ADVERTISEMENT

ಬಾಲ್ ಬ್ಯಾಡ್ಮಿಂಟನ್ ಟೂರ್ನಿ: ಫೈನಲ್‌ ಪಂದ್ಯ ಕಣ್ತುಂಬಿಕೊಂಡ ಜನಸಾಗರ

ಉಪ್ಪಿನಂಗಡಿ: ಅಖಿಲ ಭಾರತ ಅಂತರ ವಿವಿ ಬಾಲ್ ಬ್ಯಾಡ್ಮಿಂಟನ್‌ಗೆ ಸಂಭ್ರಮದ ತೆರೆ

ಸಿದ್ದಿಕ್ ನೀರಾಜೆ
Published 18 ಜನವರಿ 2023, 5:39 IST
Last Updated 18 ಜನವರಿ 2023, 5:39 IST
ರನ್ನರ್ ಅಪ್ ಆದ ಮಂಗಳೂರು ವಿವಿ ತಂಡದ ಆಟಗಾರರು ಪ್ರಶಸ್ತಿಯೊಂದಿಗೆ ಸಂಭ್ರಮಿಸಿದರು
ರನ್ನರ್ ಅಪ್ ಆದ ಮಂಗಳೂರು ವಿವಿ ತಂಡದ ಆಟಗಾರರು ಪ್ರಶಸ್ತಿಯೊಂದಿಗೆ ಸಂಭ್ರಮಿಸಿದರು   

ಉಪ್ಪಿನಂಗಡಿ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ನಡೆದ ಪುರುಷರ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಬಾಲ್ ಬ್ಯಾಡ್ಮಿಂಟನ್ ಟೂರ್ನಿಗೆ ಮಂಗಳವಾರ ತೆರೆ ಬಿತ್ತು. ಮಂಗಳೂರು ಸಂಜೆ ನಡೆದ ಮಂಗಳೂರು ವಿಶ್ವವಿದ್ಯಾಲಯ ಮತ್ತು ಎಸ್.ಆರ್.ಎ.ಎಂ. ಚೆನೈ ತಂಡಗಳ ನಡುವಿನ ಫೈನಲ್ ಪಂದ್ಯದ ರೋಚಕ ಕ್ಷಣಗಳನ್ನು ಸಾವಿರಾರು ಜನರು ಕಣ್ತುಂಬಿಕೊಂಡರು.

ಸಂಜೆ 4 ಗಂಟೆ ಆಗುತ್ತಲೇ ಕ್ರೀಡಾಂಗಣದಲ್ಲಿ ಕಿಕ್ಕಿರಿದು ಸೇರಿದ ಜನರು, ಕೇಕೆ, ಸಿಳ್ಳೆಗಳ ಮೂಲಕ ತಮ್ಮ ನೆಚ್ಚಿನ ತಂಡವನ್ನು ಪ್ರೋತ್ಸಾಹಿಸಿ ಪಂದ್ಯ ವೀಕ್ಷಣೆ ಮಾಡಿದರು. ಪಂದ್ಯ ಮುಗಿದರೂ ಸಮಾರೋಪ ಮುಗಿಯುವರೆಗೆ ಸ್ಥಳದಲ್ಲೇ ಇದ್ದು, ರಾಷ್ಟ್ರಮಟ್ಟದ ಕ್ರೀಡಾಕೂಟವನ್ನು ಅವಿಸ್ಮರಣೀಯ ಅನುಭವವಾಗಿಸಿಕೊಂಡರು.

ಸಮಾರೋಪದಲ್ಲಿ ಮಾತನಾಡಿದ ಆಳ್ವಾಸ್ ಎಜುಕೇಷನ್ ಫೌಂಡೇಶನ್‌ನ ಆಡಳಿತ ನಿರ್ದೇಶಶಕ ವಿವೇಕ್ ಆಳ್ವ, ‘ಬಾಲ್ ಬ್ಯಾಡ್ಮಿಂಟನ್‌ಗೆ ಅಂತರರಾಷ್ಟ್ರೀಯ ಮಾನ್ಯತೆ ಸಿಗುವಂತಾಗಬೇಕು. ಸರ್ಕಾರಿ ಕಾಲೇಜಿನಲ್ಲಿ ಕೂಡ ಅಚ್ಚುಕಟ್ಟಾಗಿ, ಸುಂದರವಾಗಿ ರಾಷ್ಟ್ರಮಟ್ಟದ ಕ್ರೀಡಾಕೂಟವನ್ನು ಆಯೋಜಿಸಬಹುದು ಎಂಬುದಕ್ಕೆ ಇಲ್ಲಿ ನಡೆದ ಕ್ರೀಡಾ ಕೂಟವೇ ಸಾಕ್ಷಿ’ ಎಂದರು.

ADVERTISEMENT

ಮಂಗಳೂರು ವಿವಿಯ ಕುಲಸಚಿವ ಡಾ. ಕಿಶೋರ್ ಕುಮಾರ್ ಸಿ.ಕೆ., ಬಾಲ್ ಬ್ಯಾಡ್ಮಿಂಟನ್‌ನಲ್ಲಿ ಏಕಲವ್ಯ ಪ್ರಶಸ್ತಿ ಪುರಸ್ಕೃತ ಜಿ.ಬಿ. ನಾಗರಾಜ್ ಮಾತನಾಡಿದರು. ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ ಇದ್ದರು. ಕ್ರೀಡಾ ಸಾಧಕರನ್ನು ಗೌರವಿಸಲಾಯಿತು.

ಮಂಗಳೂರು ವಿವಿಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಜೆರಾಲ್ಡ್ ಎಸ್. ಡಿಸೋಜ ಸ್ವಾಗತಿಸಿದರು. ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ. ಸುಬ್ಬಪ್ಪ ಕೈಕಂಬ ವಂದಿಸಿದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ, ಕ್ರೀಡಾಕೂಟದ ಸಂಚಾಲಕ ಪ್ರವೀಣ್ ಕುಮಾರ್, ಇಂಡಿಯನ್ ಓವರ್‌ಸೀಸ್‌ ಬ್ಯಾಂಕ್‌ನ ಮುತ್ತು ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.