ADVERTISEMENT

ಬಂಟ್ವಾಳ: ಮಲಿನಗೊಳ್ಳುತ್ತಿದೆ ನೇತ್ರಾವತಿ ನದಿ ಒಡಲು

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2025, 6:56 IST
Last Updated 2 ಏಪ್ರಿಲ್ 2025, 6:56 IST
ಬಂಟ್ವಾಳ ತಾಲ್ಲೂಕಿನ ಪುರಸಭೆ ವ್ಯಾಪ್ತಿಯ ಹಲವೆಡೆ ಒಳಚರಂಡಿ ನೀರು ನೇತ್ರಾವದಿ ನದಿ ಒಡಲು ಸೇರುತ್ತಿದೆ
ಬಂಟ್ವಾಳ ತಾಲ್ಲೂಕಿನ ಪುರಸಭೆ ವ್ಯಾಪ್ತಿಯ ಹಲವೆಡೆ ಒಳಚರಂಡಿ ನೀರು ನೇತ್ರಾವದಿ ನದಿ ಒಡಲು ಸೇರುತ್ತಿದೆ   

ಬಂಟ್ವಾಳ: ಇಲ್ಲಿನ ಪುರಸಭೆ ವ್ಯಾಪ್ತಿಯಲ್ಲಿ 14 ವರ್ಷಗಳಿಂದ ನಡೆಯುತ್ತಿರುವ ಸಮಗ್ರ ಒಳಚರಂಡಿ ನಿರ್ಮಾಣ ಕಾಮಗಾರಿ ಬಗ್ಗೆ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಯುತ್ತಲೇ ಇದೆ. ಆದರೆ, 12 ಕಡೆ ಒಳಚರಂಡಿ ನೀರು ಬೃಹತ್ ಗಾತ್ರದ ಸಿಮೆಂಟ್ ಪೈಪ್‌ನ ಮೂಲಕ ನೇರವಾಗಿ ನೇತ್ರಾವದಿ ನದಿ ಒಡಲು ಸೇರುತ್ತಿರುವ ಬಗ್ಗೆ ಆಕ್ರೋಶ ಕೇಳಿ ಬಂದಿದೆ.

ಮಂಗಳೂರು ಮಹಾನಗರ ಪಾಲಿಕೆಗೆ ನಿರಂತರ ಕುಡಿಯುವ ನೀರು ಪೂರೈಸುವ ಮೂಲಕ ಜಿಲ್ಲೆಯ ಜೀವನದಿಯಾಗಿ ಗುರುತಿಸಿಕೊಂಡ ನೇತ್ರಾವತಿ ನದಿ ನೀರು ಕಲುಷಿತಗೊಂಡು ಸಾಂಕ್ರಾಮಿಕ ರೋಗ ಹರಡುವ ಆತಂಕ ವ್ಯಕ್ತವಾಗಿದೆ.

ಬಿ.ಸಿ.ರೋಡು ನಗರದಲ್ಲಿ ವಸತಿ ಸಂಕೀರ್ಣ, ಮನೆ, ಹೋಟೆಲ್‌ಗಳ ಮಲಿನ ನೀರು ಚರಂಡಿಯ ಮೂಲಕ ನೇತ್ರಾವತಿ ನದಿ ಸೇರಿದರೆ, ಇನ್ನೊಂದೆಡೆ ಪ್ಲಾಸ್ಟಿಕ್, ಮತ್ತಿತರ ತ್ಯಾಜ್ಯ ವಸ್ತುಗಳು ನದಿ ಪಾಲಾಗುತ್ತಿವೆ. ಬಂಟ್ವಾಳದ ಬಡ್ಡಕಟ್ಟೆ ಮೀನು ಮಾರುಕಟ್ಟೆ, ಪಾಣೆಮಂಗಳೂರು ಮೀನು ಮಾರುಕಟ್ಟೆ, ಬಿ.ಸಿ.ರೋಡು, ಶಾಂತಿಯಂಗಡಿ, ಕೈಕುಂಜೆ, ಬಸ್ತಿಪಡ್ಪು, ಕಂಚಿಕಾರಪೇಟೆ, ಗೂಡಿನ ಬಳಿ, ಪುರಸಭೆ ಸಮೀಪದ ನೆರೆ ವಿಮೋಚನಾ ರಸ್ತೆ, ಬಡ್ಡಕಟ್ಟೆ, ತಿರುಮಲ ವೆಂಕಟರಮಣ ಮತ್ತು ಮಹಾಲಿಂಗೇಶ್ವರ ದೇವಾಲಯ ಬಳಿ ಕೊಳಚೆ ನೀರು ನೇತ್ರಾವತಿ ನದಿ ಸೇರುತ್ತದೆ ಎಂಬ ಆರೋಪ ಕೇಳಿ ಬಂದಿದೆ.

ADVERTISEMENT

ಬಂಟ್ವಾಳ ಪುರಸಭೆಗೆ 2011ರಲ್ಲಿ ಮಂಜೂರಾದ ಪ್ರಥಮ ಹಂತದ ₹ 16.62 ಕೋಟಿ ವೆಚ್ಚದ ಒಳಚರಂಡಿ ಯೋಜನೆ ಕಾಮಗಾರಿ ಆರಂಭಗೊಂಡಿತ್ತು. ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಕಾಮಗಾರಿ ಆರಂಭಗೊಂಡಿದ್ದು, ಈ ಕಾಮಗಾರಿಯ ಗುಣಮಟ್ಟದ ಬಗ್ಗೆ ಲೋಕಾಯುಕ್ತಕ್ಕೂ ದೂರು ಸಲ್ಲಿಕೆಯಾಗಿತ್ತು.

ಇದೀಗ ಎರಡನೇ ಹಂತದ ಒಳಚರಂಡಿ ಯೋಜನೆ ಕಾಮಗಾರಿಗೆ ಮತ್ತೆ ₹ 56.54 ಕೋಟಿ ಮೊತ್ತದ ಅನುದಾನ ಮಂಜೂರಾಗಿ ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಳ್ಳದೆ ನೇತ್ರಾವತಿ ನದಿ ಕಲುಷಿತಗೊಳ್ಳುವುದಕ್ಕೆ ಕಡಿವಾಣ ಬಿದ್ದಿಲ್ಲ ಎನ್ನುತ್ತಾರೆ ಪುರಸಭೆ ವಿರೋಧ ಪಕ್ಷದ ನಾಯಕ ಎ.ಗೋವಿಂದ ಪ್ರಭು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.