳೂರು: ‘ಪರಿಶಿಷ್ಟ ಸಮುದಾಯವರ ಶೋಷಣೆ ಈಗಲೂ ಪೂರ್ತಿ ನಿಂತಿದೆ ಎನ್ನುವ ಸ್ಥಿತಿ ಇಲ್ಲ. ಈಗಲೂ ಅಸ್ಪೃಶ್ಯತೆಯಂತಹ ಅಮಾನವೀಯ ಪದ್ಧತಿಯನ್ನು ಆಚರಿಸುವವರು ಕೆಲವೆಡೆ ಇದ್ದಾರೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಬೇಸರ ವ್ಯಕ್ತಪಡಿಸಿದರು.

ಬಾಬು ಜಗಜೀವನರಾಂ ಅವರ 118ನೇ ಜಯಂತಿಯ ಅಂಗವಾಗಿ ಜಿಲ್ಲಾಡಳಿತದ ವತಿಯಿಂದ ಇಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

‘ಬಾಂಗ್ಲಾ ವಿಮೋಚನಾ ಯುದ್ಧದ ಸಂದರ್ಭದಲ್ಲಿ ಗೃಹಸಚಿವರಾಗಿದ್ದ ಬಾಬು ಜಗಜೀವನ್‌ ರಾಂ ಅವರು ಇಂದಿರಾ ಗಾಂಧಿ  ಸಂಪುಟದಲ್ಲಿ ಕೃಷಿ ಸಚಿವರಾಗಿ ಹಸಿರು ಕ್ರಾಂತಿಗೆ ಕಾರಣಿಕರ್ತರಾಗಿದ್ದರು. ದೇಶದ ಭದ್ರತೆ ಹಾಗೂ ಆಹಾರ ಭದ್ರತೆಗಾಗಿ ಕೊಡುಗೆ ನೀಡಿದ ಹೆಗ್ಗಳಿಕೆ ಅವರದು.  ಉಪಪ್ರಧಾನಿಯಾಗಿದ್ದ ಅವರು ಸಚಿವರಾಗಿ ಐದು ಪ್ರಧಾನಿಗಳ ಜೊತೆ ಕೆಲಸ ಮಾಡಿದ್ದ ಅನುಭವಿ ರಾಜಕಾರಣಿ. ಬಿ.ಆರ್‌.ಅಂಬೇಡ್ಕರ್‌ ಅವರಂತೆಯೇ ಮುತ್ಸದ್ದಿಯಾಗಿದ್ದ ಅವರು ಕಾರ್ಮಿಕ ಸಚಿವರಾಗಿ ಕಾರ್ಮಿಕ ಕಾನೂನು ರೂಪಿಸುವಲ್ಲಿ ಹಾಗೂ ಇಎಸ್‌ಐ ವ್ಯವಸ್ಥೆ ಜಾರಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು’ ಎಂದರು.

ADVERTISEMENT

‘ದೇಶದಾದ್ಯಂತ ಜಾತಿ ಧರ್ಮದ ಹೆಸರಿನಲ್ಲಿ ಪರಸ್ಪರ ದ್ವೇಷ ಹುಟ್ಟಿಸಲಾಗುತ್ತಿದೆ. ಹಿಂಸೆಗೆ ಹಾಗೂ ವಿಭಜನೆಗೆ ಪ್ರೊತ್ಸಾಹ ನೀಡುವುದು ದೇಶದ ಬೆಳವಣಿಗೆಯ ಹಾಗೂ ಐಕ್ಯತೆ ದೃಷ್ಟಿಯಿಂದ ಒಳ್ಳೆಯದಲ್ಲ. ಎಲ್ಲರನ್ನು ಪ್ರೀತಿ ವಿಶ್ವಾಸದಿಂದ ಕಾಣುವ ವಾತಾವರಣ ರೂಪಿಸಬೇಕು. ಎಲ್ಲರಿಗೂ ನ್ಯಾಯ ಒದಗಿಸುವ, ಸಂಕಷ್ಟದಲ್ಲಿರುವವರನ್ನು ಸಂತೈಸುವ ಹಾಗೂ ಬಡವರನ್ನು ಮೇಲಕ್ಕೆತ್ತುವ ಸಿದ್ಧಾಂತದಲ್ಲಿ ನಂಬಿಕೆ ಹೊಂದಿರುವ ಸರ್ಕಾರ ನಮ್ಮದು’ ಎಂದರು.

ಆಶಯ ಭಾಷಣ ಮಾಡಿದ ಮೀನುಗಾರಿಕೆ ಕಾಲೇಜಿನ ಪ್ರಾಧ್ಯಾಪಕ  ಶಿವಕುಮಾರ್ ಮಗದ, ‘ದೇಶದ ಜನರ ವಂಶವಾಹಿಗಳಲ್ಲೇ ಜಾತಿಯತೆ ಇದೆ. ಅಸ್ಪೃಶ್ಯತೆ ಸ್ವಲ್ಪ ಮಟ್ಟಿಗೆ ನಿವಾರಣೆ ಆಗಿದ್ದರೆ, ಅದು ಕಾನೂನಿನ ಭಯದಿಂದ ಮಾತ್ರ. ಮನೆಯೊಳಗೆ ಜಾತಿಯತೆಯನ್ನು ಈಗಲೂ ಪೋಷಿಸಲಾಗುತ್ತಿದೆ. ಕೆಲವರು ನಮ್ಮನ್ನು ತಿರಸ್ಕರಿಸಬಹುದು. ಆದರೆ, ಸ್ವಾಭಿಮಾನದಿಂದ‌ ಬದುಕುವ ಆಯ್ಕೆಯನ್ನು ನಾವೆಲ್ಲರೂ ಉಳಿಸಿಕೊಳ್ಳಬೇಕು’ ಎಂದರು.

ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ದಕ್ಷಿಣ ಕನ್ನಡ ಜಿಲ್ಲಾ ಗ್ಯಾರಂಟಿ ಅನುಷ್ಠಾನನ ಪ್ರಾಧಿಕಾರದ ಅಧ್ಯಕ್ಷ ಭರತ್ ಮುಂಡೋಡಿ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಮಂಗಳೂರು ಪೊಲೀಸ್ ಕಮಿಷನರ್‌ ಅನುಪಮ್ ಅಗ್ರವಾಲ್ ಭಾಗವಹಿಸಿದ್ದರು. ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಬಿ.ಎಸ್.ಹೇಮಲತಾ ಸ್ವಾಗತಿಸಿದರು. ಸಹಾಯಕ ನಿರ್ದೇಶಕ ಸುರೇಶ್ ಅಡಿಗ ಧನ್ಯವಾದ ಸಲ್ಲಿಸಿದರು.

‘ಎಲ್ಲ ಪೌರಕಾರ್ಮಿಕರು ಸರ್ಕಾರಿ ನೌಕರರು’

‘ಎಲ್ಲ ಪೌರಕಾರ್ಮಿಕರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಲು ಸರ್ಕಾರ ತೀರ್ಮಾನಿಸಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಇದು ಈಗಾಗಲೇ ಜಾರಿಯಾಗಿದೆ. ರಾಜ್ಯದ ಇತರ ಮಹಾನಗರ ಪಾಲಿಕೆಗಳಲ್ಲಿ ಇದನ್ನು ಹಂತ ಹಂತವಾಗಿ ಜಾರಿಗೊಳಿಸಲಾಗುತ್ತದೆ’ ಎಂದು ದಿನೇಶ್ ಗುಂಡೂರಾವ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.